ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಭೂ ಹಗರಣ: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Published 27 ಜೂನ್ 2024, 16:22 IST
Last Updated 27 ಜೂನ್ 2024, 16:22 IST
ಅಕ್ಷರ ಗಾತ್ರ

ವಿಜಯಪುರ: ಖೊಟ್ಟಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಯಾರದೋ ಜಮೀನುಗಳನ್ನು ಇನ್ನಾರಿಗೋ ಮಾರಾಟ ಮಾಡಿ ಅಮಾಯಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳ ಬೆನ್ನು ಹತ್ತಿರುವ ಜಿಲ್ಲಾ ಪೊಲೀಸರು, ಮೂರು ಬೇರೆ ಬೇರೆ ಪ್ರಕರಣಗಳನ್ನು ಬೇಧಿಸಿ, ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ತೋರವಿ ಗ್ರಾಮದಲ್ಲಿ ಜಮೀನು ಕೊಡಿಸುವುದಾಗಿ ಖೊಟ್ಟಿ ದಾಖಲೆಪತ್ರಗಳನ್ನು ನೀಡಿ ವಿಜಯಪುರ ನಗರದ ಕೆ.ಎಚ್.ಬಿ. ಕಾಲೊನಿಯ ನಿವಾಸಿ ಮಾರುತಿ ನಾರಾಯಣಕರ ಅವರಿಗೆ ₹25 ಲಕ್ಷ ವಂಚನೆ ಮಾಡಿದ್ದ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದ ನಿಸಾರ್‌ ಮಡ್ಡಿಯ ಚಾಂದಪೀರ ಇನಾಮದಾರ(47), ಶಕ್ತಿ ನಗರದ ಮಹಿಬೂಬಸಾಬ ಹಡಗಲಿ(59), ಆಸಾರ ಗಲ್ಲಿಯ ಮೈಬೂಬ ಡಾಂಗೆ(51), ಚಪ್ಪರಬಂದ ಗಲ್ಲಿಯ ಸಿಕಂದರ್‌ ಗಂಗನಳ್ಳಿ(46), ಮಹಮ್ಮದ್‌ ತಾಹೀರ ಪಠಾಣ, ಅಲಿಯಾಬಾದ್‌ನ ದತ್ತು ತಿಕ್ಕುಂಡಿ(29) ಮತ್ತು ವಾಗೇಶ ಪೋಳ(28), ಅರಕೇರಿಯ ಸುಭಾಸ ಸುಳ್ಳ ಹಾಗೂ ಪ್ರತಿಕ್ಷಾ ನಗರದ ಅಶೋಕ ಪೋಳ (59) ಅವರನ್ನು ಬಂಧಿಸಲಾಗಿದೆ ಎಂದರು.

ತೋರವಿ ಗ್ರಾಮದಲ್ಲಿರುವ 1.36 ಎಕರೆ ಜಮೀನನ್ನು ಮಾರುತಿ ನಾರಾಯಣಕರ ಅವರಿಗೆ ಖೊಟ್ಟಿ ಖರೀದಿ ಕರಾರು ಪತ್ರ ಮಾಡಿಕೊಟ್ಟು, ಅವರಿಂದ ₹25 ಲಕ್ಷ ಪಡೆದು ಮೋಸ ಮಾಡಿದ್ದರು. ಹಣ ಮರಳಿ ಕೇಳಿದಾಗ ಆರೋಪಿಗಳು ಹೆದರಿಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆ ಹಾಕಿದ್ದರು ಎಂದು ತಿಳಿಸಿದರು.

ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗಾಗಿ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಸಿಇಎನ್‌ ಕ್ರೈಂ ಠಾಣೆಯ ಪೊಲೀಸ್‌ ಇನ್‌ಸ್ಟೆಕ್ಟರ್‌ ರಮೇಶ ಅವಜಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ತಂಡವು ಕೇವಲ 48 ಗಂಟೆಗಳ ಒಳಗಾಗಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು, ಅವರಿಂದ ₹18.50 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ನಕಲಿ ಆಧಾರ್‌ ಕಾರ್ಡ್‌ ಮತ್ತು ಪಾನ್ ಕಾರ್ಡ್‌ ಸೃಷ್ಟಿ ಮಾಡಿದವರಿಗೆ ಪತ್ತೆ ಕಾರ್ಯ ನಡೆದಿದೆ ಎಂದು ತಿಳಿಸಿದರು. 

₹88.20 ಲಕ್ಷಕ್ಕೆ ಮಾರಾಟ:

ವಿಜಯಪುರ: ತಿಕೋಟಾ ತಾಲ್ಲೂಕಿನ ಬರಟಗಿ ಗ್ರಾಮದ ರೇವಣಸಿದ್ದಪ್ಪ ಮಲ್ಲಪ್ಪ ಕೋರಿ ಅವರಿಗೆ ಸೇರಿದ 7.35 ಎಕರೆ ಜಮೀನನ್ನು ಬೇರೊಬ್ಬರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಅರುಣಕುಮಾರ ಮಾಚಪ್ಪನವರ ಎಂಬುವವರಿಗೆ ₹88.20 ಲಕ್ಷಕ್ಕೆ ಮಾರಾಟ ಮಾಡಿ, ವಂಚಿಸಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅಕ್ಷರ ಅಲಿ ಜುಮನಾಳ, ಅಶೋಕ ರಾಠೋಡ, ಸಂತೋಷ ದಳಪತಿ, ಮಹಮ್ಮದ ರಫೀಕ ತುರ್ಕಿ,  ಪ್ರಕಾಶ ಚವ್ಹಾಣ, ಮೋಹನ ಹೆಗಡೆ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಖೊಟ್ಟಿ ದಾಖಲಾತಿಗಳನ್ನು ತಯಾರಿಸಿ, ಮೂಲ ಮಾಲೀಕನ ಹೆಸರಿನಲ್ಲಿ ಇರುವ ಜಮೀನನ್ನು ಅರುಣಕುಮಾರ ಮಾಚಪ್ಪನವರಿಗೆ ಮಾರಾಟ ಮಾಡಿ ಅವರಿಂದ, ₹88.20 ಲಕ್ಷ ಪಡೆದು ಮೋಸ ಮಾಡಿದ್ದರು ಎಂದರು.

ಆರೋಪಿಗಳಿಂದ ಖೊಟ್ಟಿ ದಾಖಲಾತಿಗಳಾದ ಆಧಾರ್‌ ಕಾರ್ಡ್, ಪ್ಯಾನ್ ಕಾರ್ಡ್, ಕೆನರಾ ಬ್ಯಾಂಕಿನ ಪಾಸ್‌ ಬುಕ್, ಎ.ಟಿ.ಎಂ. ಕಾರ್ಡ್, ಚೆಕ್‌ಬುಕ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ನಿವೇಶನ ಭೂಮಿ ಖರೀದಿ ಮತ್ತು ಮಾರಾಟದ ವಿಷಯದಲ್ಲಿ ಜಿಲ್ಲೆಯಲ್ಲಿ ಯಾರಿಗಾದರೂ ಮೋಸ ವಂಚನೆಯಾಗಿದ್ದರೇ ಸಂಬಂಧಿಸಿದವರು ದೂರು ನೀಡಿದರೆ ಅಗತ್ಯ ಕ್ರಮಕೈಗೊಳ್ಳಲಾಗುವುದು
ಋಷಿಕೇಶ ಸೋನಾವಣೆ ಎಸ್‌ಪಿ ವಿಜಯಪುರ
ಬ್ಯಾಂಕ್‌ಗೆ ಮೋಸ: ಆರೋಪಿಗಳ ಬಂಧನ
ವಿಜಯಪುರ: ಬಬಲೇಶ್ವರ ತಾಲ್ಲೂಕಿನ ನಿಡೋಣಿಯ ಜಿನ್ನಪ್ಪ ಮಂಜರಗಿ 2016 ರಲ್ಲಿ ತಮ್ಮ ಜಮೀನಿನ ಮೇಲೆ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರ್‌ನಲ್ಲಿ ₹3 ಲಕ್ಷ ಸಾಲ ಪಡೆದುಕೊಂಡಿದ್ದು ಮರು ಪಾವತಿಸಿದ ಬ್ಯಾಂಕಿನ ಖೊಟ್ಟಿ ಪೇಯ್ಡ್‌ ಪಾವತಿಯನ್ನು ತಯಾರಿಸಿ ಬೋಜಾ ಕಡಿಮೆ ಮಾಡಲು ಯತ್ನಿಸಿ ಬ್ಯಾಂಕಿಗೆ ಮೋಸ ಮಾಡಿರುವ ಕುರಿತು ಬ್ಯಾಂಕಿನ ಎಸ್‌ಡಿಎ ಇಮಾಮಸಾಬ್‌ ಸಯ್ಯದ್‌ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು. ಜಿನ್ನಪ್ಪ ಸಂತೋಷ ನಾವಿ ಮಹಾವೀರ ಮಂಜರಗಿ ಶ್ರೀಧರ ಅಮೀನಗಡ ತುಕಾರಾಮ ಸಾಳುಂಕೆ  ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದರು ಹೇಳಿದರು. ಆರೋಪಿಗಳು ಖೊಟ್ಟಿಯಾಗಿ ತಯಾರಿಸಿದ ಪೇಯ್ಡ್‌ ಪಾವತಿ ಬಾಂಡ್‌ ಪೇಪರ್ ಎಸ್.ಬಿ.ಐ ಬ್ಯಾಂಕಿನ ಹೆಸರಿನಲ್ಲಿ ತಯಾರಿಸಿದ ಸೀಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ವೃದ್ಧೆ ಜಮೀನು ಅನ್ಯರಿಗೆ ಮಾರಾಟ
ವಿಜಯಪುರ ನಗರದ ದಿವಟಗೇರಿ ನಿವಾಸಿ ನೀಲವ್ವ ನಿರ್ವಾಣಶೆಟ್ಟಿ ಅವರಿಗೆ ಸೇರಿದ 10 ಗುಂಟೆ  ಜಮೀನಿಗೆ ಸಂಬಂಧಿಸಿದಂತೆ ಬೇರೊಬ್ಬರ ಹೆಸರಲ್ಲಿ ಖೊಟ್ಟಿ ದಾಖಲಾತಿಗಳನ್ನು ತಯಾರಿಸಿ ₹ 5 ಲಕ್ಷಕ್ಕೆ ಭೂತನಾಳ ತಾಂಡದ  ಶಂಕರ  ಚವ್ಹಾಣ ಅವನಿಗೆ ಮಾರಾಟ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದರು. ಪ್ರಕರಣದ ಸಂಬಂಧ ಜಮೀನು ಖರೀದಿಸಿದ್ದ ಭೂತನಾಳ ತಾಂಡದ ಶಂಕರ ಚವ್ಹಾಣ(38) ಇಂಡಿ ತಾಲ್ಲೂಕಿನ ಹಳಗುಣಕಿಯ ಭೀಮರಾಯ ಕಟ್ಟಿಮನಿ(32) ದಿವಟಗೇರಿ ಗಲ್ಲಿಯ ನಾಗಪ್ಪ ಕೋಲಕಾರ(50) ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT