ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರಕ್ಕೆ ಸಚಿವ ಪಾಟೀಲ ಭೇಟಿ ಜೂನ್‌ 3ರಂದು

Published 1 ಜೂನ್ 2023, 12:20 IST
Last Updated 1 ಜೂನ್ 2023, 12:20 IST
ಅಕ್ಷರ ಗಾತ್ರ

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾದ ನಂತರ ಮೊದಲ ಬಾರಿಗೆ ಜೂನ್ 3 ರಂದು ತವರು ಜಿಲ್ಲೆಗೆ ಬರುತ್ತಿರುವ ಹಿನ್ನೆಲೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು, ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಿರ್ಧರಿಸಿದ್ದಾರೆ.

ನಗರದ ಫ.ಗು ಹಳಕಟ್ಟಿ ಭವನದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಮಾತನಾಡಿ, ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಜಿಲ್ಲೆಯಲ್ಲಿ ಜಲಕ್ರಾಂತಿ ಮಾಡಿದ್ದಾರೆ. ಈಗ ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾಗಿ ಕೈಗಾರಿಕೆ ಕ್ರಾಂತಿ ಮಾಡಲಿದ್ದಾರೆ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸೋಣ ಎಂದರು.

ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾಗಿ ಆ ಖಾತೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಈಗ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರಾಗಿ ಈ ಇಲಾಖೆಯ ವರ್ಚಸ್ಸನ್ನು ಹೆಚ್ಚಿಸಲಿದ್ದಾರೆ. ಅವರ ಕೆಲಸ ಕಾರ್ಯಗಳಿಗೆ  ಪೂರಕವಾಗಿ ನಾವೆಲ್ಲರೂ ಕೈ ಜೋಡಿಸೋಣ ಎಂದರು.

ಸ್ವಾಗತ ಸಮಾರಂಭದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು. 

ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಬಿ.ಆರ್.ಕೊಟ್ನಾಳ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧು ಗೌಡನವರ, ಆಯ್.ಎಸ್.ಕಾಳಪ್ಪನವರ, ಎಸ್.ಎ.ಬಿರಾದಾರ, ಡಾ. ಎಂ.ಎಸ್.ಮದಭಾವಿ, ಸುರೇಶ ಘೊಣಸಗಿ ಇದ್ದರು.

ಸ್ವಾಗತ ಮೆರವಣಿಗೆ ಸಿದ್ದತೆ:

ಜೂನ್‌ 3 ಶನಿವಾರ ಸಂಜೆ 6.30ಕ್ಕೆ ಸಚಿವರನ್ನು ಶಿವಾಜಿ ವೃತ್ತದಿಂದ ಗಾಂಧಿಚೌಕ್‌ ಮೂಲಕ ಸಿದ್ಧೇಶ್ವರ ದೇವಸ್ಥಾನಕ್ಕೆ ತೆರೆದ ವಾಹನದಲ್ಲಿ ಕರೆತರಲಾಗುವುದು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಕರಡಿ ಮಜಲು ನಾನಾ ಸಂಗೀತ ಮೇಳಗಳು ಡಿಜೆ ಸೇರಿದಂತೆ ಜನಪದ ತಂಡಗಳು ಪಾಲ್ಗೊಳಲಿವೆ. ಮೆರವಣಿಗೆ ನಡೆಯಲಿರುವ ಮಾರ್ಗದಲ್ಲಿ ವಿದ್ಯುತ್ ದೀಪಾಲಂಕಾರ ಅಳವಡಿಸಲು ನಿರ್ಧರಿಸಲಾಗಿದೆ. ವಿಜಯಪುರ ನಗರ ಬಬಲೇಶ್ವರ ಮತಕ್ಷೇತ್ರ ಸೇರಿದಂತೆ ಜಿಲ್ಲೆಯ ನಾನಾ ತಾಲ್ಲೂಕುಗಳಿಂದ ಸಾರ್ವಜನಿಕರು ಎಂ.ಬಿ.ಪಾಟೀಲರ ಅಭಿಮಾನಿಗಳು ಬೆಂಬಲಿಗರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT