ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯವರೇ ಮೇಯರ್‌, ಉಪಮೇಯರ್‌: ಯತ್ನಾಳ

ಮಹಾನಗರ ಪಾಲಿಕೆ ಅಧಿಕಾರ; ಯಾವುದೇ ಅನುಮಾನ, ಊಹಾಪೂಹ ಬೇಡ
Last Updated 1 ನವೆಂಬರ್ 2022, 13:43 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಿತ. ಬಿಜೆಪಿಯವರೇಮೇಯರ್‌, ಉಪ ಮೇಯರ್‌ ಆಗಲಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ, ಊಹಾಪೂಹಗಳು ಬೇಡ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,17ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಈಗಾಗಲೇ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಪಕ್ಷ ಸೇರ್ಪಡೆಯಾಗಲಿದ್ದಾರೆ. ಇನ್ನೆರಡು ಜನ ಪಕ್ಷೇತರರು ಬಿಜೆಪಿ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಪಾಲಿಕೆಯಲ್ಲಿ ಬಿಜೆಪಿಗೆ ಬಹುಮತ ಲಭಿಸುವುದು ನಿಶ್ಚಿತ ಎಂದರು.

ಹಿಂದುತ್ವ ಮತ್ತು ಅಭಿವೃದ್ಧಿಯನ್ನು ನಗರದ ಜನತೆ ಒಪ್ಪಿ ಬಿಜೆಪಿಯನ್ನು ಪಾಲಿಕೆ ಚುನಾವಣೆಯಲ್ಲಿ ಬೆಂಬಲಿಸಿರುವ ಕಾರಣಕ್ಕೆ 17 ವಾರ್ಡ್‌ಗಳಲ್ಲಿ ಪಕ್ಷಕ್ಕೆ ಗೆಲುವು ಲಭಿಸಿದೆ. ವಿಜಯಪುರ ನಗರದ ಇತಿಹಾಸದಲ್ಲಿ ಇಷ್ಟೊಂದು ಸ್ಥಾನಗಳು ಬಿಜೆಪಿಗೆ ಲಭಿಸಿರಲಿಲ್ಲ ಎಂದು ಹೇಳಿದರು.

ಪಾಲಿಕೆ ಚುನಾವಣೆಯಲ್ಲಿ ನಗರದ ಪ್ರತಿ ವಾರ್ಡಿನ ವಾಸ್ತವಿಕತೆ ಅರಿತು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಬಿಜೆಪಿ ಟಿಕೆಟ್‌ ನೀಡುವ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡಲಿಲ್ಲ. ಯಾವುದೇ ಅಪಸ್ವರಕ್ಕೆ ಅವಕಾಶ ಇಲ್ಲದಂತೆ ಚುನಾವಣೆ ಮಾಡಿದ್ದೇವೆ. ಪಾಲಿಕೆ ಫಲಿತಾಂಶ ಬಿಜೆಪಿಗೆ ಹೊಸ ಹುರುಪು ನೀಡಿದೆ. ರಾಜ್ಯಕ್ಕೆ ಹೊಸ ಸಂದೇಶ ವಿಜಯಪುರದಿಂದ ರವಾನೆಯಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 130 ಸ್ಥಾನ ಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ನನ್ನ ವಿರುದ್ಧ ಅನೇಕರು ಹೂಡಿದ್ದ ರಾಜ್ಯಕೀಯ ಷಡ್ಯಂತ್ರ ನಡೆಯಲಿಲ್ಲ. ಜಿಲ್ಲೆಯ ಕಾಂಗ್ರೆಸ್‌ ಶಾಸಕರೊಬ್ಬರು ಮನೆಯಲ್ಲೇ ಕುಳಿತು ನಮ್ಮ ಅಭ್ಯರ್ಥಿಗಳನ್ನು ಸೋಲಿಸಲು ತಮ್ಮ ಬೆಂಬಲಿಗರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ನಿತ್ಯ ಫೋನ್‌ ಮೂಲಕ ನಿರ್ದೇಶನ ನೀಡುತ್ತಿದ್ದರು. ಅದಾವುದು ಉಪಯೋಗವಾಗಿಲ್ಲ ಎಂದರು

‘ಧೂಳಾಪುರ’ ಎಂಬ ಅಪಖ್ಯಾತಿಗೆ ಒಳಗಾಗಿದ್ದ ವಿಜಯಪುರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿಯಾಗುತ್ತಿದೆ. ಜನವರಿ ಒಳಗೆ ವಿಜಯಪುರದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ. ಎಂ.ಬಿ.ಪಾಟೀಲರ ಮನೆ ಎದುರಿನ ರಸ್ತೆ ಸೇರಿದಂತೆ ಅನೇಕ ಶಾಸಕರು, ಮಾಜಿ ಶಾಸಕರ ಮನೆ ಎದುರಿನ ರಸ್ತೆಗಳನ್ನು ನಾನೇ ಸಿಸಿ ರಸ್ತೆಗಳನ್ನಾಗಿ ಮಾಡಿದ್ದೇನೆ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು.

ಮುಖ್ಯಮಂತ್ರಿ ಅವರಿಗೆ ₹100 ಕೋಟಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಲ್ಲಿ ₹50 ಕೋಟಿಯನ್ನು ನಾಗಠಾಣ ಮತಕ್ಷೇತ್ರದ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಲು ಆದ್ಯತೆ ನೀಡಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ್, ಶಾಸಕರಾದಪಿ. ರಾಜೀವ, ಅಭಯ ಪಾಟೀಲ್, ಚಂದ್ರಶೇಖರ ಕವಟಗಿ ಬಸವರಾಜ್ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿಪತ್ರಿಕಾಗೋಷ್ಠಿಯಲ್ಲಿ ಇದ್ದರು.

*****

ಎಂ.ಬಿ.ಪಾಟೀಲರು ಪಾರದರ್ಶಕಚುನಾವಣೆ ಮಾಡಿದ್ದಾರೆಯೇ?

ವಿಜಯಪುರ: ‘ಪಾಲಿಕೆ ವಾರ್ಡ್‌ ಮರು ವಿಂಗಡಣೆ ಮತ್ತು ಮೀಸಲಾತಿಯಲ್ಲಿ ಪಕ್ಷಪಾತದಂತೆ ಕುತಂತ್ರಗಳನ್ನು ಬಿಜೆಪಿ ಅನುಸರಿಸಿತು’ ಎಂಬ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ,ಎಂ.ಬಿ.ಪಾಟೀಲರ ಆರೋಪ ಊಹಾಪೂಹದಿಂದ ಕೂಡಿದೆ. ಕ್ಷೇತ್ರ ವಿಂಗಡಣೆ, ಮೀಸಲಾತಿ ನಿಗದಿಯಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಎಂ.ಬಿ.ಪಾಟೀಲರು ತಮ್ಮ ಅಧಿಕಾರವಧಿಯಲ್ಲಿ ಏನೂ ಮಾಡಿಲ್ಲವೇ? ಅವರ ಅವಧಿಯಲ್ಲಿ ಎಲ್ಲ ಚುನಾವಣೆಗಳು ಪಾರದರ್ಶಕವಾಗಿ ನಡೆದಿವೆಯೇ? ಎಂದು ಮರು ಪ್ರಶ್ನಿಸಿದರು.

ವಾರ್ಡ್‌ ವಿಂಗಡಣೆ, ಮೀಸಲಾತಿ ವಿಷಯದಲ್ಲಿ ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಕೋರ್ಟ್‌ಗೆ ಹೋಗಿದ್ದರು. ಆದರೆ, ಕೋರ್ಟ್‌ ಅವರ ಕೇಸನ್ನು ವಜಾಗೊಳಿಸಿದೆ. ಎಂ.ಬಿ.ಪಾಟೀಲ ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು. ಅಂದೇ ವಿರೋಧಿಸಬೇಕಿತ್ತು ಎಂದರು.

ಪಾಲಿಕೆ ಚುನಾವಣೆಯಲ್ಲಿ ಎಂ.ಬಿ.ಪಾಟೀಲರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ಎಂ.ಬಿ.ಪಾಟೀಲರೊಂದಿಗೆ ಮಾತನಾಡದೇ ಆರು ತಿಂಗಳಾಗಿದೆ. ನಾನೊಬ್ಬ ಶಾಸಕನಿದ್ದೇನೆ. ಅವರ ಮಾತು ನಾನೇಕೆ ಕೇಳಬೇಕು, ನನ್ನ ಪಕ್ಷಕ್ಕೆ ನಾನು, ಅವರ ಪಕ್ಷಕ್ಕೆ ಅವರು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಈ ಮೊದಲು ಪಾಲಿಕೆಯಕೆಲವು ವಾರ್ಡ್‌ಗಳ ಆಕಾರ, ವಿಸ್ತೀರ್ಣಅವೈಜ್ಞಾನಿಕವಾಗಿದ್ದವು. ಮತದಾರರ ಸಂಖ್ಯೆಯಲ್ಲೂ ಭಾರೀ ವ್ಯತ್ಯಾಸಗಳಿದ್ದವು. ಇದನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದೆ. ಅದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಡಿಲಿಟ್‌ ಆಗಿರುವ ವಿಷಯದಲ್ಲೂ ನನ್ನ ಪಾತ್ರವಿಲ್ಲ. ಹೆಸರು ಡಿಲಿಟ್ ಆದವರಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲ, ಹಿಂದುಗಳೂ ಇದ್ದಾರೆ. ಎರಡು, ಮೂರು ಕಡೆ ಮತದಾರರ ಪಟ್ಟಿಯಲ್ಲಿ ಇದ್ದ ಹೆಸರುಗಳು ಡಿಲಿಟ್‌ ಆಗಿವೆ ಎಂದು ಸಮರ್ಥಿಸಿಕೊಂಡರು.

****

ವಿಜಯಪುರ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಗಲಾಟೆ, ಗಲಭೆ, ಹತ್ಯೆ, ಗುಂಡಾಗಿರಿ ಇಲ್ಲದೇ ಹಿಂದುಗಳು, ದುಡಿದು ತಿನ್ನುವ ಮುಸ್ಲಿಮರು ನೆಮ್ಮದಿ ಮತ್ತು ಸುರಕ್ಷಿತ ಜೀವನ ಸಾಗಿಸುತ್ತಿದ್ದಾರೆ

–ಬಸನಗೌಡ ಪಾಟೀಲ ಯತ್ನಾಳ,ಶಾಸಕ

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT