ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ಸಮ್ಮೇಳನ | ಮಾಧ್ಯಮಕ್ಕೆ ಪಾರದರ್ಶಕತೆ ಅಗತ್ಯ: ಎಂ.ಬಿ.ಪಾಟೀಲ

ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ ಸಮಾರೋಪ; ಪ್ರಶಸ್ತಿ ಪ್ರದಾನ
Last Updated 5 ಫೆಬ್ರುವರಿ 2023, 14:51 IST
ಅಕ್ಷರ ಗಾತ್ರ

ವಿಜಯಪುರ: ದೇಶ, ರಾಜ್ಯ ಕಟ್ಟುವಲ್ಲಿ ಪತ್ರಿಕೆಗಳು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ನಡೆದ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪತ್ರಕರ್ತರ ಕೈಯಲ್ಲಿ ಪತ್ರಿಕೆಗಳು ಉಳಿದಿಲ್ಲ, ಮಾಲೀಕರ ಅಧೀನದಲ್ಲಿ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಕೂಡ ಪತ್ರಕರ್ತರಾದವರು ತಮ್ಮ ತನ ಬಿಡಬಾರದು ಎಂದರು.

ವಚನ ಪಿತಾಮಹಾ ಡಾ.ಫ.ಗು. ಹಳಕಟ್ಟಿ ಅವರ ತ್ಯಾಗ, ಬದ್ಧತೆ ಗುಣವನ್ನು ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಳಕಟ್ಟಿ ಅವರು ಶಿವಾನುಭವ, ನವ ಕರ್ನಾಟಕ ಮಾಸ ಪತ್ರಿಕೆ ಆರಂಭಿಸಿ, ಮನೆಯನ್ನು ಮಾರಾಟ ಮಾಡಿ ಹಿತಚಿಂತಕ ಮುದ್ರಣಾಲಯ ತೆರೆದರು, ಆ ಮೂಲಕ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತರುವ ಜೊತೆಗೆ ಪತ್ರಿಕೋದ್ಯಮಕ್ಕೂ ಕೊಡುಗೆ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

ಮೈಸೂರು ಮಹಾರಾಜರು ಡಾ.ಹಳಕಟ್ಟಿ ಅವರಿಗೆ ಏನು ಬೇಕು ಕೇಳಿ ಎಂದಾಗ ಮುದ್ರಣಕ್ಕೆ ಪೂರಕವಾದ ಮೊಳೆಗಳನ್ನು ಕೊಡಿ ಎಂದು ಕೇಳಿದ್ದರು. ಈ ಹಳಕಟ್ಟಿ ಅವರ ಪ್ರಾಮಾಣಿಕತೆಯನ್ನು ಮಹಾರಾಜರು ಅಪಾರವಾಗಿ ಮೆಚ್ಚಿಕೊಂಡಿದ್ದರು. ಡಾ.ಫ.ಗು. ಹಳಕಟ್ಟಿ ಅವರ ತ್ಯಾಗ, ಬದ್ಧತೆಯನ್ನು ಪತ್ರಕರ್ತರು ಮೈಗೂಡಿಸಿಕೊಳ್ಳಬೇಕು ಎಂದರು.

ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇಯ ಅಂಗವಾಗಿದೆ. ಪತ್ರಕರ್ತರ ಛಲವೇ ಪ್ರಜಾಪ್ರಭುತ್ವಕ್ಕೆ ಬಲ. ಆದರೆ, ಈ ಛಲ ಪ್ರಜಾಪ್ರಭುತ್ವಕ್ಕೆ ಮಾರಕವಾಗಬಾರದು. ಈ ನಿಟ್ಟಿನಲ್ಲಿ ಸಮಾಜದ ಹಿತವನ್ನು ಗಮನದಲ್ಲಿರಿಸಿಕೊಂಡು ಕೆಲವೊಮ್ಮೆ ಸಮಯೋಚಿತ ನಿರ್ಧಾರ, ಬರವಣಿಗೆ ಅಗತ್ಯ, ಪ್ರಜಾಪ್ರಭುತ್ವ ರಕ್ಷಣೆಗೆ ಎಲ್ಲ ರಂಗಗಳು ಕೈ ಜೋಡಿಸಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ಮಾತನಾಡಿ, ವಿಶ್ವಾಸಾರ್ಹತೆ ಹಾಗೂ ಬದ್ಧತೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಾಧ್ಯಮ ವಲಯದಲ್ಲಿ ಪ್ರಶ್ನಾರ್ಥಕವಾಗಿವೆ. ಈ ನಿಟ್ಟಿನಲ್ಲಿ ಆತ್ಮಾವಲೋಕನಕ್ಕೆ ಸಕಾಲವಾಗಿದೆ ಎಂದರು.

ಕ್ರೀಯಾಶೀಲ ಮಾಧ್ಯಮವೇ ಪ್ರಜಾಪ್ರಭುತ್ವಕ್ಕೆ ಶಕ್ತಿ. ಪ್ರಜಾಪ್ರಭುತ್ವ ಸಧೃಡಗೊಳ್ಳಲು ಕ್ರೀಯಾಶೀಲ ಮಾಧ್ಯಮದ ಪಾತ್ರ ಮುಖ್ಯ. ನಮ್ಮ ದೇಶದಲ್ಲಿ ಮಾಧ್ಯಮಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ವಸ್ತುನಿಷ್ಠ ವರದಿಗಳ ಮೂಲಕ ಜನತೆ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮಾಧ್ಯಮ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ರಾಷ್ಟ್ರೀಯ ಸುರಕ್ಷತೆ ವಿಷಯ ಬಂದಾಗ ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳುವ ಜೊತೆಗೆ ಜವಾಬ್ದಾರಿಯುತವಾಗಿ ವರ್ತಿಸುವುದು ಅಗತ್ಯ ಎಂದು ಹೇಳಿದರು.

ಸೂಕ್ಷ್ಮ ಮತ್ತು ಮಹತ್ವದ ಪ್ರಕರಣಗಳ ಬಗ್ಗೆ ಕೋರ್ಟ್ ತೀರ್ಪು ನೀಡುವ ಮೊದಲೇ ಮಾಧ್ಯಮಗಳೇ ತೀರ್ಪು ಪ್ರಕಟಿಸಿದಂತೆ ಸುದ್ದಿ ಬಿತ್ತರಿಸುವ ಅನೇಕ ನಿದರ್ಶನಗಳಿವೆ. ಇದು ತೀರ್ಪಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಕಾರಣ ಮಾಧ್ಯಮಗಳು ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಮಾಜಿ ಶಾಸಕ ಡಾ.ಮಕ್ಬೂಲ್ ಬಾಗವಾನ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮೊಹ್ಮದ್‍ರಫೀಕ್ ಟಪಾಲ್, ಐಯುಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ ಶೆಟ್ಟಿ ಇದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಕಾರ್ಯಕ್ರಮ ನಿರ್ವಹಿಸಿದರು. ಸಾಧಕ ಪತ್ರಕರ್ತರಿಗೆ ವಿವಿಧ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

***

ಎಲ್ಲ ರಂಗಗಳು ಕಲುಷಿತವಾಗಿರುವಂತೆ ಪತ್ರಿಕಾ ರಂಗ ಕೂಡ ಕಲುಷಿತವಾಗಿದೆ. ಅನೇಕ ಪತ್ರಕರ್ತರು ಈ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಕೆಲಸ ಮಾಡುತ್ತಿದ್ದಾರೆ
–ಎಂ.ಬಿ. ಪಾಟೀಲ, ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT