ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಗ್ರ ಅಭಿವೃದ್ಧಿ ನಿರೀಕ್ಷೆಯಲ್ಲಿ ಮುದ್ದೇಬಿಹಾಳ

ಉಪವಿಭಾಗಾಧಿಕಾರಿ ಕಚೇರಿ, ಆರ್‌ಟಿಓ ಕಚೇರಿ ಸ್ಥಾಪನೆ ಬೇಡಿಕೆ
ಶಂಕರ ಈ.ಹೆಬ್ಬಾಳ
Published 2 ಫೆಬ್ರುವರಿ 2024, 5:22 IST
Last Updated 2 ಫೆಬ್ರುವರಿ 2024, 5:22 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಈ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಮುದ್ದೇಬಿಹಾಳ ಮತಕ್ಷೇತ್ರದ ಪ್ರವಾಸ ಕೈಗೊಂಡಿರುವ  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎನ್ನುವ ನಿರೀಕ್ಷೆ ಜನರಲ್ಲಿದೆ.

ಮುದ್ದೇಬಿಹಾಳ ತಾಲ್ಲೂಕಿನ ರೈತರು ಕೃಷ್ಣಾನದಿಯ ನೀರನ್ನು ಹರಿದು ಹೋಗಲು ಭೂಮಿಯನ್ನು ನೀಡಿದ್ದಾರೆ. ಅದರ ಫಲವಾಗಿ ನಾರಾಯಣಪುರ ಮುಂಭಾಗದಲ್ಲಿ ಬರುವ ಜಿಲ್ಲೆಗಳ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ನೀರಾವರಿ ಸೌಲಭ್ಯ ಇನ್ನೂ ಕ್ಷೇತ್ರದಲ್ಲಿ ಪೂರ್ಣಗೊಂಡಿಲ್ಲ ಎನ್ನುವ ಕೊರಗು ಅನ್ನದಾತರಲ್ಲಿದೆ. ಇದಕ್ಕಾಗಿ ಸಿಎಂ ವಿಶೇಷ ಪ್ಯಾಕೇಜ್ ಪ್ರಕಟಿಸುವರೇ ಎಂಬ ನಿರೀಕ್ಷೆ ರೈತರಲ್ಲಿದೆ.

2017-18 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಕೃಷಿ ಸಂಶೋಧನಾ ಕೇಂದ್ರವನ್ನು ಮುದ್ದೇಬಿಹಾಳದಲ್ಲಿ ಸ್ಥಾಪಿಸಲು ಅನುದಾನ, ಮುದ್ದೇಬಿಹಾಳ, ನಿಡಗುಂದಿ ಹಾಗೂ ತಾಳಿಕೋಟಿ ತಾಲೂಕಿನ ರೈತರಿಗೆ ಮರೀಚಿಕೆಯಾಗಿರುವ ಆಧುನಿಕ ಕೃಷಿ ತಂತ್ರಜ್ಞಾನಗಳ ಪರಿಚಯ, ವೈಜ್ಞಾನಿಕ ಸಲಹೆ, ತರಬೇತಿಗಳು, ಅಧ್ಯಯನ ಪ್ರವಾಸಗಳಂತಹ ಸೌಲಭ್ಯಗಳು ದೊರಕಿಸಿಕೊಡಲು ಕೃಷಿ ವಿಸ್ತರಣೆ ಶಿಕ್ಷಣ ಕೇಂದ್ರ ಮುದ್ದೇಬಿಹಾಳಕ್ಕೆ ಸ್ಥಳಾಂತರಿಸಲು ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವುದು ಜನರ ಅಪೇಕ್ಷೆ.

ಐ.ಸಿ.ಎ.ಆರ್ ನಿಯಮಾವಳಿಗಳಿಗೆ ವಿರುದ್ಧವಾಗಿ ಒಂದೇ ಕ್ಯಾಂಪಸ್‌ನಲ್ಲಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಜಲಾನಯನ ತರಬೇತಿ ಕೇಂದ್ರ, ಕೃಷಿ ವಿಸ್ತರಣೆ ಶಿಕ್ಷಣ ಕೇಂದ್ರ, ಕೃಷಿ ಮಹಾವಿದ್ಯಾಲಯ, ಪಕ್ಕದಲ್ಲಿ ತೋಟಗಾರಿಕೆ ವಿಸ್ತರಣೆ ಮತ್ತು ಸಂಶೋಧನಾ ಕೇಂದ್ರ ಕಾರ್ಯನಿರ್ವಸುತ್ತಿದ್ದು ಜಿಲ್ಲಾ ಕೇಂದ್ರದಿಂದ ಅತೀ ಹೆಚ್ಚು ದೂರದಲ್ಲಿರುವ ಮುದ್ದೇಬಿಹಾಳ ಮತ್ತು ಸುತ್ತಲಿನ ತಾಲೂಕುಗಳ ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಕೂಗು ಬಹಳ ದಿನಗಳಿಂದ ಇದೆ.

ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ರೈತರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲು ದೂರದ 80 ಕಿ.ಮೀ ಅಂತರದಲ್ಲಿರುವ ಜಿಲ್ಲಾ ಕೇಂದ್ರದಲ್ಲಿರುವ ವಿಜಯಪುರಕ್ಕೆ ಹೋಗಬೇಕಿದೆ. ಈ ಅಲೆದಾಟ ತಪ್ಪಿಸಲು ಮುದ್ದೇಬಿಹಾಳದಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ತೆರೆದು ಮುದ್ದೇಬಿಹಾಳ, ತಾಳಿಕೋಟಿ ಮತ್ತು ನಿಡಗುಂದಿ ತಾಲ್ಲೂಕಿನ ರೈತರಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಬೇಕು ಎಂಬ ಆಗ್ರಹವೂ ರೈತರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT