ಮಂಗಳವಾರ, ಮೇ 17, 2022
24 °C
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ

ಪ್ರವಾಸೋದ್ಯಮ, ತೋಟಗಾರಿಕೆ ಅಭಿವೃದ್ಧಿಗೆ ಸಹಕಾರಿ: ಬಿ.ಎಸ್. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಿಂದ ಜಿಲ್ಲೆಯ ಪ್ರವಾಸೋದ್ಯಮ, ಸ್ಥಳೀಯರಿಗೆ ಉದ್ಯೋಗವಕಾಶ, ತೋಟಗಾರಿಕೆ ಮತ್ತು ಕೃಷಿ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಸಂಪರ್ಕ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಮದಭಾವಿಯಲ್ಲಿ ₹ 220 ಕೋಟಿ ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಉದ್ದೇಶಿತ ವಿಮಾನ ನಿಲ್ದಾಣ ಕಾಮಗಾರಿಗೆ ಸೋಮವಾರ ಶಿವಮೊಗ್ಗದಿಂದ ವರ್ಚುವಲ್‌ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 

ಬುರಣಾಪುರ ಹಾಗೂ ಮದಭಾವಿ ಗ್ರಾಮಗಳ ವ್ಯಾಪ್ತಿಯಲ್ಲಿ 727 ಎಕರೆ ಜಮೀನಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಹಾಗೂ ಲಿಂಬೆ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಒಣ ದ್ರಾಕ್ಷಿ ಮತ್ತು ನಿಂಬೆ ಹಣ್ಣನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ಪ್ರಾರಂಭದಿಂದ ಈ ಎಲ್ಲ ಚಟುವಟಿಕೆಗಳಿಗೆ ಹೆಚ್ಚಿನ ಮಾರುಕಟ್ಟೆ ಲಭ್ಯವಾಗಲಿದೆ ಎಂದು ಹೇಳಿದರು.

ವಿಜಯಪುರ ವಿಮಾನ ನಿಲ್ದಾಣದಿಂದ ವಿಮಾನಗಳ ಕಾರ್ಯಾಚರಣೆಯನ್ನು ಕೇಂದ್ರಿಯ ನಾಗರಿಕ ವಿಮಾನಯಾನ ಸಚಿವಾಲಯದ ಉಡಾನ್ ಯೋಜನೆ ಅಡಿ ಸೇರ್ಪಡೆ ಮಾಡಲಾಗುವುದು ಎಂದರು.

ವಿಮಾನ ನಿಲ್ದಾಣವನ್ನು ಎ.ಟಿ.ಆರ್-72 ವಿಮಾನಗಳ ಹಾರಾಟಕ್ಕಾಗಿ ನಿರ್ಮಿಸಲಾಗಿದ್ದು, ಮುಂದೆ ಅದನ್ನು ಏರ್‌ಬಸ್‌ -320 ಗಳ ಹಾರಾಟಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಕಲಬರ್ಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯೂ ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಅದೇ ರೀತಿ ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿಜಯಪುರ ವಿಮಾನ ನಿಲ್ದಾಣವು ಯಡಿಯೂರಪ್ಪನವರ ಕನಸಿನ ಕೂಸಾಗಿದೆ. 2008 ರಲ್ಲಿ ಅವರು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ವಿಜಯಪುರ, ಕಲಬುರ್ಗಿ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ ಅಡಿಗಲ್ಲು ನೆರವೇರಿಸಿದ್ದರು ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ₹220 ಕೋಟಿ ಅನುದಾನದಲ್ಲಿ ಈ ವಿಮಾನ ನಿಲ್ದಾಣವನ್ನು ಮುಂದಿನ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಪ್ರಥಮ ಹಂತದಲ್ಲಿ ₹95 ಕೋಟಿ ಮೊತ್ತದಲ್ಲಿ ರನ್ ವೇ ಮತ್ತು ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಉತ್ತಮ ಹವಾಮಾನ, ಭೂಮಿ, ತೋಟಗಾರಿಕಾ ಕ್ಷೇತ್ರ ಮತ್ತು ಉತ್ತಮ ನೀರಾವರಿ ಸೌಲಭ್ಯ ಹೊಂದಿರುವುದರಿಂದ ಮುಂಬರುವ ವರ್ಷಗಳಲ್ಲಿ ವಿಜಯಪುರ ಜಿಲ್ಲೆ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕದಲ್ಲಿಯೇ ಮುಂಚೂಣಿ ಜಿಲ್ಲೆಯಾಗಲಿದೆ ಎಂದರು.

ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಮದಬಾವಿ ಗ್ರಾ.ಪಂ ಅಧ್ಯಕ್ಷ ಚೇತನ ಬಗಲಿ, ಐನಾಪೂರ ಗ್ರಾ.ಪಂ ಅಧ್ಯಕ್ಷ ಯಲ್ಲಕ್ಕ ವಂಬಾಸೆ, ಅಲಿಯಾಬಾದ್‌ ಗ್ರಾ.ಪಂ. ಅಧ್ಯಕ್ಷ ರಾವಣ ಹಕ್ಕೆ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ.ಎಸ್ ಕೃಷ್ಣಾರೆಡ್ಡಿ, ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕಪಿಲ್ ಮೋಹನ್‌, ಮಾಜಿ ಸಚಿವರಾದ ಎಸ್.ಕೆ ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀರಾಮ ಅರಸಿದ್ಧಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಬಿ.ಪಾಟೀಲ, ಮುಖ್ಯ ಎಂಜಿನಿಯರ್‌ ಎಸ್.ಎಸ್ ಪಾಟೀಲ, ಅಧೀಕ್ಷಕ ಎಂಜಿನಿಯರ್‌ ಬಿ.ವೈ ಪವಾರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್.ಕೆ ಮುಜುಮದಾರ, ಕೆಎಸ್‍ಐಡಿಸಿ ನಿರ್ದೇಶಕಿ ಗಾಯತ್ರಿ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಸ್ ಆಲೂರ ಉಪಸ್ಥಿತರಿದ್ದರು. 

ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಶ್ರೀಮಂತರ ಓಡಾಟದ ಸಲುವಾಗಿ ಎಂಬ ಭಾವನೆ ಬೇಡ. ಇದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿದೆ
–ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು