ಶನಿವಾರ, ಅಕ್ಟೋಬರ್ 23, 2021
25 °C
ಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ಜೆಡಿಎಸ್‌ನಿಂದ ಸೂಕ್ತ ಅಭ್ಯರ್ಥಿ

ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಲಿ: ಕೋನರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಾಜ್ಯದ ಪ್ರಮುಖ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌.ಕೋನರೆಡ್ಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಕೆಪಿ ಮೂರನೇ ಹಂತದ ಅನುಷ್ಠಾನದಿಂದ ಬಾಗಲಕೋಟೆ, ವಿಜಯಪುರ ಜಿಲ್ಲೆಯ 75 ಹಳ್ಳಿಗಳು ಮುಳುಗುತ್ತವೆ. ಅಲ್ಲದೇ, ಸಾವಿರಾರು ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದ್ದು, ಒಂದು ಲಕ್ಷ ಕೋಟಿ ಹಣದ ಅಗತ್ಯವಿರುವುದರಿಂದ ರಾಜ್ಯ ಸರ್ಕಾರದಿಂದ ಈ ಯೋಜನೆ ಅನುಷ್ಠಾನ ಅಸಾಧ್ಯವಾಗಿರುವುದರಿಂದ ರಾಷ್ಟ್ರೀಯ ಯೋಜನೆಯಾದರೆ ಮಾತ್ರ ಇದರ ಅನುಷ್ಠಾನ ಸಾಧ್ಯ ಎಂದು ಹೇಳಿದರು.

ರಾಜ್ಯ ಸರ್ಕಾರ ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಈ ಸಂಬಂಧ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ, ಆಲಮಟ್ಟಿ ಜಲಾಶಯ ಎತ್ತರಿಸುವುದು, ಚಿಮ್ಮಲಗಿ ಏತನೀರಾವರಿ ಯೋಜನೆ ಅನುಷ್ಠಾನ ಹಾಗೂ  ಇಂಡಿ ಮತ್ತು ಚಡಚಣ ತಾಲ್ಲೂಕು ಸಮಗ್ರ ನೀರಾವರಿಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಎಲ್ಲ ಪಕ್ಷಗಳು ಬೆಂಬಲವಾಗಿ ನಿಲ್ಲಬೇಕು. ಈ ಹೋರಾಟ ಜಿಲ್ಲೆಯ ಭವಿಷ್ಯದ ದಿಕ್ಸೂಚಿಯಾಗಿದೆ ಎಂದರು.

ಈ ಹಿಂದೆ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದಾಗ ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳು ಅನುಷ್ಠಾನವಾಗಿವೆ. ಅದೇ ರೀತಿ ಇದೀಗ ಜಿಲ್ಲೆಯವರೇ ಆದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಹೆಚ್ಚು ಅನುಷ್ಠಾನವಾಗಬೇಕಿದೆ ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಿದ ಬಳಿಕ ಮುಳುಗಡೆಯಾಗುವ ಬಬಲೇಶ್ವರ ತಾಲ್ಲೂಕಿನ 14 ಹಳ್ಳಿಗಳ ಸಂತಸ್ತರ ಜಮೀನಿಗೆ ಸೂಕ್ತ ಪರಿಹಾರ ನೀಡಬೇಕು ಎಂಬ ವಿಷಯವಾಗಿ ಆ ಭಾಗದ ಮುಖಂಡರ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಇದಕ್ಕೆ ಜೆಡಿಎಸ್‌ ಬೆಂಬಲವೂ ಇದೆ ಎಂದರು.

ಬೆಲೆ ಏರಿಕೆಯೇ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಸಾಧನೆಯಾಗಿದೆ. ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.

ಎಲ್ಲ ಅಧಿಕಾರವನ್ನು ಶಾಸಕರ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ ಎಂದು ಆರೋಪಿಸಿದರು.

ಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ಜೆಡಿಎಸ್‌ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಿಶ್ಚಿತ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಇಂಡಿ, ಚಡಚಣ ಸಮಗ್ರ ನೀರಾವರಿಗೆ ಆಗ್ರಹಿಸಿ 20 ದಿನಗಳಿಂದ ಜೆಡಿಎಸ್‌ ನೇತೃತ್ವದಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಇದುವರೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಹವಾಲು ಆಲಿಸದಿರುವುದು ಖಂಡನೀಯ. ಸುಳ್ಳು ಕೇಸುಗಳನ್ನು ಹಾಕಿ ರೈತರ ಹೋರಾಟವನ್ನು ಹತ್ತಿಕ್ಕುವ ಕ್ರಮ ಖಂಡನೀಯ ಎಂದರು.

ಜೆಡಿಎಸ್‌ ಮುಖಂಡರಾದ ಡಾ.ರಿಯಾಜ್‌ ಫಾರೂಕಿ, ರಾಜು ಹಿಪ್ಪರಗಿ, ಎಸ್‌.ಎಸ್‌.ಖಾದ್ರಿ ಇನಾಂದಾರ್‌, ಸಿದ್ದು ಕಾಮತ್‌, ಕೌಶಿಕ್‌ ಶೇಖರ್‌, ಹುಸೇನ್‌ ಬಾಗಾಯತ್‌, ಮೆಹಬೂಬ ಭಕ್ಷಿ, ಜಾಫರ್‌ ಕಲಾದಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿರುವ ಸಂವಿಧಾನದ ಕಲಂ 371 ಜೆ ಅನ್ನು ಹಿಂದುಳಿದಿರುವ ಮುಂಬೈ ಕರ್ನಾಟಕ ಭಾಗಕ್ಕೂ ಅನ್ವಯಿಸಬೇಕು.
–ಎನ್‌.ಎಚ್‌.ಕೋನರೆಡ್ಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್‌ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು