ಬುಧವಾರ, ಸೆಪ್ಟೆಂಬರ್ 22, 2021
21 °C
ತಾಯಿಯ ಹಲ್ಲಿನ ಸೆಟ್‌ ಒಡೆದಳೆಂಬ ಕಾರಣಕ್ಕೆ ಆರು ವರ್ಷದ ಬಾಲಕಿ ಕೊಲೆ

ಬೋಳೆಗಾಂವ: ಬಾಲಕಿ ಕೊಲೆ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ಹಾಗೂ ಭಾರೀ ಸೂಕ್ಷ್ಮವಾಗಿದ್ದ ಬೋಳೆಗಾಂವ ಬಾಲಕಿ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊರ್ತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬೋಳೆಗಾಂವ ಗ್ರಾಮದಲ್ಲಿ ಆಗಸ್ಟ್‌ 9 ರಂದು ಆರು ವರ್ಷ ವಯಸ್ಸಿನ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಆರೋಪಿ ಸಂಗನಗೌಡ ಬಾಬುಗೌಡ ಬಿರಾದಾರ(24) ಎಂಬಾತನನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೋಳೆಗಾಂವ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿಯು ಫುಸಲಾಯಿಸಿ, ತನ್ನ ಹೊಲಕ್ಕೆ ಕರೆದುಕೊಂಡು ಹೋಗಿ ಬಡಿಗೆಯಿಂದ ಹೊಡೆದು ಕೊಲೆ ಮಾಡಿ, ಶವವನ್ನು ಪಕ್ಕದ ಹೊಲದಲ್ಲಿ ಬಿಸಾಡಿ ಹೋಗಿದ್ದನು ಎಂದು ಹೇಳಿದರು.

ಈ ಸಂಬಂಧ ಇಂಡಿ ಉಪ ವಿಭಾಗದ ಡಿಎಸ್‍ಪಿ ಶ್ರೀಧರ್ ದೊಡ್ಡಿ ನೇತೃತ್ವದಲ್ಲಿ ಇಂಡಿ ಸಿಪಿಐ ರಾಜಶೇಖರ, ಹೊರ್ತಿ ಪಿಎಸ್‍ಐ  ಎನ್.ಬಿ.ಶಿವೂರ ಹಾಗೂ ಸಿಬ್ಬಂದಿ ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.

ವಿಶೇಷ ತನಿಖಾ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.  

ಕೊಲೆಗೆ ಕಾರಣ: ಸುಮಾರು ಎರಡು ತಿಂಗಳ ಹಿಂದೆ ಆರೋಪಿ ಮನೆಯ ಮುಂದೆ ಆತನ ತಾಯಿ ಹಲ್ಲಿನ ಸೆಟ್‌ ತೆಗೆದಿಟ್ಟಿದ್ದರು. ಕೊಲೆಯಾದ  ಬಾಲಕಿಯು ಆಟವಾಡುವಾಗ ಹಲ್ಲಿನ ಸೆಟ್‌ ಅನ್ನು ಕಲ್ಲಿನಿಂದ ಜಜ್ಜಿ ಒಡೆದು ಹಾಕಿದ್ದರಿಂದ ಎರಡು ಕುಟುಂಬದವರ ಮಧ್ಯೆ ಜಗಳವಾಗಿತ್ತು. ಇದೇ ಸಿಟ್ಟಿನಿಂದ ಆರೋಪಿಯು ಬಾಲಕಿಯನ್ನು ಕೊಲೆ ಮಾಡಿರುವುದು ವಿಚಾರಣೆ ವೇಳೆ ಬಯಲಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ಧಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಅನೈತಿಕ ಸಂಬಂಧ ಕೊಲೆ; ಆರೋಪಿಗಳ ಬಂಧನ 

ವಿಜಯಪುರ: ಬಾಗಲಕೋಟೆ ಜಿಲ್ಲೆ ಇಳಕಲ್‌ ತಾಲ್ಲೂಕಿನ ಇಂಗಳಗಿ ಗ್ರಾಮದ ಯಮನಪ್ಪ ಮಡಿವಾಳರ(21) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಬಳಗಾನೂರ ಗ್ರಾಮದ ಮೂವರು ಆರೋಪಿಗಳನ್ನು ತಾಳಿಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಳಗಾನೂರ ಗ್ರಾಮದ ವೀರೇಶ ಮಡಿವಾಳರ, ಮಡಿವಾಳಪ್ಪ ಮಡಿವಾಳರ, ಕಾಶಿನಾಥ ಮಡಿವಾಳರ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು.

ಆರೋಪಿ ವೀರೇಶ ಮಡಿವಾಳರನ ಪತ್ನಿ ರೂಪಾ ಅವಳೊಂದಿಗೆ ಯಮನಪ್ಪ ಮಡಿವಾಳರ ಅನೈತಿಕ ಸಂಬಂಧ ಹೊಂದಿರುವುದೇ ಕೊಲೆಗೆ ಕಾರಣ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಹೇಳಿದರು.

ಕೊಲೆಯಾದ ಯಮನಪ್ಪ ಮಡಿವಾಳರನನ್ನು ಆರೋಪಿಗಳು ಆಗಸ್ಟ್‌ 6 ರಂದು ಹಣ ಕೊಡುತ್ತೇವೆ ಎಂದು ಬಳಗಾನೂರಿಗೆ ಕರೆಯಿಸಿಕೊಂಡು ರಾತ್ರಿ ಕೊಲೆ ಮಾಡಿ, ಶವವನ್ನು ತಂಗಡಗಿ ಬಳಿ ಕೃಷ್ಣಾ ನದಿಗೆ ಎಸೆದು ಹೋಗಿದ್ದರು ಎಂಬುದು ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದು ತಿಳಿಸಿದರು.

ಬಸಬನ ಬಾಗೇವಾಡಿ ಡಿಎಸ್‌ಪಿ ಅರುಣಕುಮಾರ ಕೋಳೂರ, ಮುದ್ದೇಬಿಹಾಳ ಸಿ.ಪಿ.ಐ ಆನಂದ ವಾಘಮೋಡೆ, ಪಿ.ಎಸ್.ಐ ವಿನೋದ ದೊಡಮನಿ ನೇತೃತ್ವದ ತನಿಖಾ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

***

ಬೋಳೆಗಾಂವ ಪ್ರಕರಣವು ಅತೀ ಸೂಕ್ಷ್ಮವಾಗಿತ್ತು. ಆರೋಪಿಯು ಯಾವುದೇ ಪುರಾವೆ ಬಿಡದಿದ್ದ ಕಾರಣ ಪತ್ತೆ ಕಾರ್ಯ ಕಷ್ಟಕರವಾಗಿತ್ತು. ತನಿಖಾ ತಂಡ ಯಶಸ್ವಿಯಾಗಿದೆ

–ಎಚ್‌.ಡಿ.ಆನಂದ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು