ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಕೋಟಾ| ದ್ರಾಕ್ಷಿ ನಾಡಲ್ಲಿ ಜೆರೇನಿಯಂ ಕೃಷಿ: ಡಿಪ್ಲೋಮಾ ಪದವಿಧರನ ಯಶೋಗಾಥೆ

Published 15 ಸೆಪ್ಟೆಂಬರ್ 2023, 5:04 IST
Last Updated 15 ಸೆಪ್ಟೆಂಬರ್ 2023, 5:04 IST
ಅಕ್ಷರ ಗಾತ್ರ

ತಿಕೋಟಾ: ಗುಣಮಟ್ಟದ ದ್ರಾಕ್ಷಿ ಬೆಳೆಗೆ ಹೆಸರುವಾಸಿಯಾದ ಈ ಭಾಗದಲ್ಲಿ ಹೊಸದಾದ ಜೆರೇನಿಯಂ ಕೃಷಿ ಮಾಡುವ ಕನಸು ಹೊತ್ತು ನೌಕರಿ ತೊರೆದ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಡಿಪ್ಲೊಮಾ ಪದವೀಧರ ಬಸವರಾಜ ಹಣಮಂತ ಬರಗಾಲ ಇದೀಗ ಲಕ್ಷಾಂತರ ರೂಪಾಯಿ ಆದಾಯ ಪಡೆದು ಮಾದರಿ ಎನಿಸಿದ್ದಾರೆ.

ತಮ್ಮ ಏಳು ಎಕರೆ ಜಮೀನಿನಲ್ಲಿ ಎರಡು ಎಕರೆ ದ್ರಾಕ್ಷಿ, ಒಂದು ಎಕರೆ ಜೆರೇನಿಯಂ ಕೃಷಿ ಮಾಡಿದ್ದಾರೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಲ್ವನದಿಂದ ₹ 5ಕ್ಕೆ ಒಂದರಂತೆ ಒಟ್ಟು ಹನ್ನೆರಡು ಸಾವಿರ ಜೆರೇನಿಯಂ ಖರೀದಿಸಿ ತಂದಿದ್ದಾರೆ. ಡ್ರಿಪ್ ಮತ್ತಿತರ ಖರ್ಚು ಸೇರಿ ಒಟ್ಟು ₹ 75 ಸಾವಿರ ಖರ್ಚು ಮಾಡಿದ್ದಾರೆ. ಸಾಲಿನಿಂದ ಸಾಲಿಗೆ ನಾಲ್ಕು ಅಡಿ, ಗಿಡದಿಂದ ಗಿಡಕ್ಕೆ ಒಂದೂವರೆ ಅಡಿ ಅಂತರದಲ್ಲಿ ಜೆರೇನಿಯಂ ನಾಟಿ ಮಾಡಿದ್ದಾರೆ.

ವರ್ಷದಲ್ಲಿ ನಾಲ್ಕು ಫಸಲು ತೆಗೆಯುತ್ತಿರುವ ಅವರು, ಮೊದಲ ಫಸಲಿಗೆ ₹ 75 ಸಾವಿರ, ಎರಡನೇ ಬೆಳೆ ₹ 70 ಸಾವಿರ, ಮೂರನೇ ಬೆಳೆ ₹ 70 ಸಾವಿರ, ನಾಲ್ಕನೇ ಬೆಳೆ ₹ 70 ಸಾವಿರ ಆದಾಯ ಪಡೆದಿದ್ದಾರೆ. ಇದರಿಂದಾಗಿ ಒಂದು ಎಕರೆಗೆ ₹ 2 ಲಕ್ಷ ವಾರ್ಷಿಕ ಲಾಭ ಪಡೆದಿದ್ದಾರೆ.

ಸುಗಂಧ ದ್ರವ್ಯಕ್ಕೆ ಬಳಕೆ: ಒಂದು ಟನ್ ತಪ್ಪಲು ಕಟಾವು ಮಾಡಿ ಯಂತ್ರಕ್ಕೆ ಹಾಕಿದಾಗ ಒಂದು ಕೆ.ಜಿ ಸುಗಂಧ ದ್ರವ್ಯ ಬರುತ್ತದೆ. ಒಂದು ಕೆ.ಜಿ ಸುಗಂಧ ದ್ರವ್ಯದ ಬೆಲೆ ₹ 11 ಸಾವಿರದಿಂದ ₹ 15 ಸಾವಿರ ಇದೆ. ಒಂದು ಬೆಳೆಗೆ, ಅಂದರೆ ಪ್ರತಿ ಮೂರು ತಿಂಗಳಿಗೆ 10–15 ಕೆ.ಜಿ ದ್ರವ್ಯ ಉತ್ಪಾದನೆ ಆಗುತ್ತದೆ. ಅದನ್ನು ಪ್ರತಿಷ್ಠಿತ ಸಾಬೂನು, ಸೆಂಟ್, ಔಷಧ, ಪರ್ಫ್ಯೂಮ್, ಅಗರಬತ್ತಿಗಳಲ್ಲಿ ಬಳಕೆ ಮಾಡುತ್ತಾರೆ.

ಸದ್ಯ ತಪ್ಪಲನ್ನು ಮಹಾರಾಷ್ಟ್ರಕ್ಕೆ ಕೊಂಡೊಯ್ದು ಅಲ್ಲಿ ದ್ರವ್ಯ ತೆಗೆಸುತ್ತಾರೆ. ಮುಂದಿನ ದಿನದಲ್ಲಿ ₹15 ಲಕ್ಷ ವೆಚ್ಚದ ಯಂತ್ರವನ್ನು ಖರೀದಿಸುವ ಯೋಜನೆಯನ್ನೂ ಅವರು ಹೊಂದಿದ್ದಾರೆ.

ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಜೆರೇನಿಯಂ ಬೆಳೆ ವೀಕ್ಷಿಸಿದ ಯುವ ರೈತ ಬಸವರಾಜ ಹಣಮಂತ ಬರಗಾಲ
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಜೆರೇನಿಯಂ ಬೆಳೆ ವೀಕ್ಷಿಸಿದ ಯುವ ರೈತ ಬಸವರಾಜ ಹಣಮಂತ ಬರಗಾಲ
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಜೆರೇನಿಯಂ ಬೆಳೆ ವೀಕ್ಷಿಸಿದ ಯುವ ರೈತ ಬಸವರಾಜ ಹಣಮಂತ ಬರಗಾಲ
ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಜೆರೇನಿಯಂ ಬೆಳೆ ವೀಕ್ಷಿಸಿದ ಯುವ ರೈತ ಬಸವರಾಜ ಹಣಮಂತ ಬರಗಾಲ
ದರ ಇಲ್ಲದ ಕಾರಣ ಏಳೆಂಟು ಟನ್ ಒಣದ್ರಾಕ್ಷಿ ಶೀತಲ ಘಟಕದಲ್ಲೇ ಹಾಗೇ ಇದೆ. ದ್ರಾಕ್ಷಿ ಬೆಳೆಗೆ ಖರ್ಚು ಹೆಚ್ಚು ಆದಾಯ ಕಡಿಮೆಯಾಗುತ್ತಿದೆ ಬ
– ಸವರಾಜ ಹಣಮಂತ ಬರಗಾಲ, ಜೆರೇನಿಯಂ ಕೃಷಿಕ ಬಿಜ್ಜರಗಿ
ದ್ರಾಕ್ಷಿ ಜೊತೆ ರೈತರು ಪರ್ಯಾಯವಾಗಿ ಬೆರೇನಿಯಂ ಬೆಳೆದರೆ ಕಡಿಮೆ ಖರ್ಚಿನಿಂದ ಹೆಚ್ಚಿನ ಆದಾಯ ಪಡೆಯಬಹುದು. ನೀರು ಔಷಧ ಖರ್ಚು ಕಡಿಮೆ
– ರಾಹುಲಕುಮಾರ ಬಾವಿಕಟ್ಟಿ , ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಡಬ್ಬು ಮೆಣಸಿನಕಾಯಿ ಕೃಷಿ
ಮಾವ ಮಾವ ಭೀಮರಾವ ರಾಮು ಕುಡಚಿ ಜೊತೆಗೂಡಿ ಜೆರೇನಿಯಂ ಜೊತೆ ಒಂದು ಎಕರೆ ಡಬ್ಬು ಮೆಣಸಿನಕಾಯಿ ಕೃಷಿಯನ್ನೂ ಬಸವರಾಜ ಮಾಡುತ್ತಿದ್ದಾರೆ. 10 ಕೆ.ಜಿ ಚೀಲಕ್ಕೆ ₹ 700ರಂತೆ ವಾರಕ್ಕೆ 80 ಚೀಲ ಮಾರಾಟ ಮಾಡಿ ₹ 60 ಸಾವಿರದ ವರೆಗೆ ಆದಾಯ ಪಡೆಯುತ್ತಿದ್ದಾರೆ. ಈಗಾಗಲೇ ₹ 1 ಲಕ್ಷ ಆದಾಯ ಬಂದಿದ್ದು ಇದೇ ದರ ಸಿಕ್ಕರೆ ₹ 8 ರಿಂದ 10 ಲಕ್ಷದ ಆದಾಯದ ನಿರೀಕ್ಷೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT