ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಂದ್‌‌: ಯತ್ನಾಳ, ಕರವೇ ಜಟಾಪಟಿ

ಎಂದಿನಂತೆ ವ್ಯಾಪಾರ, ವಹಿವಾಟು ಮಾಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ
Last Updated 3 ಡಿಸೆಂಬರ್ 2020, 13:44 IST
ಅಕ್ಷರ ಗಾತ್ರ

ವಿಜಯಪುರ: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಡಿ.5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ನಡುವೆ ಜಟಾಪಟಿ ತಾರಕ್ಕೇರಿದೆ.

ಬಂದ್‌ ವಿಫಲಗೊಳಿಸಿ:

ವ್ಯಾಪಾರಸ್ಥರು, ಹಿಂದೂಪರ ಸಂಘಟನೆಗಳು, ಬೆಂಬಲಿಗರೊಂದಿಗೆ ನಗರದ ಫ.ಗು.ಹಳಕಟ್ಟಿ ಸಭಾಂಗಣದಲ್ಲಿ ಸಭೆ ನಡೆಸಿದ ಶಾಸಕ ಯತ್ನಾಳ, ಕರವೇ ಅಂದರೆ ಕಳ್ಳರ ರಕ್ಷಣಾ ವೇದಿಕೆ. ಅಯೋಗ್ಯರು ಕರೆ ನೀಡಿರುವ ಬಂದ್‌ ಅನ್ನು ವಿಫಲಗೊಳಿಸಬೇಕು ಎಂದು ಹೇಳಿದರು.

ಮರಾಠಾ ಸಮುದಾಯದವರು ಅಪ್ಪಟ ದೇಶಭಕ್ತರು, ಅವರ ಅಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ ಎಂದರು.

ಕರವೇ ಹೋರಾಟಗಾರರ ಜಾತಕ ನನಗೆ ಗೊತ್ತಿದೆ. ಒಬ್ಬರಿಗೂ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ವಾಟಾಳ್‌ಗೆ ಶುದ್ಧ ಕನ್ನಡ ಮಾತನಾಡಲು ಬರುವುದಿಲ್ಲ. ಇಂಗ್ಲಿಷ್‌ ಪದ ಬಳಸುತ್ತಾನೆ. ಆದರೆ, ನಾನು ಇಂದಿಗೂ ಕನ್ನಡದಲ್ಲೇ ಸಹಿ ಮಾಡುತ್ತೇನೆ ಎಂದು ಏಕ ವಚನದಲ್ಲೇ ಕಿಡಿಕಾರಿದರು.

‘ನನಗೆ ಯಾರೂ ಕನ್ನಡ ಕಲಿಸಲು ಬರಬೇಡಿ. ಕನ್ನಡದ ಹೆಸರಿನಲ್ಲಿ ದಂದೆ ಮಾಡುವವರ ವಿರುದ್ಧ ನಾನು ಸುಮ್ಮನಿರೆನು’ ಎಂದು ಎಚ್ಚರಿಕೆ ನೀಡಿದರು.

ಹಕ್ಕುಚ್ಯುತಿ ಮಂಡನೆ:

‘ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ವಾಟಾಳ್‌ಗೆ ತಿಳಿ ಹೇಳಿದ ಯತ್ನಾಳ್‌, ನನ್ನನ್ನು ಟೀಕೆ ಮಾಡುವ ಬರದಲ್ಲಿ ಏಕ ವಚನದಲ್ಲಿ ಮಾತನಾಡುವುದು, ಅಸಭ್ಯ ಪದಗಳನ್ನು ಪ್ರಯೋಗಿಸುವುದು ಮಾಡಿದರೆ ಸದನದಲ್ಲಿ ನಿಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.

‘ನಾನೇ ಹಕ್ಕು ಬಾಧ್ಯತಾ ಸಮಿತಿ ಸದಸ್ಯನಿದ್ದೇನೆ. ವಿಧಾನಸೌಧಕ್ಕೆ ಕರೆದು, ಛೀಮಾರಿ, ದಂಡ ಇಲ್ಲವೇ ಜೈಲಿಗೆ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ವಾಟಾಳ್‌ ನಾಗರಾಜ್, ಕನ್ನಡ ಪರ ಸಂಘಟನೆಗಳ ಮುಖಂಡರಿ‌ಗೆ ತಾಕತ್ತಿದ್ದರೆ ಕಲಬುರ್ಗಿ ಕಾರ್ಪೊರೇಷನ್‌, ರೈಲು ನಿಲ್ದಾಣದ ಮೇಲಿರುವ ಉರ್ದು ಬೋರ್ಡ್‌ ತೆಗೆಸಲಿ. ಕನ್ನಡ ಹೋರಾಟಗಾರರ ಮಕ್ಕಳು ಯಾವ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಅನ್ನೋದನ್ನು ಸರ್ಕಾರ ಬಹಿರಂಗ ಪಡಿಸಲಿ’ ಎಂದರು.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮುಖಂಡರಾದ ರಾಘವ ಅಣ್ಣಿಗೇರಿ, ಶಿವರುದ್ರ ಬಾಗಲಕೋಟೆ, ಗುರು ಗಚ್ಚಿನಮಠ, ಚಂದ್ರು ಚೌಧರಿ, ಗೋಪಾಲ ಮಹಾರಾಜರು ಸಭೆಯಲ್ಲಿ ಉಪಸ್ಥಿತರಿದ್ದರು.

‘ಯತ್ನಾಳ ಎಂಇಎಸ್‌ ಏಜೆಂಟ್‌’

ವಿಜಯಪುರ: ಕರವೇಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದಿರುವಶಾಸಕ ಬಸನಗೌಡ ಪಾಟೀಲ ಯತ್ನಾಳ ಎಂಇಎಸ್ ಏಜೆಂಟ್‌ ಆಗಿದ್ದಾರೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಮುಲ್ಲಾ ಕುಟುಕಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಇತಿಹಾಸ ತಿಳಿದುಕೊಂಡು ಯತ್ನಾಳ ಮಾತನಾಡಬೇಕು. ಕನ್ನಡ ಪರ ಸಂಘಟನೆಗಳ ಬಗ್ಗೆ ಯತ್ನಾಳಗೆ ಅಷ್ಟೊಂದು ಭಯ ಏಕೆ ಎಂಬುದು ತಿಳಿಯುತ್ತಿಲ್ಲ ಎಂದರು.

ಯತ್ನಾಳ ಅವರು ಪೊಲೀಸರನ್ನು ಬಳಸಿಕೊಂಡು ಬಂದ್‌ ವಿಫಲಗೊಳಿಸಲು ಯತ್ನಿಸುತ್ತಿದ್ದಾರೆ. ಯತ್ನಾಳ ಅವರು ವರ್ತಕರು, ವ್ಯಾಪಾರಸ್ಥರಲ್ಲಿ ಬಂದ್‌ ಕುರಿತು ಭಯ ಹುಟ್ಟಿಸುತ್ತಿದ್ದಾರೆ. ಸಿದ್ಧೇಶ್ವರ ಗುಡಿಯಿಂದ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.

ಕರವೇ ಮರಾಠಿಗರ ವಿರೋಧಿಯಲ್ಲ. ಮರಾಠಿಗಳ ಹಿತಚಿಂತಕರು.ಆದರೆ, ವೋಟಿಗಾಗಿ ಬಿಜೆಪಿ ಸರ್ಕಾರ ನಿಗಮ ಸ್ಥಾಪನೆ ಮಾಡುತ್ತಿದೆಯೇ ಹೊರತು, ನಿಜವಾದ ಕಾಳಜಿ ಇಲ್ಲ ಎಂದು ಹೇಳಿದರು.

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಕರ್ನಾಟಕ ಸರ್ಕಾರ ಎಂಇಎಸ್‌ಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದರು.

ಕರವೇಯಲ್ಲಿ ಎಲ್ಲ ಧರ್ಮ, ಜಾತಿಯವರು ಇದ್ದಾರೆ. ಕೇವಲ ಮುಸ್ಲಿಮರಿಲ್ಲ ಎಂಬುದನ್ನು ಶಾಸಕರು ಅರಿತುಕೊಳ್ಳಬೇಕು ಎಂದರು.

ಯತ್ನಾಳ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಆರೋಗ್ಯ ಸಚಿವರಿಗೆ ಮನವಿ ಮಾಡಿದರು.

ಕರವೇ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿ, ಕನ್ನಡಿಗರು ಮತ್ತು ಮರಾಠಿಗರ ನಡುವೆ ಶಾಸಕ ಯತ್ನಾಳ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೊಡ್ಡವರಾಗಲು ಯತ್ನಾಳ ಪ್ರಯತ್ನಿಸುತ್ತಿದ್ದಾರೆ. ಹಕ್ಕುಚ್ಯುತಿ ಬಗ್ಗೆ ಮಾತನಾಡುವವರು ಮೊದಲು ಇನ್ನೊಬ್ಬರ ಬಗ್ಗೆ ಗೌರವಯುತವಾಗಿ ಮಾತನಾಡುವುದು ಕಲಿಯಬೇಕು ಎಂದರು.

ಕರವೇ ಮುಖಂಡ ಅಶೋಕ ಹರಿವಾಳ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಗಮನ ಹರಿಸಲಿ, ಕನ್ನಡಿಗರ ವೋಟಿನಿಂದ ಶಾಸಕರಾಗಿದ್ದಾರೆಯೇ ಹೊರತು ಮರಾಠಿಗರ ವೋಟಿನಿಂದಲ್ಲ ಎಂದು ಹೇಳಿದರು.

ಕರವೇ ಮುಖಂಡರಾದ ಮಹಾದೇವ ರಾವಜಿ, ಫಯಾಜ್‌ ಕಲಾದಗಿ, ಆರ್.ಬಸವರಾಜ, ದಸ್ತಗೀರ ಸಾಲೊಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT