ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜೀನಾಮೆ ನೀಡಿ, ರಾಜಕೀಯದಲ್ಲಿ ಸ್ವಚ್ಛವಾಗಿರಿ: ಯತ್ನಾಳ

Published : 28 ಸೆಪ್ಟೆಂಬರ್ 2024, 16:13 IST
Last Updated : 28 ಸೆಪ್ಟೆಂಬರ್ 2024, 16:13 IST
ಫಾಲೋ ಮಾಡಿ
Comments

ವಿಜಯಪುರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ನೀಡಬೇಕು. ಅವರು ಕಳ್ಳರು-ಇವರು ಕಳ್ಳರು, ಅವರು ತಿನ್ನುತ್ತಾರೆ-ಇವರು ತಿನ್ನುತ್ತಾರೆಂದು ನಾವೂ ತಿನ್ನೋದು ಬೇಡ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯದಲ್ಲಿ ಸ್ವಚ್ಛವಾಗಿರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ವಿಷಯ ಬಂದಾಗಲೆಲ್ಲ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರಾ? ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರಾ? ಎಂದು ಪ್ರಶ್ನಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ, ಆ ಪ್ರಶ್ನೆಯನ್ನು ಕುಮಾರಸ್ವಾಮಿಗೆ ಕೇಳಿ, ಯಡಿಯೂರಪ್ಪ ಹಾದಿಯಲ್ಲಿ ಸಿಗದಿದ್ದರೂ ಅವರ ಮನೆಗೆ ಹೋಗಿ ಕೇಳಿ, ಅವರಿಬ್ಬರ ಬಗ್ಗೆ ನಾ ಯಾಕೆ ಹೇಳಲಿ? ನನಗೇನು ಕೆಲಸವಿಲ್ಲವಾ? ಎಂದರು.

ಈ ಹಿಂದೆ ಎಲ್.ಕೆ.ಅಡ್ವಾಣಿ ವಿರುದ್ಧ ಕೇವಲ ₹ 50 ಲಕ್ಷ ಆರೋಪ ಕೇಳಿ ಬಂದಿತ್ತು. ಬೊಫೋರ್ಸ್ ಹಗರಣದ ಕುರಿತ ಜೈನ್ ಡೈರಿಯಲ್ಲಿ ‘ಎಲ್‌ಕೆಎ’ ಎಂದಷ್ಟೇ ಉಲ್ಲೇಖಿಸಲಾಗಿತ್ತು. ಆ ಕಾರಣಕ್ಕಾಗಿ ಅಡ್ವಾನಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆರೋಪದಿಂದ ಮುಕ್ತವಾಗುವವರೆಗೆ ಸಂಸತ್ ಪ್ರವೇಶ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದರು. ಅದು ಆದರ್ಶ. ಸಿದ್ದರಾಮಯ್ಯ ಸಹ ರಾಜೀನಾಮೆ ನೀಡುವ ಮೂಲಕ ರಾಜ್ಯಕ್ಕೆ ಹೊಸ ಆದರ್ಶವಾಗಬೇಕು. ಇಲ್ಲವಾದರೆ ಅವರು ಸಹ ಯಡಿಯೂರಪ್ಪ ಥರ ಆಗುತ್ತಾರೆ ಎಂದರು.

ತನಿಖೆ ಎದುರಿಸುತ್ತಿದ್ದರೂ ಸಿದ್ದರಾಮಯ್ಯ ಸಿಎಂ ಆಗಿರೋದು ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಅಧಿಕಾರಿಗಳಿಗೆ ಅವರ ಮೇಲೆ ಪಾರದರ್ಶಕವಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಲಾಗಲ್ಲ. ಅಧಿಕಾರಿಗಳು ಅವರ ವಿರುದ್ಧ ರಿಪೋರ್ಟ್ ಕೊಟ್ಟರೆ ವರ್ಗಾವಣೆ ಇಲ್ಲವೇ ಅಮಾನತ್ತಾಗುತ್ತಾರೆ. ಈ ಭಯದಲ್ಲಿ ಸರಿಯಾಗಿ ತನಿಖೆ ಮಾಡಲಾಗಲ್ಲ. ಸಿಎಂ ರಾಜೀನಾಮೆ ನೀಡಿದರೆ ನಿಷ್ಪಕ್ಷಪಾತವಾದ ತನಿಖೆ ಮಾಡಬಹುದು ಎಂದರು.

ಚುನಾವಣೆ ಬಾಂಡ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಏಕೆ ರಾಜೀನಾಮೆ ನೀಡಿಲ್ಲ ಎಂಬ ಕಾಂಗ್ರೆಸ್‌ನವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಎಲ್ಲ ಪಕ್ಷಗಳೂ ಚುನಾವಣಾ ಬಾಂಡ್‌ಗಳನ್ನು ತೆಗೆದುಕೊಂಡಿವೆ. ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ್‌ ಪುತ್ರನೂ ಚುನಾವಣಾ ಬಾಂಡ್ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಕೂಡ ತೆಗೆದುಕೊಂಡಿದೆ. ಹಾಗಾದರೆ, ರಾಹುಲ್ ಗಾಂಧಿ ರಾಜೀನಾಮೆ ಕೊಡುತ್ತಾರಾ? ಸುಪ್ರೀಂ ಕೋರ್ಟ್ ಚುನಾವಣೆ ಬಾಂಡನ್ನು ಯಾರು ತೆಗೆದುಕೊಳ್ಳಬಾರದು ಎಂದು ಹೇಳಿದೆ. ಹೀಗಾಗಿ ಎಲ್ಲರೂ ಬಿಟ್ಟಿದ್ದಾರೆ. ಆದರೆ, ಬಿಜೆಪಿಗೆ ಹೆಚ್ಚಿನ ಜನರು ಹಣ ನೀಡಿರುವುದರಿಂದ ಅವರಿಗೆ ತಾಪವಾಗಿದೆ ಎಂದು ಯತ್ನಾಳ ಕುಟುಕಿದರು.

ಬಿಜೆಪಿ ಎರಡನೇ ಪಾದಯಾತ್ರೆ

ರಾಜ್ಯದಲ್ಲಿ ಬಿಜೆಪಿಯಿಂದ ಮತ್ತೊಂದು ಸುತ್ತಿನ ಪಾದಯಾತ್ರೆ ಹಮ್ಮಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ ಈ ಕುರಿತು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ. ಈವರೆಗೆ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಬಸವಕಲ್ಯಾಣದಿಂದ ಹಿಡಿದು ಉತ್ತರ ಕರ್ನಾಟಕದ ಎಲ್ಲ ಕಡೆ ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಪಾದಯಾತ್ರೆಯನ್ನು ಬೆಂಗಳೂರಲ್ಲಿ ಅಂತ್ಯ ಮಾಡಿ ಸಮಾವೇಶ ಮಾಡುವ ಯೋಜನೆ ಇದೆ. ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT