ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಡದೊಡ್ಡಿ: ಭೂತನಾಳ ಕೆರೆಯಂಗಳದಲ್ಲಿ ಬೆಳದಿಂಗಳ ವಾಸ್ತವ್ಯ

ಪರಿಸರ ಪ್ರಜ್ಞೆಗೆ ವೇದಿಕೆ
Last Updated 24 ಜುಲೈ 2021, 13:53 IST
ಅಕ್ಷರ ಗಾತ್ರ

ವಿಜಯಪುರ: ಪರಿಸರ ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌, ಸೈಕ್ಲಿಸ್ಟ್‌ಗಳು, ಪೊಲೀಸರು, ಉಪನ್ಯಾಸಕರು, ಪರಿಸರಾಸಕ್ತರು, ವಿವಿಧ ಸಂಘ, ಸಂಸ್ಥೆಗಳ ಸದಸ್ಯರು ಸೇರಿದಂತೆ ನೂರಾರು ಜನರು ಅಲ್ಲಿ ಟೆಂಟ್‌ಗಳನ್ನು ನಿರ್ಮಿಸಿ ಗುರುಪೂರ್ಣಿಯ ಬೆಳದಿಂಗಳಲ್ಲಿ ಶನಿವಾರ ರಾತ್ರಿಯನ್ನು ವೈಶಿಷ್ಟವಾಗಿ ಆಸ್ವಾದಿಸಿದರು.

ಅದು ಯಾವುದೇ ಮೋಜು, ಮಸ್ತಿಯಿಂದ ಕೂಡಿದ ಬೆಳದಿಂಗಳ ವಾಸ್ತವ್ಯವಾಗಿರದೇ ಪರಿಸರ ಪ್ರೇಮ, ಪರಿಸರ ಜಾಗೃತಿ, ಜೀವವೈಧ್ಯತೆ ಸಂರಕ್ಷಣೆ ಬಗ್ಗೆ ಹೊಸ ಆಲೋಚನೆಗಳ ಸಮಾಗಾಮವಾಗಿತ್ತು.

ಹೌದು,ವಿಜಯಪುರದ ಕೋಟಿವೃಕ್ಷ ಅಭಿಯಾನ ಸಹಯೋಗದಲ್ಲಿ ನಗರದ ಹೊರವಲಯದ ಭೂತನಾಳ ಕೆರೆ ಅಂಗಳದ ಕರಾಡದೊಡ್ಡಿಯಲ್ಲಿ ನೂರಾರು ಟೆಂಟ್‌ಗಳನ್ನು ನಿರ್ಮಿಸಿಕೊಂಡು ಶನಿವಾರ ಸಂಜೆಯಿಂದ ಭಾನುವಾರ ಬೆಳಗಿನ ವರೆಗೆಜೀವವೈವಿಧ್ಯತೆ, ಪರಿಸರ ವ್ಯವಸ್ಥೆ ಪುನರ್ ಪ್ರತಿಷ್ಠಾಪಿಸುವ ಕುರಿತು ಗಹನವಾದ ಚರ್ಚೆಗಳು ನಡೆದವು. ಅಷ್ಟೇ ಅಲ್ಲದೇ, ಹತ್ತಾರು ಚಿಣ್ಣರೂ ಬೆಳೆದಿಂಗಳ ವಾಸ್ತವ್ಯದಲ್ಲಿ ಪಾಲ್ಗೊಂಡು ಸ್ವಚ್ಛಂದ ಪರಿಸರದಲ್ಲಿ ಮನದಣಿಯೆ ಆಟವಾಡಿ ನಲಿದರು.

ಈ ಅಪರೂಪದ ಕಾರ್ಯಕ್ರಮ ಆಯೋಜಕರಲ್ಲೊಬ್ಬರಾದ ಜಿಲ್ಲೆಯವರೇ ಆದ ಸದ್ಯ ಈಜಿಪ್ಟ್‌ನಲ್ಲಿ ನೆಲೆಸಿರುವ ಕೃಷಿ ಅರಣ್ಯ ವಿಜ್ಞಾನಿ ಡಾ.ಚಂದ್ರಶೇಖರ ಬಿರಾದಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ,ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನಿಸರ್ಗದೊಂದಿಗೆ ಸಮಯ ಕಳೆಯುವ ಕ್ಯಾಂಪಿಂಗ್ ಕಲ್ಚರ್ ರೂಢಿಯಲ್ಲಿದೆ. ಭಾರತದಲ್ಲಿ ಈ ಸಂಸ್ಕೃತಿ ಕಡಿಮೆ. ಪರಿಸರ ರಕ್ಷಣೆಗೆ ಮುಂದಾಗಬೇಕಿರುವ ಯುವಕರು ಟೆಂಟ್‌ಗಳನ್ನು ಹಾಕಿ, ಆ ಪ್ರಕೃತಿಯಲ್ಲಿ ಒಂದು ದಿನ ಕಳೆದರೆ ಸ್ವಾಭಾವಿಕವಾಗಿ ಅವರಲ್ಲಿ ಪರಿಸರದ ಕುರಿತು ಆಸಕ್ತಿ, ಪ್ರೀತಿ ಉಂಟಾಗುತ್ತದೆ. ಆ ನಿಟ್ಟಿನಲ್ಲಿ ಈ ಕ್ಯಾಂಪ್‌ ಆಯೋಜಿಸಲಾಗಿತ್ತು ಎಂದರು.

ವಿಜಯಪುರದ ಪರಿಸರಾಸಕ್ತ ಮಹಾಂತೇಶ ಬಿರಾದಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ,ವಿಜಯಪುರ ನಗರ ಸೇರಿದಂತೆ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಕಲಬುರ್ಗಿಯಿಂದಲೂ ಪರಿಸರಾಸಕ್ತರು ಆಗಮಿಸಿ, ತಮ್ಮ ಆಲೋಚನೆಗಳನ್ನು ಕ್ಯಾಂಪ್‌ನಲ್ಲಿ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕ್ಯಾಂಪ್‌ ಹೆಚ್ಚು ಆಯೋಜಿಸುವ ಉದ್ದೇಶವಿದೆ ಎಂದು ಹೇಳಿದರು.

ಕೆರೆ ಆವರಣದಲ್ಲಿ ನಿರ್ಮಿಸಲಾಗಿದ್ದ ಟೆಂಟ್‌ನಲ್ಲಿ ಒಬ್ಬರು, ಇಬ್ಬರು, ಐವರು ರಾತ್ರಿ ವಾಸ್ತವ್ಯ ಹೂಡಿ, ವಾಯು ವಿಹಾರ, ಬೆಳದಿಂಗಳ ಧ್ಯಾನ, ಬೆಳದಿಂಗಳ ಊಟ, ಕ್ಯಾಂಪ್‌ ಫೈರ್, ಪರಿಸರ ಸಂವಾದ ಮಾಡಿದರು. ಪ್ರತಿ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದವು ಮತ್ತು ಅಪರೂಪದವಾಗಿದ್ದವು ಎಂದು ಅಭಿಪ್ರಾಯಪಟ್ಟರು.

ಶ್ರೀಗಳ ಭೇಟಿ ಇಂದು:ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು, ಶಾಸಕ ಎಂ.ಬಿ.ಪಾಟೀಲ್‌ ಅವರು ಭೂತನಾಳ ಕೆರೆ ಆವರಣಕ್ಕೆ ಭಾನುವಾರ ಬೆಳಿಗ್ಗೆ 11ಕ್ಕೆ ಭೇಟಿ ನೀಡಿ, ಪರಿಸರ ಆಸಕ್ತರೊಂದಿಗೆ ಮಾತುಕತೆ ಮಾಡಲಿದ್ದಾರೆ ಎಂದು ತಿಳಿಸಿದರು.

***

ಪ್ರಕೃತಿ, ಪರಿಸರ, ಆಯುರ್ವೇದ, ಆಹಾರ ಸಂಸ್ಕೃತಿಯ ಬಗ್ಗೆ ಯುವಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕ್ಯಾಂಪ್‌ ಆಯೋಜಿಸಲಾಗಿತ್ತು

–ಡಾ.ಚಂದ್ರಶೇಖರ ಬಿರಾದಾರ,ಕೃಷಿ ಅರಣ್ಯ ವಿಜ್ಞಾನಿ

***

ಜಿಲ್ಲೆಯ ಯುವ ಜನರನ್ನು ಪರಿಸರಾಸಕ್ತರನ್ನಾಗಿಸುವುದು. ಅವರು ಪರಿಸರದಲ್ಲಿ ವಿನೋದಾ, ಆಹ್ಲಾದಕರವಾಗಿ ಕಾಲ ಕಳೆಯುವಂತೆ ಪ್ರೇರೇಪಿಸುವುದು ಈ ಕ್ಯಾಂಪ್‌ ಉದ್ದೇಶ

–ಮಹಾಂತೇಶ ಬಿರಾದಾರ,ಪರಿಸರಾಸಕ್ತ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT