ಮಂಗಳವಾರ, ಅಕ್ಟೋಬರ್ 19, 2021
23 °C

ತಿಕೋಟಾ: ಜೋರಾದ ಮಳೆ, ಗಾಳಿಗೆ ನೆಲಕ್ಕುರುಳಿದ ಕಬ್ಬು; ₹ 3 ಲಕ್ಷಕ್ಕೂ ಅಧಿಕ ಹಾನಿ

ಪರಮೇಶ್ವರ ಎಸ್.ಜಿ. Updated:

ಅಕ್ಷರ ಗಾತ್ರ : | |

Prajavani

ತಿಕೋಟಾ: ಜೋರಾಗಿ ಬೀಸಿದ ಗಾಳಿ ಹಾಗೂ ಮಳೆಯಿಂದ ಕಬ್ಬು ಬೆಳೆ ನೆಲಕ್ಕುರುಳಿ ಅಂದಾಜು ₹ 3 ಲಕ್ಷಕ್ಕೂ ಅಧಿಕ ಹಾನಿಯಾಗಿದೆ.

ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಕೃಷ್ಣಪ್ಪ ಅಟಪಳಕರ ಎಂಬುವ ರೈತರ ತೋಟದಲ್ಲಿ ಕಟಾವಿಗೆ ಬಂದಿದ್ದ ಎರಡು ಎಕರೆಗೂ ಅಧಿಕ ಕಬ್ಬಿನ ಗದ್ದೆಯ ಬೆಳೆ ನೆಲಕಚ್ಚಿದೆ. ಸಾಲ ಮಾಡಿ ₹ 1.5 ಲಕ್ಷ ಖರ್ಚು ಮಾಡಿದ ಬೆಳೆಯೂ ₹ 2 ರಿಂದ 3 ಲಕ್ಷ ಆದಾಯ ಆಗುವಂತಿತ್ತು. ಆದರೆ ಭಾನುವಾರ ರಾತ್ರಿ ಸುರಿದ ಮಳೆಯಿಂದ ರೈತನ ಕಣ್ಣಲ್ಲಿ ನೀರು ತರಿಸುವಂತಾಗಿದೆ.

ಈ ಭಾಗದ ಬಹುತೇಕ ರೈತರು ದ್ರಾಕ್ಷಿ ಬೆಳೆಗಾರರು. ದ್ರಾಕ್ಷಿಗೆ ಖರ್ಚು ಅಧಿಕವಾಗಿರುದರಿಂದ ಕಡಿಮೆ ಕರ್ಚಿನ ಬೆಳೆ ಕಬ್ಬನ್ನು 2.5 ಎಕರೆಯಷ್ಟು ನಾಟಿ ಮಾಡಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದರು. 

ಇದೇ ಗ್ರಾಮದ ಶಶಿಕಾಂತ ಗದ್ಯಾಳ ಎಂಬುವವರ ತೋಟದಲ್ಲಿಯೂ ಒಂದು ಎಕರೆ ಆಗುವಷ್ಟು ಕಬ್ಬು ನೆಲಕ್ಕುರುಳಿ ₹ 1.5 ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಕಬ್ಬಿನ ಬೆಳೆಗೆ ಗೊಬ್ಬರ ಹಾಕಿ ನೀರುಣಿಸಿ ಉತ್ತಮ ವ್ಯವಸ್ಥೆ ಮಾಡಿದ್ದರಿಂದ ಎತ್ತರವಾಗಿ ಬೆಳೆದಿತ್ತು. ಮಳೆ ಬಂದು ಅತಿ ತಂಪಾಗಿ ಹಾಗೂ ಜೋರು ಗಾಳಿ ಬೀಸಿದ್ದರಿಂದ ಕಬ್ಬಿನ ಪಡ ವಾಲಿ ನೆಲಕ್ಕಚ್ಚಿದೆ.

ಪ್ರತಿ ವರ್ಷ ಈ ಭಾಗದ ರೈತರಿಗೆ ಒಂದಲ್ಲ ಒಂದು ತೊಂದರೆ ಉಂಟಾಗಿ ಹಾನಿಯಾಗುತ್ತಲೇ ಇದೆ. ಮೊದಲು ನೀರಿಲ್ಲದೇ ಬರಗಾಲದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಕೊಂಡು ತಂದು ಬೆಳೆಗಳಿಗೆ ಹಾಕುತಿದ್ದರು. ಆಗ ಸಾಲ ಮಾಡಿ ಬೆಳೆ ಉಳಿಸಿಕೊಂಡರೂ, ಉತ್ತಮ ಆದಾಯ ಇರಲಿಲ್ಲ. ಎರಡು ವರ್ಷದಿಂದ ಉತ್ತಮ ಮಳೆ ಹಾಗೂ ಕಾಲುವೆ ನೀರಿನ ನೆರವಿನಿಂದ ಉತ್ತಮ ಬೆಳೆ ಬಂದಿತ್ತು. ಈ ವರ್ಷ ಮಳೆಗೆ ಅನ್ನದಾತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹುಬನೂರ, ಟಕ್ಕಳಕಿ, ಘೋಣಸಗಿ, ಬಾಬಾನಗರ, ಸೋಮದೇವರಹಟ್ಟಿ ಭಾಗಗಳಲ್ಲಿ ಜೋರಾದ ಮಳೆ ಹಾಗೂ ಗಾಳಿ ಬೀಸಿದೆ. ಕೆಲವು ರೈತರ ತೋಟದಲ್ಲಿ ತೊಗರಿ ಬೇಳೆ ಮಳೆ ನೀರಿನಿಂದ ಹಾನಿಯಾಗಿದೆ. ಹಾನಿಯಾದ ರೈತರ ತೋಟಗಳಿಗೆ ಗ್ರಾಮ ಲೆಕ್ಕಾಧಿಕಾರಿ ಎಂ.ಬಿ.ಖಾಜಿ, ಸಹಾಯಕ ಕೃಷಿ ಅಧಿಕಾರಿ ಎ‌.ಬಿ‌.ಪಾಟೀಲ ಭೇಟಿ ನೀಡಿ ವರದಿ ಪಡೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು