ವರದಿ – ರಮೇಶ ಎಸ್. ಕತ್ತಿ
ಆಲಮೇಲ: ಪಟ್ಟಣದಲ್ಲಿ 15 ವರ್ಷಗಳಿಂದ ಮುಸ್ಲಿಂ ಮುಖಂಡ ಮೈಬೂಬ ಮಸಳಿ ಅವರ ಸಾರಥ್ಯದಲ್ಲಿ ಗಣೇಶೋತ್ಸವ ಭಾವೈಕ್ಯದೊಂದಿಗೆ ಆಚರಿಸಲಾಗುತ್ತಿದೆ. ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಗಜಾನನ ಮಹಾಮಂಡಳಿಗೆ ಅವರು ಅಧ್ಯಕ್ಷರಾಗಿ ಪ್ರತಿ ವರ್ಷ ಅವಿರೋಧ ಆಯ್ಕೆ ಆಗುತ್ತಿರುವುದು ವಿಶೇಷ.
‘ಆಲಮೇಲದ 15 ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತೇವೆ. ಎಲ್ಲಾ ಗಣೇಶೋತ್ಸವ ಸಮಿತಿಗಳನ್ನು ಒಟ್ಟು ಸೇರಿಸಿ, ಗಜಾನನ ಮಹಾಮಂಡಳಿ ರಚಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದ ಮಾದರಿಯಲ್ಲಿ ಐದು ದಿನ ಅದ್ಧೂರಿಯಾಗಿ ಹಬ್ಬ ಆಚರಿಸಿ, ಮೂರ್ತಿಗಳನ್ನು ವಿಸರ್ಜಿಸುತ್ತೇವೆ’ ಎಂದು ಮಹಾಮಂಡಳಿ ಸದಸ್ಯರು ತಿಳಿಸಿದರು.
‘ಸೆ.13ರಂದು ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಗಜಾನನ ಮಹಾಮಂಡಳಿ ಸಭೆಯಲ್ಲಿ ಮೈಬೂಬ ಮಸಳಿ ಅವರನ್ನು ಪುನಃ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು’ ಎಂದರು.
‘ಆಲಮೇಲದಲ್ಲಿ ಆಚರಿಸಲಾಗುವ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಇತಿಹಾಸವಿದೆ. ಹಿಂದೂ, ಮುಸ್ಲಿಂ ಎಂಬ ಬೇಧ ಇಲ್ಲ. ಹಬ್ಬಕ್ಕೆ ಸಾಂಸ್ಕೃತಿಕ ಮೆರುಗು ತರಲು ಹಲವು ಕಾರ್ಯಕ್ರಮಗಳ ಆಯೋಜನೆ, ಸ್ತಬ್ಧಚಿತ್ರಗಳ ಸಿದ್ಧತೆಯನ್ನು ಎಲ್ಲರೂ ಸೇರಿ ಮಾಡುತ್ತೇವೆ. ಅಪಾರ ಸಂಖ್ಯೆಯಲ್ಲಿ ಜನರು ಗಣೇಶ ಮೂರ್ತಿಗಳನ್ನು ನೋಡಲು ಬರುವುದರ ಜೊತೆಗೆ ವಿಸರ್ಜನಾ ಮೆರವಣಿಗೆಯಲ್ಲೂ ಭಾಗವಹಿಸುತ್ತಾರೆ’ ಎಂದು ಮೈಬೂಬ ಮಸಳಿ ತಿಳಿಸಿದರು.
ಸುಂಬಡ ಗಲ್ಲಿಯಲ್ಲೂ ಪ್ರತಿಷ್ಠಾಪನೆ: ಆಲಮೇಲ ಪಟ್ಟಣದಲ್ಲಿ ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿರುವ ಸುಂಬಡ ಗಲ್ಲಿಯಲ್ಲಿ ಇದೇ ಮೊದಲ ಬಾರಿಗೆ ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. ಅಲ್ಲಿನ ಗಜಾನನ ಮಂಡಳಿಯ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಸದಸ್ಯ ಸಾದಿಕ್ ಸುಂಬಡ ಮತ್ತು ಉಪಾಧ್ಯಕ್ಷರಾಗಿ ಅಬ್ಬಾಸಲಿ ಕಮಲಾಪುರ ಆಯ್ಕೆಯಾಗಿದ್ದಾರೆ.
15 ವರ್ಷಗಳಿಂದ ನನ್ನನ್ನು ಆಯ್ಕೆ ಮಾಡುತ್ತಲೇ ಬಂದಿದ್ದಾರೆ. ಹಿಂದೂ ಮುಸ್ಲಿಮರು ಸೇರಿಯೇ ಅತ್ಯಂತ ಶ್ರದ್ದೆ ಭಕ್ತಿಯಿಂದ ಉತ್ಸವ ಮಾಡುತ್ತಿದ್ದೇವೆಮೈಬೂಬ ಮಸಳಿ ಅಧ್ಯಕ್ಷ ಗಜಾನನ ಮಹಾಂಡಳ ಆಲಮೇಲ
ಜಾತಿ–ಧರ್ಮಗಳ ವಿಷಯದಲ್ಲಿ ವೈಮನಸ್ಸು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆಲಮೇಲದಂತಹ ಪುಟ್ಟ ಊರು ಸೌಹಾರ್ದದ ಸಂದೇಶ ನೀಡುತ್ತಿರುವುದು ಖುಷಿಯ ಸಂಗತಿಸಿದ್ಧರಾಮ ಉಪ್ಪಿನ ಸಾಹಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.