ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಶಾಪದಿಂದ ಸರ್ಕಾರ ಪಥನ: ನಳಿನ್‌ಕುಮಾರ್‌ ಕಟೀಲ್‌

Published 4 ನವೆಂಬರ್ 2023, 16:20 IST
Last Updated 4 ನವೆಂಬರ್ 2023, 16:20 IST
ಅಕ್ಷರ ಗಾತ್ರ

ವಿಜಯಪುರ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡವು ಶನಿವಾರ ತಿಕೋಟಾ ತಾಲ್ಲೂಕಿನ ಜಾಲಗೇರಿ, ನಾಗಠಾಣ ಕ್ಷೇತ್ರದ ಜುಮನಾಳ ಮತ್ತು ಬಸವನ ಬಾಗೇವಾಡಿ ತಾಲ್ಲೂಕಿನ ಮುಳವಾಡ ಮತ್ತು ಕೊಲ್ಹಾರದಲ್ಲಿ ಬರಕ್ಕೆ ತುತ್ತಾದ ರೈತರ ಮೆಕ್ಕೆಜೋಳ, ಉಳ್ಳಾಗಡ್ಡಿ, ತೊಗರಿ, ಕಬ್ಬಿನ ಹೊಲಗಳಿಗೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲಿಸಿತು.

ಬರದಿಂದ ಸಂಕಷ್ಟಕ್ಕೆ ಒಳಗಾದ ರೈತರ ಅಹವಾಲು ಆಲಿಸಿದ ಕಟೀಲ್‌, ನಿಮ್ಮ ಹೊಲಕ್ಕೆ ಸ್ಥಳೀಯ ಶಾಸಕರು, ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದಾರೆಯೇ? ಪರಿಹಾರ ನೀಡಿದ್ದಾರೆಯೇ? ಎಷ್ಟು ಹೊತ್ತು ಕರೆಂಟ್‌ ಕೊಡುತ್ತಿದ್ದಾರೆ? ಯಾವ ಹೊತ್ತಿನಲ್ಲಿ ಕರೆಂಟ್‌ ಕೊಡುತ್ತಿದ್ದಾರೆ? ಎಂದು ರೈತರನ್ನು ಪ್ರಶ್ನಿಸಿದರು. 

‘ಇದುವರೆಗೂ ಯಾರೂ ನಮ್ಮ ಹೊಲಕ್ಕೆ ಭೇಟಿ ನೀಡಿಲ್ಲ, ಸಂಕಷ್ಟ ಕೇಳಿಲ್ಲ, ನಮಗೆ ಯಾವ ಉಚಿತ ಭಾಗ್ಯವೂ ಬೇಡ, ಸಂಕಷ್ಟದಲ್ಲಿರುವ ನಮಗೆ ಪರಿಹಾರ ಸೂಕ್ತ ಒದಗಿಸಿ, ದುಡಿಯಲು ಉದ್ಯೋಗ ಕೊಡಿಸಿ, ಸಮರ್ಪಕ ವಿದ್ಯುತ್‌ ಕೊಡಿಸಿ’ ಎಂದು ರೈತರು ಮನವಿ ಮಾಡಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ ಕಾಂಗ್ರೆಸ್‌ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಅಭಿವೃದ್ಧಿ ಕಡೆಗಣಿಸಿದೆ. ರೈತರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ, ಶೀಘ್ರದಲ್ಲೇ ಈ ಸರ್ಕಾರ ಪಥನವಾಗಲಿದೆ ಎಂದು ಹೇಳಿದರು.

ಕುರ್ಚಿಗಾಗಿ ಕಾಂಗ್ರೆಸ್‌ ಸರ್ಕಾರ ಮೂರು ಗುಂಪಾಗಿ ಕಾರ್ಯಾಚರಣೆ ನಡೆಸುತ್ತಿದೆ. ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದ ಭೀಕರ ಬರ ಕಂಡು ಮುಖ್ಯಮಂತ್ರಿ ಕಣ್ಣಲ್ಲಿ ನೀರು ಬರಬೇಕಿತ್ತು. ಆದರೆ, ಸಿದ್ರಾಮಣ್ಣಗೆ ಜನರ ಕಷ್ಟದ ಅರಿವಿಲ್ಲ, ನೃತ್ಯ ಮಾಡಿ, ‌ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದುವರೆಗೂ ಒಬ್ಬರಿಗೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಿಲ್ಲ, ಈಗಾಗಲೇ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ಅಧ್ಯಯನ ಮಾಡಿಸಿದೆ. ಆದರೆ, ರಾಜ್ಯ ಸರ್ಕಾರ ಬರದಿಂದ ಎಷ್ಟು ನಷ್ಢವಾಗಿದೆ ಎಂಬ ಬಗ್ಗೆ ಇನ್ನೂ ವರದಿ ಕೊಟ್ಟಿಲ್ಲ ಎಂದು ದೂರಿದರು.

ಬಿಜೆಪಿ ರಾಜ್ಯದಾದ್ಯಂತ ಸಂಚರಿಸಿ ಬರ ಅಧ್ಯಯನ ಮಾಡಿದ ಬಳಿಕ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಕೋರುತ್ತೇವೆ ಎಂದರು.

ಮೋದಿ ಅಲೆ

ದೇಶದಲ್ಲಿ ಪ್ರಧಾನಿ ಮೋದಿ ಅಲೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ವಿರುದ್ಧ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.

ಬಿಜೆಪಿ ಬರ ಅಧ್ಯಯನ ತಂಡದಲ್ಲಿ ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಮಾಜಿ ಸಚಿವ ಮುರುಗೇಶ ನಿರಾಣಿ, ಎಸ್‌.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಉಪಾಧ್ಯಕ್ಷ ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ಉಮೇಶ ಕೋಳಕೂರ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ ಇದ್ದರು.

ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್‌ 50 ಶಾಸಕರು: ನಿರಾಣಿ

ವಿಜಯಪುರ: ಕಾಂಗ್ರೆಸಿನ 50ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು. ಜಿಲ್ಲೆಯ ಜುಮನಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐದು ವರ್ಷ ಈ ಸರ್ಕಾರ ಮುಂದುವರಿಯಲ್ಲ ಗೊಂದಲಮಯ ಕಾಂಗ್ರೆಸ್‌ ಸರ್ಕಾರ ಯಾವ ಕ್ಷಣದಲ್ಲಾದರೂ ಪಥನವಾಗಬಹುದು ಬಿಜೆಪಿ ನೇತೃತ್ವದಲ್ಲಿ ಜನಪರವಾದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.  ಶೀಘ್ರದಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ಆಯ್ಕೆಯಾಗಲಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ ಪಕ್ಷ ಯಾವುದೇ ಜವಾಬ್ದಾರಿ ವಹಿಸಿದರೂ ನಿರ್ವಹಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT