ವಿಜಯಪುರ: ವಿವಿಧ ಕಾರಣಗಳಿಂದ ದೂರವಾಗಿದ್ದ 8 ದಂಪತಿಗಳು, ಜಿಲ್ಲೆಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಒಂದಾದರು.
ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಕಕ್ಷಿದಾರರು ಹಾಗೂ ವಕೀಲರ ಸಹಕಾರದಿಂದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಿದ್ದ ಹಲವಾರು ಪ್ರಕರಣಗಳ ಪೈಕಿ ಒಟ್ಟು 11,623 ಪ್ರಕರಣಗಳು ರಾಜಿ–ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.
ಆಸ್ತಿ ವಿಭಾಗ ಕೋರಿದ 145 ದಾವೆಗಳು, 142 ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ 173 ಪ್ರಕರಣಗಳು, ಜೀವನಾಂಶ ಕೋರಿ ಸಲ್ಲಿಸಿದ 46 ಪ್ರಕರಣಗಳು, ರಾಜಿಯಾಗಬಹುದಾದ 80 ಕ್ರಿಮಿನಲ್ ಪ್ರಕರಣಗಳು ಹಾಗೂ 77 ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
ಪ್ರಧಾನ ಕೌಟುಂಬಿಕ ನ್ಯಾಯಾಲಯ, ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ವಿಜಯಪುರ ಮತ್ತು ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯ ಸಿಂದಗಿ ನ್ಯಾಯಾಲಯಗಳಲ್ಲಿ 8 ದಂಪತಿಗಳನ್ನು ರಾಜಿ–ಸಂಧಾನ ಮಾಡಿಸಿ ಒಂದುಗೂಡಿಸಲಾಗಿದೆ.
ಪ್ರಧಾನ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಿವಾಜಿ ಅನಂತ ನಲವಡೆ ಮಾತನಾಡಿ, ಕಕ್ಷಿದಾರರು ಬಹಳ ವರ್ಷ ಅಲೆದಾಡುವ ಬದಲು ಜನತಾ ನ್ಯಾಯಾಲಯದಲ್ಲಿ ರಾಜಿ–ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡರೆ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದ್ದು, ಸಾರ್ವಜನಿಕರು ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಸಾಯಬಣ್ಣ ಹಾಗರಗಿ ಮಾತಾನಾಡಿ, ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸಾರ್ವಜನಿಕರು ಶೀಘ್ರ ನ್ಯಾಯ ಪಡೆದುಕೊಂಡು ಪರಸ್ಪರ ಸೌರ್ಹಾದತೆಯಿಂದ ಸಮಾಜದಲ್ಲಿ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೆ ವಕೀಲರು, ಕಕ್ಷಿದಾರರು ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮವಾಗಿ ಸಹಕರಿಸಿದ್ದಾರೆ. ಲೋಕ್ ಅದಾಲತ್‌ನಲ್ಲಿ ಸಹಭಾಗಿಯಾದ ಸಾರ್ವಜನಿಕರಿಗೆ, ಕಕ್ಷಿದಾರರಿಗೆ, ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಿವಾಜಿ ಅನಂತ ನಲವಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
Highlights - ರಾಜಿ–ಸಂಧಾನದಿಂದ ಹಣ–ಸಮಯ ಉಳಿತಾಯ ಜನತಾ ನ್ಯಾಯಾಲಯದ ಸದುಪಯೋಗ ಪಡೆಯಲು ಸಲಹೆ ಸೌಹಾರ್ದ ಜೀವನ ನಡೆಸಲು ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.