ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ: ಸಾಧಕರ ಊರಲ್ಲಿ ಸಮಸ್ಯೆಗಳದ್ದೇ ಕಾರುಬಾರು!

ಬೀದಿ ದೀಪವಿಲ್ಲ, ಮಹಿಳೆಯರಿಗೆ ಬಯಲು ಬಹಿರ್ದೆಸೆಯೇ ಆಸರೆ
Published 2 ಆಗಸ್ಟ್ 2023, 6:49 IST
Last Updated 2 ಆಗಸ್ಟ್ 2023, 6:49 IST
ಅಕ್ಷರ ಗಾತ್ರ

ಶಂಕರ ಈ.ಹೆಬ್ಬಾಳ

ಮುದ್ದೇಬಿಹಾಳ: ಮಹಾತಪಸ್ವಿ ಸಂತೆಕೆಲ್ಲೂರಿನ ಶ್ರೀ ಘನಮಠೇಶ್ವರರು ತಂಗಿ ಹೋದ ಗ್ರಾಮ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರ ತವರೂರು, ಪವಾಡ ಪುರುಷ ಕಿಡಿಗಣ್ಣೇಶ್ವರರ ಪುಣ್ಯಕ್ಷೇತ್ರ ಯರಗಲ್ ಗ್ರಾಮ ಹತ್ತು ಹಲವು ಮೂಲಸೌಲಭ್ಯಗಳ ಕೊರತೆ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ.

ವಿಜಯನಗರ ಸಾಮ್ರಾಜ್ಯದ ಅರಸ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಗ್ರಾಮದ ಶ್ರೀ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಬಂಗಾರದಿಂದ ಎರಕಾ ಹೊಯ್ಯುತ್ತಿದ್ದರಿಂದ(ಅಭಿಷೇಕ) ಎರಕಾ ಹೋಗಿ ಯರಗಲ್ಲ ಎಂಬ ಹೆಸರು ಬಂದಿದೆ ಎಂಬುದು ದೇವಸ್ಥಾನದ ಅರ್ಚಕ ನೀಲಕಂಠಪ್ಪ ಹೂಗಾರ ಹೇಳುತ್ತಾರೆ. ಅಲ್ಲದೇ, ಸಾಹಿತಿ ಶರಣಪ್ಪ ಕಂಚ್ಯಾಣಿ ತಮ್ಮ ಕೆಲವು ಕಾರ್ಯಕ್ರಮಗಳಲ್ಲಿ ಇದನ್ನು ಉಲ್ಲೇಖಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಸಮಸ್ಯೆಗಳ ಸರಮಾಲೆ: ಯರಗಲ್ ಗ್ರಾಮ ಮುದ್ದೇಬಿಹಾಳದಿಂದ 15 ಕಿ.ಮೀ ಅಂತರದಲ್ಲಿದ್ದು, 2011ರ ಜನಗಣತಿಯಂತೆ ಗ್ರಾಮದಲ್ಲಿ 1,500 ಮತದಾರರಿದ್ದರು. ಈಗ ಆ ಸಂಖ್ಯೆ ಹೆಚ್ಚಳವಾಗಿದೆ. ಅಂದಾಜು 4,000 ಜನಸಂಖ್ಯೆ ಈ ಗ್ರಾಮವಾಗಿದೆ. ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗುವುದು ತಪ್ಪಿಲ್ಲ. ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಂಡಿದ್ದರೂ ಅವುಗಳ ಬಳಕೆಯೂ ಅಷ್ಟಕ್ಕಷ್ಟೇ ಇದೆ.

ಗ್ರಾಮದೆಲ್ಲೆಡೆ ಸಿಸಿ ರಸ್ತೆ ಆಗಿದ್ದರೂ ಯರಗಲ್‍ದಿಂದ ಮದರಿ ಗ್ರಾಮಕ್ಕೆ ಹೋಗುವ ರಸ್ತೆ ಮಾತ್ರ ಊರೊಳಕ್ಕೆ ಹೋದಾಗ ಹದಗೆಟ್ಟು ಹಾಳಾಗಿದೆ. ಮನೆಗಳ ಚರಂಡಿ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯ ಮೇಲೆ ನಿಂತು ತಾತ್ಕಾಲಿಕ ಹೊಂಡಗಳು ನಿರ್ಮಾಣವಾಗಿವೆ. ಸ್ವಚ್ಛತೆಯ ಕೊರತೆಯಿಂದ ಸೊಳ್ಳೆಗಳ ಕಾಟವೂ ಹೆಚ್ಚಿದೆ. ಮಳೆಗಾಲವಾದ್ದರಿಂದ ಈ ರಸ್ತೆಯಲ್ಲಿ ವೃದ್ಧರು, ಮಹಿಳೆಯರು ಹೋಗುವುದಕ್ಕೆ ಹರಸಾಹಸ ಪಡಬೇಕಾಗಿದೆ.

ಬೀದಿ ದೀಪಗಳಿಲ್ಲ: ಹೊಸದಾಗಿ ನಿರ್ಮಾಣವಾಗಿರುವ ಗ್ರಾಮದ ಪ್ಲಾಟ್‍ಗಳ ಮನೆಗಳಿರುವ ಕಡೆಗಳಲ್ಲಿ ಬೀದಿದೀಪಗಳಿಲ್ಲ. ಇದರಿಂದ ಈ ಭಾಗದಲ್ಲಿರುವ ಜನರು ನಿತ್ಯ ಕತ್ತಲೆಯಲ್ಲಿ ಸಂಚರಿಸಬೇಕಾಗಿದೆ.

‘ಹೇಳಿಕೊಳ್ಳುವುದಕ್ಕೆ ಸಾಧಕರ ಊರಾಗಿದೆ. ಆದರೆ, ಸೌಕರ್ಯಗಳ ಕೊರತೆ ಸಾಕಷ್ಟಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶರಣಪ್ಪ ಗಂಗಾವತಿ.

ಯರಗಲ್‍ದಿಂದ ಕೂಗಳತೆ ದೂರದಲ್ಲಿರುವ ಬಾಲಾಜಿ ಶುಗರ್ಸ್ ಕಾರ್ಖಾನೆಗೆ ಇದೇ ಗ್ರಾಮದ ಮೂಲಕ ಹಾಯ್ದು ಹೋಗಬೇಕು. ಗ್ರಾಮದಲ್ಲಿರುವ ಖಾಸಗಿ ವ್ಯಕ್ತಿಗಳಿಗೆ ಸೇರಿರುವ ಎರಡ್ಮೂರು ಪ್ಲಾಟ್‍ಗಳನ್ನು ಖರೀದಿಸಿ ನೇರವಾಗಿ ರಸ್ತೆ ಮಾಡಿಸುವ ಇರಾದೆಯನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಗೌಡ ಪಾಟೀಲರು ಹೊಂದಿದ್ದಾರೆ. ಆದರೆ, ಆ ಆಶಯಕ್ಕೆ ಗ್ರಾಮದವರು ಸಹಮತ ತೋರಬೇಕಾಗಿದೆ. ಕಿರಿದಾದ ದಾರಿಯಲ್ಲಿ ಈಗಾಗಲೇ ಹೊಂಡಗಳು ಬಿದ್ದು ಜನರ ಓಡಾಟ ಕಷ್ಟಕರವಾಗಿದೆ. ಆದಷ್ಟು ಬೇಗ ಈ ರಸ್ತೆ ದುರಸ್ತಿ ಆಗಬೇಕು ಎಂಬುದು ಜನರ ಒತ್ತಾಸೆಯಾಗಿದೆ. 

ಮುದ್ದೇಬಿಹಾಳ ತಾಲ್ಲೂಕಿನ ಯರಗಲ್‍ದಲ್ಲಿ ಶಿಥಿಲಗೊಂಡು ಉರುಳಿ ಬಿದ್ದಿರುವ ಸಾರ್ವಜನಿಕ ಶೌಚಾಲಯ 
ಮುದ್ದೇಬಿಹಾಳ ತಾಲ್ಲೂಕಿನ ಯರಗಲ್‍ದಲ್ಲಿ ಶಿಥಿಲಗೊಂಡು ಉರುಳಿ ಬಿದ್ದಿರುವ ಸಾರ್ವಜನಿಕ ಶೌಚಾಲಯ 
ಸಾಧಕರ ತವರೂರು ಯರಗಲ್ 
ಯರಗಲ್ ಗ್ರಾಮ ಎಂದಾಕ್ಷಣ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ.ಎಚ್.ಬಿ.ವಾಲೀಕಾರ ಹೆಸರು ಕಣ್ಮುಂದೆ ಹಾಯ್ದು ಹೋಗುತ್ತದೆ. ಕೊಪ್ಪಳ ಹೆಚ್ಚುವರಿ ಜಿಲ್ಲಾಧಿಕಾರಿಗಳಾಗಿರುವ ಸಾವಿತ್ರಿ ಕಡಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಶಾಂತಾ ಕಡಿ ಅವರು ಇದೇ ಯರಗಲ್‍ದವರು. ಅಷ್ಟೇ ಏಕೆ ಉತ್ತರ ಕರ್ನಾಟಕ ಹೊರ ರಾಜ್ಯಗಳಲ್ಲಿ ತಮ್ಮ ಹಾಸ್ಯ ಕಲೆಯ ಮೂಲಕ ಹೆಸರು ಮಾಡಿರುವ ನಟ ಗೋಪಾಲ ಹೂಗಾರ ಸಂಗೀತ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಗಮೇಶ ಶಿವಣಗಿ ಗವಾಯಿಗಳು ಚಿತ್ರಕಲಾ ಶಿಕ್ಷಕ ಬಸವರಾಜ ಹಡಪದ ಇದೇ ಊರಿನವರು ಎಂಬುದು ವಿಶೇಷ.
ಹೆಸ್ಕಾಂಗೆ ಪತ್ರ ಬರೆಯುತ್ತೇವೆ...
ಯರಗಲ್‌ನ ಹೊಸ ಪ್ಲಾಟ್‍ಗಳಲ್ಲಿ ಬೀದಿ ದೀಪ ವ್ಯವಸ್ಥೆಗೆ ಹೆಸ್ಕಾಂಗೆ ಪತ್ರ ಬರೆಯುತ್ತೇವೆ. ಚರಂಡಿ ವ್ಯವಸ್ಥೆ ಸುಧಾರಣೆಗೂ ಯೋಜನೆ ಹಾಕಿಕೊಂಡಿದ್ದೇವೆ. ಎರಡ್ಮೂರು ಸಲ ಯರಗಲ್‍ದಿಂದ ಮದರಿ ಹೋಗುವ ಊರೊಳಗಿನ ಗುಂಡಿಗಳಿಗೆ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಲಾಗಿತ್ತು. ಅದರ ದುರಸ್ತಿ ಸುಧಾರಣೆ ಪಿಡಬ್ಲ್ಯುಡಿ ಇಲಾಖೆಯವರಿಗೆ ಬರುತ್ತದೆ ಎಂದು ಆಲೂರ ಗ್ರಾ.ಪಂ. ಪಿಡಿಒ ಪಿ.ಎಸ್.ನಾಯ್ಕೋಡಿ ಹೇಳಿದರು.
ಯರಗಲ್‌ನ ಹೊಸ ಪ್ಲಾಟ್‍ಗಳಲ್ಲಿ ಬೀದಿ ದೀಪ ವ್ಯವಸ್ಥೆಗೆ ಹೆಸ್ಕಾಂಗೆ ಪತ್ರ ಬರೆಯುತ್ತೇವೆ. ಚರಂಡಿ ವ್ಯವಸ್ಥೆ ಸುಧಾರಣೆಗೂ ಯೋಜನೆ ಹಾಕಿಕೊಂಡಿದ್ದೇವೆ. ಎರಡ್ಮೂರು ಸಲ ಯರಗಲ್‍ದಿಂದ ಮದರಿ ಹೋಗುವ ಊರೊಳಗಿನ ಗುಂಡಿಗಳಿಗೆ ಮಣ್ಣು ಹಾಕಿಸಿ ಸಮತಟ್ಟು ಮಾಡಿಸಲಾಗಿತ್ತು. ಅದರ ದುರಸ್ತಿ, ಸುಧಾರಣೆ ಪಿಡಬ್ಲ್ಯುಡಿ ಇಲಾಖೆಯವರಿಗೆ ಬರುತ್ತದೆ.
– ಪಿ.ಎಸ್.ನಾಯ್ಕೋಡಿ,ಗ್ರಾ.ಪಂ ಆಲೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT