ಕೇಂದ್ರದ ಯೋಜನೆ ಜನರಿಗೆ ತಲುಪಲಿ

ವಿಜಯಪುರ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ‘ದಿಶಾ’ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯುತ್ ಪರಿವರ್ತಕಗಳ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲು ಆದ್ಯತೆ ನೀಡಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡ ಹಾಗೂ ಕೊಠಡಿಗಳ ದುರಸ್ತಿ ಬಗ್ಗೆ ಗಮನ ಹರಿಸಲು ಸರ್ವಶಿಕ್ಷಣ ಅಭಿಯಾನದ ಯೋಜನಾ ಸಮನ್ವಯಾಧಿಕಾರಿಗೆ ಸೂಚಿಸಿದರು.
ಪಿಂಚಣಿ ಸೌಲಭ್ಯಗಳು ಸರಿಯಾದ ಫಲಾನುಭವಿಗಳಿಗೆ ಸಿಗಬೇಕು. ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಯುವಕರಿಗೆ ತರಬೇತಿಯನ್ನು ಹಾಗೂ ಕೈಗಾರಿಕಾ ಕೇಂದ್ರದಿಂದ ಸಿಗುವ ಸಾಲಸೌಲಭ್ಯಗಳನ್ನು ನೀಡಲು ಸೂಚಿಸಿದರು.
ಅಲಿಯಾಬಾದ್ ರೈಲ್ವೆ ಮಾರ್ಗ ಹಾಗೂ ಮುಳವಾಡದ ಅಂಡರ್ ಪಾಸ್ ಕಾಮಗಾರಿಯನ್ನು ಪೂರ್ಣಗೊಳಿಸಲು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ವಿಮಾನ ನಿಲ್ದಾಣ ಕಾಮಗಾರಿ ಉತ್ತಮ ಹಂತದಲ್ಲಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಅವರು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಗರದಲ್ಲಿ ಕಸ ವಿಂಗಡಣೆ ಮಾಡಿ ಕಸ ವಿಲೇವಾರಿ ಮಾಡುವ ಕೆಲಸ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದು, ನಗರದ ಹೊರವಲಯದಲ್ಲಿ 20 ಎಕರೆ ಭೂಮಿಯಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಪ್ರತಿ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಂಸದರು ಮಾಸ್ಕ್ ವಿತರಿಸಿದರು.
****
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಲಭಿಸುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವ ಕಾರ್ಯವಾಗಬೇಕು, ನಿರ್ಮಾಣ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು
–ರಮೇಶ ಜಿಗಜಿಣಗಿ
ಸಂಸದ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.