ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿಗೆ ಮೆಚ್ಚುಗೆ, ಸ್ವಾಗತ

Last Updated 30 ಜುಲೈ 2020, 14:13 IST
ಅಕ್ಷರ ಗಾತ್ರ

ವಿಜಯಪುರ: ಡಾ.ಕಸ್ತೂರಿ ರಂಗನ್‌ ನೇತೃತ್ವದ ನೀತಿ ರಚನೆ ಸಮಿತಿಯು ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಜಿಲ್ಲೆಯ ಶಿಕ್ಷಣ ತಜ್ಞರು, ಶಿಕ್ಷಕರು, ವಿವಿಧ ಕ್ಷೇತ್ರಗಳ ಪ್ರಮುಖರು ವ್ಯಕ್ತಪಡಿಸಿರುವ ಅಭಿಪ್ರಾಯ ಇಂತಿವೆ.

ಬಡ ಮಕ್ಕಳಿಗೆ ಉಪಯುಕ್ತ

ಹಲವು ವರ್ಷಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಜಾರಿಗೆ ಬರುತ್ತಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳ ಕಲಿಕೆಗೆ ಮುಕ್ತ ಅವಕಾಶದ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಪ್ರಮುಖ ಅಂಶ. 6 ರಿಂದ 18 ವರ್ಷದ ವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ವಿಸ್ತರಣೆ ಮಾಡಿದ್ದು, ಬಡ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ.

ಶಿಕ್ಷಣವನ್ನು ವಯೋಮಾನಕ್ಕನುಗುಣವಾಗಿ ನಾಲ್ಕು ಹಂತಗಳಾಗಿ ವಿಂಗಡಿಸಿರುವುದು ಸರಿಯಾದ ಕ್ರಮವಾಗಿದೆ. ಆರ್‌ ಟಿ ಇ ಯನ್ನು 3 ರಿಂದ 18ನೇ ವರ್ಷಕ್ಕೆ ವಿಸ್ತರಿಸಿದ್ದು, ಶಿಕ್ಷಣ ಮುಂದುವರಿಕೆಗೆ ಅವಕಾಶ ಕಲ್ಪಿಸಿದೆ. 8ನೇ ತರಗತಿ ವರೆಗೆ ಮಾತೃಭಾಷೆಯಲ್ಲಿ ಕಲಿಯಲು ಮುಕ್ತ ಅವಕಾಶ. ವಿವಿಧ ಹಂತಗಳಲ್ಲಿ ಕೋರ್ಸ್‌ಗಳ ನಿಲುಗಡೆ, ನಿಲ್ಲಿಸಿದ ಹಂತಕ್ಕೆ ಪ್ರಮಾಣ ಪತ್ರ ಹಾಗೂ ಮತ್ತೆ ಕೋರ್ಸ್‌ ಮುಂದುವರಿಕೆಗೆ ಮುಕ್ತ ಅವಕಾಶ, 15 ವರ್ಷಗಳ ನಂತರ ಕಾಲೇಜುಗಳಿಗೆ ಸ್ವಾಯತ್ತತೆ ನೀಡುತ್ತಿರುವುದು ಉತ್ತಮ ಕಾರ್ಯ.

–ಆರ್.ವಿ.ಪಾಟೀಲ,ಅಧ್ಯಕ್ಷ, ಕನ್ನಡ ಜಾನಪದ ಪರಿಷತ್,ಇಂಡಿ

ಶೈಕ್ಷಣಿಕವಾಗಿ ದಿಟ್ಟ ಹೆಜ್ಜೆ

ಮೂರುವರೆ ದಶಕಗಳಿಂದ ಯಾವುದೇ ಅಮೂಲಾಗ್ರ ಬದಲಾವಣೆ ಕಾಣದೇ ಶಿಕ್ಷಣ ಕ್ಷೇತ್ರ ನಿಂತ ನೀರಾಗಿತ್ತು. ಹೊಸ ಶಿಕ್ಷಣ ನೀತಿಯಿಂದ ಮಗು 11 ವರ್ಷಗಳ ವರೆಗೆ ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ವ್ಯವಸ್ಥೆ ಜಾರಿಯಾಗಿರುವುದು ಹೆಮ್ಮೆಯ ಸಂಗತಿ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಶಿಕ್ಷಣ ಸಚಿವಾಲಯವಾಗಿ ಮಾರ್ಪಟ್ಟಿದ್ದು, ಪ್ರಗತಿಯ ಸಂಕೇತ. 5+3+3+4 ಹಂತಗಳು ಕೇವಲ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿರದೆ ಶೈಕ್ಷಣಿಕ ಚಿಂತನ ಮಂಥನ ಹಾಗೂ ಸಂಶೋಧನೆಯಲ್ಲಿಯೂ ಬದಲಾವಣೆ ತರಬಲ್ಲವು.

‘Education is a process’ ಎಂಬಂತೆ ಹೊಸ ಪಠ್ಯಕ್ರಮ, ತರ್ಕಬದ್ದ ಶಿಕ್ಷಣ, ಸುಭದ್ರ ಸಾಕ್ಷರತೆ, ಸಾರ್ವತ್ರಿಕ ಪ್ರವೇಶ, ಕೌಶಲಪೂರ್ಣ ಶಿಕ್ಷಣ, ಸಮಾನ ಮತ್ತು ಅಂತರ್ಗತ ಶಿಕ್ಷಣ, ಅರ್ಹ ಬೋಧಕರ ಆಯ್ಕೆ, ಶಿಕ್ಷಕರಾದವರಿಗೂ ಶಿಕ್ಷಣ ಮತ್ತು ಬಹು ಶಿಸ್ತೀಯ ಶಿಕ್ಷಣ ಇವೆಲ್ಲವೂ ಕೇಂದ್ರ ಹೊಸ ಶಿಕ್ಷಣ ನೀತಿಯಲ್ಲಿ ಸೇರಿರುವ ಸಂಗತಿ ಸ್ತುತ್ಯ ಹಾಗೂ ಶ್ಲ್ಯಾಘನೀಯ.

-ಸುಭಾಶ್ ಬಸವರಡ್ಡಿ, ವಿಶ್ರಾಂತ ಮುಖ್ಯೋಪಾಧ್ಯಾಯರು, ದೇವರಹಿಪ್ಪರಗಿ

ವೃತ್ತಿ ಶಿಕ್ಷಣ ಸಮೃದ್ಧಿಗೆ ಪ್ರಯತ್ನ

1986ರ ಹೊಸ ಶಿಕ್ಷಣ ನೀತಿಯ ನಂತರ ಅಷ್ಟೊಂದು ಪರಿಣಾಮಕಾರಿಯಾದ ಶಿಕ್ಷಣ ನೀತಿ ಬಂದಿರಲಿಲ್ಲ. ಈಗ ಈ ನೀತಿ ಜಾರಿಗೊಂಡಿದ್ದು ಶಿಕ್ಷಣಕ್ಕಾಗಿ ಸರ್ಕಾರದ ಬದ್ಧತೆ ಪ್ರಚುರಪಡಿಸಿದಂತಾಗಿದೆ ಹಾಗೂ ಇದರಲ್ಲಿ ಶಿಕ್ಷಣವನ್ನು ಪೂರ್ವ ಪ್ರಾಥಮಿಕದಿಂದ ಪರಿಗಣಿಸಿ 5 ಹಂತಗಳಲ್ಲಿ ವರ್ಗೀಕರಿಸಿ ಪಠ್ಯ ಪೂರಕ ಚಟುವಟಿಕೆಗಳು ಪಠ್ಯ ಕ್ರಮದೊಂದಿಗೆ ನಡೆಯುವುದರಿಂದಾಗಿ ಕೌಶಲಕ್ಕೆ ಹೆಚ್ಚು ಒತ್ತು ನೀಡಿ, ವೃತ್ತಿ ಶಿಕ್ಷಣ ಸಮೃದ್ಧಿ ಮಾಡಲು ಪ್ರಯತ್ನಿಸಿದಂತಾಗಿದೆ. ಒಳ್ಳೆ ಫಲಿತಾಂಶ ಕಾದು ನೋಡಬೇಕಾದರೆ ಅನುಷ್ಠಾನ ಮಾಡುವಲ್ಲಿ ಸರ್ಕಾರ, ನೌಕರ, ನಾಗರಿಕರ ಸಮಪಾಲು ಜವಾಬ್ದಾರರು ಎಂದು ಹೇಳಬಹುದು.

ಸಂತೋಷಕುಮಾರ ಬೀಳಗಿ, ಕ್ಷೇತ್ರ ಸಮನ್ವಯಾಧಿಕಾರಿ, ಶಿಕ್ಷಣ ಇಲಾಖೆ, ಸಿಂದಗಿ

ಸಮಗ್ರ ಶಾಲಾ ಶಿಕ್ಷಣದ ಬಗ್ಗೆ ಪ್ರಸ್ತಾಪವಿಲ್ಲ

ಶಿಕ್ಷಣ ಹಕ್ಕು ಮತ್ತು ಕಾಯ್ದೆಯನ್ನು 12ನೇ ತರಗತಿ ವರೆಗೆ ವಿಸ್ತರಿಸುವ ನಿರ್ಧಾರ ಸ್ವಾಗತಾರ್ಹ. ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರನ್ನು ಬೋಧನೇತರ ಚಟುವಟಿಕೆಗಳಿಂದ ಮುಕ್ತಗೊಳಿಸುವ ಬಗ್ಗೆ ಸ್ಪಷ್ಟ ಅಭಿಪ್ರಾಯ ಇರಬೇಕಿತ್ತು. ಸಮಗ್ರ ಶಾಲಾ ಶಿಕ್ಷಣದ ಬಗ್ಗೆ ಪ್ರಸ್ತಾಪವಾಗಿಲ್ಲ. ‘ಒಂದು ದೇಶ, ಒಂದೇ ಪಠ್ಯಕ್ರಮ, ಒಂದೇ ರೀತಿಯ ಶಾಲಾ ವ್ಯವಸ್ಥೆ’ ಜಾರಿಯಾಗಬೇಕು. ಜತೆಗೆ ದೇಶದಾದ್ಯಂತ ಒಂದೇ ರೀತಿಯ ಶಿಕ್ಷಕರ ಸಂಬಳದ ಪ್ರಸ್ತಾಪ ಕೂಡಾ ಇರಬೇಕಿತ್ತು.

ಅನ್ವೇಷಣೆ, ರಚನೆ, ಪರಿಕಲ್ಪನೆ ಆಧಾರಿತ ಶಿಕ್ಷಣದ ಜತೆಗೆ ಉನ್ನತ ಶಿಕ್ಷಣವನ್ನು ಜೀವನೋಪಾಯ ಶಿಕ್ಷಣಕ್ಕಾಗಿ ತಯಾರಿ ರೀತಿಯಲ್ಲಿ ನಿರೂಪಿಸಿದ್ದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಮಕ್ಕಳಲ್ಲಿ ಅಡಗಿರುವ ಸೃಜನಶೀಲಕ್ಕೆ ಪ್ರೋತ್ಸಾಹ ಪೂರಕವಾದ ಶಿಕ್ಷಣ ದೊರೆಯಲಿದೆ. ಒಟ್ಟಾರೇ ಈ ನೀತಿ ಭವಿಷ್ಯ ಭಾರತ ನಿರ್ಮಾಣಕ್ಕೆ ಶಿಕ್ಷಣ ರಂಗದಿಂದ ಸಿದ್ಧತೆ ನಡೆಸುವಂತಿದೆ.

ಚಂದ್ರಶೇಖರ ನುಗ್ಲಿ, ಪ್ರಧಾನ ಕಾರ್ಯದರ್ಶಿ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಆಲಮಟ್ಟಿ

ಮಾತೃಭಾಷೆ ಕಲಿಗೆ ಒತ್ತು

ಜಾಗತೀಕರಣದಿಂದ ಪ್ರತಿ ಕ್ಷಣವೂ ಬದಲಾಗುತ್ತಿದೆ. ಆ ಓಟದ ಸ್ಪರ್ಧೆಗೆ ನಮ್ಮ ಶಿಕ್ಷಣ, ಸಿದ್ಧತೆ ಸಾಲುತ್ತಿಲ್ಲ, ಹೊಸ ಶಿಕ್ಷಣ ನೀತಿ ಮೂರು ವರ್ಷಗಳ ಕಾಲ ಹಲವಾರು ಲಕ್ಷ ಜನರ ಅಭಿಪ್ರಾಯ ಪಡೆದು ರೂಪುಗೊಂಡಿದೆ. ಮೆಕಾಲೆ ಶಿಕ್ಷಣ ನೀತಿಯ ನೆರಳಿನಿಂದ ಹೊರಬಂದು ಭಾರತೀಯ ಸಂಸ್ಕೃತಿಯನ್ನೊಳಗೊಂಡ 21 ನೇ ಶತಮಾನದ ವೈಚಾರಿಕತೆಗೆ ಒತ್ತು ನೀಡುವ ಹಾಗೂ ಎಲ್ಲರನ್ನೂ ಒಳಗೊಂಡ ಸಮಗ್ರ ಶಿಕ್ಷಣ ನೀತಿಯಾಗಿದೆ. ಮಾತೃಭಾಷೆ ಕಲಿಗೆ ಒತ್ತು, ಪಠ್ಯ, ಸಹಪಠ್ಯದ ಬೇಧವಿಲ್ಲದೇ ಮಕ್ಕಳ ಪರೀಕ್ಷಾರ್ಥಿ, ಪಾಸಾರ್ಥಿಯಿಂದ ಮುಕ್ತವಾಗಿದೆ.

ಶಾಲಾ ಹಂತದ ವರ್ಗೀಕರಣದಿಂದ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಳವಾಗಲಿದೆ. ಜತೆಗೆ ಪೂರ್ವಪ್ರಾಥಮಿಕ ಹಂತವನ್ನು ಕಲಿಕಾ ಹಂತವನ್ನಾಗಿ ಪರಿಗಣಿಸಲಾಗಿದೆ. ಇದರಿಂದ ಶಾಲೆಯಿಂದ ಹೊರಗುಳಿಯುವಿಕೆ ಕಡಿಮೆಯಾಗಲಿದೆ. ಸಾಮರ್ಥ್ಯ, ಕೌಶಲಾಧರಿತ ಶಿಕ್ಷಕರ ನೇಮಕಕ್ಕೆ ಒತ್ತು ನೀಡಿದ್ದು ಸ್ವಾಗತಾರ್ಹ.

ಸಂಗಮೇಶ ಪೂಜಾರ, ಸಿಂಡಿಕೇಟ್ ಸದಸ್ಯ, ಕಲಬುರಗಿ ವಿಶ್ವವಿದ್ಯಾಲಯ,ತಳೇವಾಡ, ಕೊಲ್ಹಾರ.

ಬದುಕು ಕಟ್ಟಿಕೊಳ್ಳಲು ಪ್ರೇರಣೆ

ಭಾರತದ ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ರೂಪಿಸಲುಶಿಕ್ಷಣವನ್ನು ನಾಲ್ಕು ಹಂತಗಳಾಗಿ ವಿಂಗಡಿಸಿರುವುದು ಉತ್ತಮ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸಲು 8ನೇ ತರಗತಿ ವರೆಗೆ ಅವಕಾಶ ನೀಡಿರುವುದು, ಆರ್‌ಟಿಇ ವಿಸ್ತರಣೆ ಅದರ ಜೊತೆಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ವಿಸ್ತರಣೆಯು ಬಡ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ.

ಜ್ವಾನದ ಜೊತೆಗೆ ವೃತ್ತಿಪರ ಕೌಶಲಕ್ಕೆ ಮಹತ್ವ ನೀಡಿರುವುದು ಮಹತ್ವ ಪೂರ್ಣವಾಗಿದೆ. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶ ನೀಡಿರುವುದು, ರಾಷ್ಟ್ರದ ಎಲ್ಲ ಶಿಕ್ಷಕರಿಗೆ ಮತ್ತು ಹೊಸ ಶಿಕ್ಷಕರಿಗೆ ತರಬೇತಿ ನೀಡಲು ತರಬೇತಿ ಮಂಡಳಿ ಮಾಡುತ್ತಿರುವುದು, ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಸಹಪಠ್ಯ ಚಟುವಟಿಕೆಗಳ ಆಯ್ಕೆಗೆ ಅವಕಾಶ ನೀಡಿರುವುದು, ಯಾವುದೇ ಕೋರ್ಸಿನಿಂದ ಬಹು ಪ್ರವೇಶ ಮತ್ತು ನಿರ್ಗಮನ ಮತ್ತೆ ಪ್ರಾರಂಭದ ಅವಕಾಶ ನೀಡಿರುವುದು ಸ್ವಾಗತಾರ್ಹ. ಹೊಸ ಶಿಕ್ಷಣ ನೀತಿಯಿಂದ ನಮ್ಮ ಮಕ್ಕಳ ಭವಿಷ್ಯವು ಉಜ್ವಲವಾಗಲಿದೆ

–ಎಂ.ಪಿ.ಭೈರಜಿ, ಅಧ್ಯಕ್ಷ, ಶರಣ ಸಾಹಿತ್ಯ ಪರಿಷತ್ ಇಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT