ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಿಕೋಟೆ: ರೈತರಿಗೆ ಅಗತ್ಯ ಮಾಹಿತಿ ನೀಡುವ ‘ಕೋರಿ ಸಹಾಯವಾಣಿ’

ತಾಳಿಕೋಟೆಯ ವೀರೇಶ ಅಮರಪ್ಪ ಕೋರಿ ಅವರ ಯಶಸ್ವಿ ಪ್ರಯೋಗ
Published 24 ಮೇ 2024, 5:47 IST
Last Updated 24 ಮೇ 2024, 5:47 IST
ಅಕ್ಷರ ಗಾತ್ರ

ತಾಳಿಕೋಟೆ: ‘ದೇಶದ ಜನತೆಗೆ ಅನ್ನ ನೀಡುವ ರೈತನಿಗೆ ಆಗುವ ಅನ್ಯಾಯಗಳನ್ನು ತಡೆದು ಅನ್ನದಾತನಿಗೆ ಕಿಂಚಿತ್ತಾದರೂ ನ್ಯಾಯ ಒದಗಿಸಿ, ಆರ್ಥಿಕ ಸದೃಢತೆ ಒದಗಿಸಬೇಕು. ರೈತರಿಗಾಗಿ ಇರುವ ನೂರಾರು ಯೋಜನೆಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ತಿಳಿವಳಿಕೆ ನೀಡಬೇಕು. ಅವರಿಗೆ ಮಾಹಿತಿಯ ಕಣಜವಾಗಿ ಆಸರೆಯಾಗಬೇಕು ಎಂಬ ಹಂಬಲ ಹೊತ್ತ ಯುವರೈತ ತಾಳಿಕೋಟೆಯ ವೀರೇಶ ಅಮರಪ್ಪ ಕೋರಿ ‘ಕೋರಿ ರೈತ ಸಹಾಯವಾಣಿ- 7676761797’ ಆರಂಭಿಸಿದ್ದಾರೆ.

ಒಂದೇ ಸೂರಿನಡಿ ಮಾಹಿತಿ: ಪಿ.ಎಂ. ಕಿಸಾನ್, ರೈತರ ಗುರುತಿನ ಸಂಖ್ಯೆ,(ಎಫ್ಐಡಿ), ಬೆಳೆ ವಿಮೆ, ಮಣ್ಣು ಮತ್ತು ನೀರು ಪರೀಕ್ಷೆ, ಬೀಜ-ಗೊಬ್ಬರ ಔಷಧ-ಬೆಳೆಗಳ ಮಾಹಿತಿ, ಯಂತ್ರೋಪಕರಣ, ಟ್ರ್ಯಾಕ್ಟರ್ ಬಾಡಿಗೆ, ಕೂಲಿ ಕಾರ್ಮಿಕರು, ಫಸಲು ಮಾರಾಟ, ಸರ್ಕಾರದ ಯೋಜನೆಗಳ ಮಾಹಿತಿ, ಹವಾಮಾನ ಮಾಹಿತಿ, ಆಧಾರ ಜೋಡಣೆ, ಬ್ಯಾಂಕ್ ಲಿಂಕ್, ಕೃಷಿ ಸಾಲ, ಕೃಷಿ ತರಬೇತಿ, ಕೃಷಿ ಮೇಳ, ರೈತರ ಆ್ಯಪ್, ಎಸ್‌ಎಂಎಸ್‌ ಸೇವೆಗಳ ಕುರಿತು ಈ ಸಹಾಯವಾಣಿ ಮೂಲಕ ಮಾಹಿತಿ ಪಡೆಯಬಹುದಾಗಿದೆ.

ರೈತರ ಮುಖ್ಯ ಸಮಸ್ಯೆಗಳೆಂದರೆ- ತಮ್ಮ ಪಿಐಡಿ (ರೈತರ ಗುರುತಿನ ಸಂಖ್ಯೆ), ಪಿಎಂ ಕಿಸಾನ್‌, ಕೃಷಿ ಬಿತ್ತನೆ ಬೀಜ, ಗೊಬ್ಬರ, ಯಂತ್ರೋಪಕರಣಗಳ ಲಭ್ಯತೆ, ಹನಿ ನೀರಾವರಿ, ತುಂತುರು ನೀರಾವರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ಇಲಾಖೆಗೆ ಹೋಗಬೇಕು. ಬರ/ಬೆಳೆ ಪರಿಹಾರಕ್ಕಾಗಿ ಮಾಹಿತಿ ಪಡೆಯಲು ಕಂದಾಯ ಇಲಾಖೆಗೆ ಹೋಗಬೇಕು. ಬ್ಯಾಂಕ್ ಖಾತೆ ಜೋಡಣೆ ಸಂಬಂಧಿಸಿ ಬ್ಯಾಂಕ್‌ಗೆ ಅಲೆದಾಡಬೇಕು. ಈ ಅಲೆದಾಟಗಳನ್ನು ತಪ್ಪಿಸಿ ಸಹಾಯವಾಣಿಯಲ್ಲಿ ವಿವರ ನೀಡಲಾಗುತ್ತಿದೆ. ರೈತರು ತಮ್ಮ ಮೊಬೈಲ್‌ನಲ್ಲಿಯೇ ವಿವರ ನೋಡಬಹುದು. ಇಲ್ಲವೇ ಸಂಬಂಧಿತ ಇಲಾಖೆಗೆ ಕಳುಹಿಸಲಾಗುತ್ತದೆ. ಇಲ್ಲವೇ ಸಹಾಯ ಬೇಕಿದ್ದರೆ ಕೇಂದ್ರಕ್ಕೇ ಬಂದರೆ ಉಚಿತವಾಗಿ ನೆರವು ನೀಡಲಾಗುತ್ತಿದೆ. ಈಚೆಗೆ ಅವರು ವಾರಕ್ಕೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಬಗೆಹರಿಸಲು ಪ್ರಯತ್ನವನ್ನೂ ನಡೆಸಿದ್ದಾರೆ.

ಸಹಾಯವಾಣಿಯ ವಾಟ್ಸ್‌ಆ್ಯಪ್ ಗುಂಪು ರಚನೆಯಾಗಿದ್ದು ಸದಸ್ಯರ ಸಂಖ್ಯೆ 900 ದಾಟಿದೆ. ಇದರಲ್ಲಿ ನಿತ್ಯ ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವಿವಿಧ ಆಹಾರಧಾನ್ಯಗಳ ಧಾರಣೆ ಮಾಹಿತಿ ಇರುತ್ತದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಜಿಲ್ಲೆಯ ಹವಾಮಾನ ವರದಿ, ತಾಳಿಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು, ನಿಲುಗಡೆ ವಿದ್ಯುತ್ ವಿತರಣೆ ಸಮಯ, ರಾಜ್ಯದ ವಿವಿಧ ಕೃಷಿ ಗುಂಪುಗಳಲ್ಲಿಯ ರೈತರಿಗೆ ಉಪಯುಕ್ತವಾಗುವ ವಿವರಗಳನ್ನು ಸಂಗ್ರಹಿಸಿ ಒದಗಿಸಲಾಗುತ್ತಿದೆ.

‘ರೈತರು ತಮ್ಮ ಕೃಷಿ ಸಂಬಂಧಿತ ಕಾರ್ಯಗಳಿಗಾಗಿ ಸೂಕ್ತ ಮಾಹಿತಿಯಿಲ್ಲದೇ ಕಷ್ಟಪಡುತ್ತಿರುವುದನ್ನು ನೋಡುತ್ತಿದ್ದೆ. ಅನೇಕ ವರ್ಷಗಳಿಂದ ಈ ಪರದಾಟಕ್ಕೆ ಪರಿಹಾರದ ದಾರಿ ಆಲೋಚಿಸಿದೆ. ಸೂಕ್ತ ಮಾಹಿತಿ ಸಿಕ್ಕರೆ ಅವರು ಇನ್ನಷ್ಟು ಸಮರ್ಥವಾಗಿ ಕೃಷಿ ಕಾರ್ಯ ಮಾಡಬಹುದು ಎಂಬ ಕಾರಣಕ್ಕೆ 2022 ರ ಜ. 26 ರಂದು ಕಾರ್ಯರೂಪಕ್ಕೆ ತಂದೆ. ಈಗ ನಿತ್ಯ ನೂರಕ್ಕೂ ಹೆಚ್ಚು ರೈತರು ಕೇಂದ್ರಕ್ಕೆ ಭೇಟಿ ನೀಡಿ ನೆರವು ಪಡೆಯುತ್ತಿದ್ದಾರೆ. ಓದು ಬರೆಹ ಬಾರದ ರೈತರಿಗಾಗಿ ವಿಡಿಯೊ ಕೂಡ ಮಾಡಿ ಗುಂಪಲ್ಲಿ ಹಂಚಲಾಗುತ್ತದೆ. ಅದರಿಂದ ರೈತರಿಗೆ ಪ್ರಯೋಜನ ಆಗುತ್ತಿದೆ ಎನಿಸಿದ ಮೇಲೆ ಬಸವ ಜಯಂತಿಯಿಂದ ರಾಜ್ಯವ್ಯಾಪಿ ವಿಸ್ತರಣೆಗೊಂಡಿದೆ’ ಎಂದು ವೀರೇಶ ಕೋರಿ ತಿಳಿಸಿದರು.

ರಾಜ್ಯವ್ಯಾಪಿ ನೆರವಿಗಾಗಿ ಕೋರಿ ಕೃಷಿ ಮಾಹಿತಿ ಕೇಂದ್ರದ ಹೆಸರಲ್ಲಿ ವಾಟ್ಸ್‌ಆ್ಯಪ್‌ ಚಾನಲ್‌ ಹಾಗೂ ಫೇಸ್‌ಬುಕ್‌ ಪುಟಗಳಿವೆ. ಸಹಾಯವಾಣಿಗೆ ತಾಲ್ಲೂಕಿನ ಯಾವುದೇ ರೈತರು ಕರೆ ಮಾಡಿದರೂ ಅವರಿಗೆ ಅಗತ್ಯದ ಮಾಹಿತಿ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

‘ಸರ್ಕಾರ ಕೊಡುವ ಸಹಾಯಧನದಿಂದ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಲು ಅನೇಕ ಅವಕಾಶಗಳಿವೆ. ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಮೀನಿಲ್ಲದ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ 30X40 ಅಳತೆಯ ಸ್ಥಳದಲ್ಲಿ ಕುರಿ ಸಾಕಣೆ ಕೇಂದ್ರ ನಿರ್ಮಿಸಿಕೊಂಡು ವರ್ಷಕ್ಕೆ ನಾಲ್ಕರಿಂದ ಐದು ಲಕ್ಷ ರೂಪಾಯಿ ಹಣ ಗಳಿಸುತ್ತಿದ್ದಾನೆ. ಕೃಷಿ ಉಪ ಉತ್ಪನ್ನಗಳ ಸಮರ್ಪಕ ಬಳಕೆಯಿಂದ ರೈತರಿಗೆ ಕೈತುಂಬಾ ಸಂಪಾದನೆ ಸಾಧ್ಯವಿದೆ’ ಎಂದರು.

ರೈತರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕನಿಗೆ ತಲುಪಿಸುವಲ್ಲಿ ಕೂಡ ಸಹಾಯವಾಣಿ ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ಹಂಚಿಕೆಯಾಗುತ್ತಿದೆ. ಯಾವ ಬಿತ್ತನೆ ಬೀಜಗಳು ಯಾರ ಬಳಿ ಲಭ್ಯವಿವೆ, ಅವುಗಳ ಪ್ರಮಾಣ ಹಾಗೂ ಅವರ ಸಂಪರ್ಕ ಸಂಖ್ಯೆಯನ್ನು ನೀಡಲಾಗುತ್ತದೆ. ಅವಶ್ಯಕತೆ ಇದ್ದವರು ನೇರವಾಗಿ ರೈತರನ್ನು ಸಂಪರ್ಕಿಸಿ ಅವುಗಳನ್ನು ಪಡೆಯಬಹುದಾಗಿದೆ. ಉದಾಹರಣೆಗೆ ಹುಣಸಗಿ ತಾಲ್ಲೂಕಿನ ರೈತರ ಬಳಿ ಹೆಚ್ಚುವರಿಯಾಗಿ ಉಳಿದಿದ್ದ ಮೆಣಸಿನಕಾಯಿ ಸಸಿಗಳು ಮಾರಾಟ ಮಾಡಲು ನೆರವು ಕೇಳಿದ, ಗುಂಪಲ್ಲಿ ಅವನ ವಿವರ ಹಾಕಿದಾಗ ಒಂದೇ ದಿನದಲ್ಲಿ ಅವನ ಬಳಿಯಿದ್ದ ಸಸಿಗಳು ಅವಶ್ಯಕತೆ ಇದ್ದವರ ಪಾಲಾದವು. ಹೀಗೆ ಹಲವು ರೈತರ ಬಳಿಯ ಮಾರಾಟದ ವಸ್ತುಗಳ ಬಗ್ಗೆ ಕೂಡ ಗುಂಪಲ್ಲಿ ಹಂಚಿಕೆಯಾದಾಗ ಮಧ್ಯವರ್ತಿಗಳಿಲ್ಲದೇ ಮಾರಾಟಗಾರನಿಗೆ ಉತ್ತಮ ಬೆಲೆ ಹಾಗೂ ಖರೀದಿಗಾರನಿಗೂ ನಿಯಮಿತ ದರದಲ್ಲಿ ವಸ್ತುಗಳು ಲಭ್ಯವಾಗುತ್ತಿವೆ.

ಈ ಗುಂಪಲ್ಲಿ ಸೇರ್ಪಡೆಯಾಗಬಯಸುವ ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಗ್ರಾಮದ ವಿವರವನ್ನು ತಿಳಿಸಿದರೆ ಅವರನ್ನು ಈ ಗುಂಪಲ್ಲಿ ಸೇರಿಸಿಕೊಳ್ಳಲಾಗುತ್ತಿದೆ.

ವೀರೇಶ ಕೋರಿ ಕೃಷಿಯಲ್ಲಿ ಹೆಚ್ಚಿನ ಅನುಭವ ಪಡೆಯಲು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬೇಸಿಕ್ ಕ್ಲಾಸ್ ಡಿಪ್ಲೊಮಾ ಇನ್ ಅಗ್ರಿಕಲ್ಚರ್ ಎಕ್ಸಟೆನಶನ್ ಸರ್ವಿಸ್‌ ಫಾರ್ ಇನಪುಟ್ ಡೀಲರ್ಸ್‌ ಒಂದು ವರ್ಷದ ಕೋರ್ಸ್‌ ಮಾಡಿ ಚಿನ್ನದ ಪದಕ ಗಳಿಸಿದ್ದಾರೆ. ಅದರ ಜ್ಞಾನವನ್ನು ಈಗ ರೈತರಿಗೆ ಉಣಬಡಿಸುತ್ತಿದ್ದಾರೆ.

ಮೂಲತಃ ಕಂಪ್ಯುಟರ್‌ನಲ್ಲಿ ಆಸಕ್ತಿ ಬೆಳೆಸಿಕೊಂಡು ಪ್ರೌಢಶಾಲಾ ಮಕ್ಕಳಿಗೆ ಅದರ ತರಬೇತಿ ಕೇಂದ್ರ ಆರಂಭಿಸಿದ್ದ ಅವರು ಪಟ್ಟಣದಲ್ಲಿ ಕಂಪ್ಯುಟರ್ ಸೇವೆಗಳನ್ನು ಸಹೋದರ ಬಸವರಾಜ ಜೊತೆ ಒದಗಿಸುತ್ತ ನಡೆದಿದ್ದರು. ನಂತರ ಕೃಷಿಯತ್ತ ಒಲವು ಬೆಳೆಸಿಕೊಂಡ ಸಹೋದರರು, ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತ ಅದರ ಅನುಭವ ಪಡೆದರು.

ಕೋರಿ ಸಹಾಯವಾಣಿ
ಕೋರಿ ಸಹಾಯವಾಣಿ
ತಾಳಿಕೋಟೆ ತಾಲ್ಲೂಕಿನ ಹರನಾಳ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ನಡೆಸುತ್ತಿರುವ ವೀರೇಶ ಕೋರಿ
ತಾಳಿಕೋಟೆ ತಾಲ್ಲೂಕಿನ ಹರನಾಳ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ನಡೆಸುತ್ತಿರುವ ವೀರೇಶ ಕೋರಿ
‘ಕೋರಿ ಸಹಾಯವಾಣಿ’ ಕೃಷಿ ಇಲಾಖೆಗೆ ಮಾತ್ರವಲ್ಲ ರೈತನಿಗೆ ಅಗತ್ಯದ ಎಲ್ಲ ಇಲಾಖೆಗಳಿಗೂ ಮಧ್ಯದ ಕೊಂಡಿಯಾಗಿ ಯಾವ ಅಪೇಕ್ಷೆ ಇಲ್ಲದೇ ಶ್ಲಾಘನೀಯ ಕೆಲಸ ಮಾಡುತ್ತಿದೆ
-ಮಹೇಶ ಜೋಶಿ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ತಾಳಿಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT