ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೂ ಇಲ್ಲ ಬಹುಮತ; ಪಾಲಿಕೆ ಅತಂತ್ರ

ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ; ಕಾಂಗ್ರೆಸ್‌ಗೆ ಸಮದಾನ; ಜೆಡಿಎಸ್‌ಗೆ ಮುಖಭಂಗ; ಖಾತೆ ತೆರೆದ ಎಐಎಂಐಎಂ
Last Updated 31 ಅಕ್ಟೋಬರ್ 2022, 13:30 IST
ಅಕ್ಷರ ಗಾತ್ರ

ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಗೆ ‘ಸೆಮಿಫೈನಲ್‌’ ಎಂದೇ ಗುರುತಿಸಿಕೊಂಡಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದೆ.ಸರಳ ಬಹುಮತ ಗಳಿಸುವಲ್ಲಿಯಾವೊಂದು ಪಕ್ಷವೂ ಶಕ್ತವಾಗಿಲ್ಲ.

ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು 18 ಸ್ಥಾನಗಳ ಅಗತ್ಯವಿದ್ದು, ಬಿಜೆಪಿ ಅತಿ ದೊಡ್ಡ(17) ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರಳ ಬಹುಮತಕ್ಕೆ ಇನ್ನೊಂದು ಸ್ಥಾನದ ಕೊರತೆ ಎದುರಾಗಿದೆ.

ಕಾಂಗ್ರೆಸ್‌ ನಿರೀಕ್ಷಿತ ಸ್ಥಾನ ಗಳಿಸುವಲ್ಲಿ ವಿಫಲವಾಗಿದ್ದು, ಕೇವಲ 10 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ರಾಹುಲ್‌ ಗಾಂಧಿ ಅವರ ‘ಭಾರತ್‌ ಜೋಡೊ’ ಪಾದಯಾತ್ರೆಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಪಾಲಿಕೆ ಚುನಾವಣೆಯನ್ನು ನಿರ್ಲಕ್ಷ್ಯಿಸಿದ ಪರಿಣಾಮ ನಿರೀಕ್ಷಿತ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ.

ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಕೈಹಾಕಿತು. ಕಾಂಗ್ರೆಸ್‌ಗಿಂತ ತಾನೇನು ಕಡಿಮೆ ಇಲ್ಲ ಎಂಬಂತೆ ಪೈಪೋಟಿಗೆ ಬಿದ್ದವರಂತೆ ಜೆಡಿಎಸ್‌ ಕೂಡ 15 ಮುಸ್ಲಿಂ ಅಭ್ಯರ್ಥಿಗಳನ್ನು ಕಳಕ್ಕಿಳಿಸಿತ್ತು. ಇವೆರಡರ ಜೊತೆಗೆ ಎಎಪಿ, ಎಐಎಂಐಎಂ ಕೂಡ ಮುಸ್ಲಿಂ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಿತ್ತು. ಹೀಗಾಗಿ ಮುಸ್ಲಿಂ ಮತಗಳನ್ನು ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ ಮುಸ್ಲಿಂ ಅಭ್ಯರ್ಥಿಗಳು ಹಂಚಿಕೊಂಡ ಪರಿಣಾಮ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು. ಇದರ ಲಾಭ ಪಡೆಯುವಲ್ಲಿ ಬಿಜೆಪಿ ಸಫಲವಾಯಿತು.

ಚುನಾವಣೆಯನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಆರೋಪ ಅದೇ ಪಕ್ಷದ ಮುಖಂಡರಿಂದ ವ್ಯಕ್ತವಾಯಿತು. ಹಾಲಿ, ಮಾಜಿ ಶಾಸಕರು, ಜಿಲ್ಲಾ ಘಟಕದ ಅಧ್ಯಕ್ಷರು ಚುನಾವಣಾ ಕಣದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಮುಖಂಡರು ತೋರಿಕೆಗೂ ಒಗ್ಗಟ್ಟು ಪ್ರದರ್ಶಿಸಲಿಲ್ಲ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಕೊನೇಯ ದಿನ ಅಬ್ಬರದ ಪ್ರಚಾರ ನಡೆಸಿದರಾದರೂ ಪಕ್ಷಕ್ಕೆ ಬಲ ತಂದುಕೊಡಲಿಲ್ಲ.

ಸಾಕಷ್ಟು ಭಿನ್ನಮತ, ಅಸಮದಾನ, ಬಣ ರಾಜಕಾರಣ ಇದ್ದರೂ ಕೂಡ ಬಿಜೆಪಿ ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪಾಲಿಕೆಯ ಅಧಿಕಾರದ ಗದ್ದುಗೆಯತ್ತ ದಾಪುಗಾಲಿಟ್ಟಿದೆ.

‘ಅಭಿವೃದ್ಧಿ ಮತ್ತು ಹಿಂದುತ್ವ’ ವಿಷಯಗಳ ಆಧಾರದ ಮೇರೆಗೆ ಶಾಸಕ ಬಸನಗೌಡ ಪಾಟೀಲ ಅವರು ವ್ಯವಸ್ಥಿತವಾಗಿ ಚುನಾವಣೆಯಲ್ಲಿ ಕಾರ್ಯತಂತ್ರ ಹೆಣೆಯುವ ಮೂಲಕ ಮತ್ತು ಸ್ವತಃ ತಾವೇ ಪ್ರಚಾರ ನಡೆಸುವ ಮೂಲಕ ಬಿಜೆಪಿಗೆ ಹೆಚ್ಚಿನ ಸ್ಥಾನ ಬರುವಂತೆ ಶ್ರಮವಹಿಸಿದರು.

ಜೆಡಿಎಸ್‌ಗೆ ಮುಖಭಂಗ:

ಪಾಲಿಕೆ ಚುನಾವಣೆಯಲ್ಲಿ 20 ವಾರ್ಡ್‌ಗಳಲ್ಲಿ ಜೆಡಿಎಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ,4 ನೇ ವಾರ್ಡಿನಿಂದ ಸ್ಪರ್ಧಿಸಿದ್ದ ರಾಜು ಚಹ್ವಾಣ ಅವರೊಬ್ಬರನ್ನು ಹೊರತು ಪಡಿಸಿ ಇನ್ನುಳಿದ 19 ಜನ ಸೋಲು ಕಾಣುವ ಮೂಲಕ ಕಳಪೆ ಪ್ರದರ್ಶನ ತೋರಿದೆ.

ಶಾಸಕ ದೇವಾನಂದ ಚವ್ಹಾಣ ಅವರಿಗೆ ಸೇರಿದನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ವಾರ್ಡ್‌ಗಳಲ್ಲಿ ಜೆಡಿಎಸ್‌ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಈ ವಾರ್ಡ್‌ಗಲ್ಲಿ ಬಿಜೆಪಿ ಉಪಾಧ್ಯಕ್ಷ ಉಮೇಶ ಕಾರಜೋಳ ಅವರು ವ್ಯವಸ್ಥಿತವಾಗಿ ಚುನಾವಣೆ ಎದುರಿಸಿದ ಪರಿಣಾಮ ಮೂರು ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.

ಖಾತೆ ತೆರೆದ ಎಐಎಂಐಎಂ:

25 ನೇ ವಾರ್ಡ್‌ನಿಂದ ಕಣಕ್ಕಿಳಿದ್ದಿದ್ದ ಸೂಫಿಯಾ ವಾಟಿ, 28ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ರಿಜ್ವಾನಾಬಾನು ಇನಾಂದಾರ ಜಯ ಗಳಿಸುವ ಮೂಲಕ ಎಐಎಂಐಎಂ ಮೊದಲ ಬಾರಿಗೆ ಖಾತೆ ತೆರೆದಿರುವುದು ವಿಶೇಷ. ಕಾಂಗ್ರೆಸ್‌ ಮತ ಬ್ಯಾಂಕಿಗೆ ಕೈಹಾಕಿರುವ ಎಐಎಂಐಎಂ ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಸವಾಲು ಒಡ್ಡುವುದು ಖಚಿತವಾಗಿದೆ.

ಪಕ್ಷೇತರರ ಪವಾಡ:

ಪಾಲಿಕೆ ಚುನಾವಣೆಯಲ್ಲಿ 58 ಜನ ಪಕ್ಷೇತರರು ಕಣಕ್ಕಿಳಿದಿದ್ದರು. ಆದರೆ, ಇವರಲ್ಲಿ ಅಲ್ತಾಫ್‌ ಇಟಗಿ (2ನೇ ವಾರ್ಡ್‌),ಅಶೋಕ ನ್ಯಾಮಗೊಂಡ (8ನೇ ವಾರ್ಡ್‌), ಸುಮಿತ್ರಾ ಜಾಧವ(17ನೇ ವಾರ್ಡ್‌),ನಿಶಾತಾ ನದಾಫ್‌ (19ನೇ ವಾರ್ಡ್‌), ವಿಮಲಾ ಖಾನೆ (24ನೇ ವಾರ್ಡ್‌) ಅವರು ಜಯಭೇರಿ ಭಾರಿಸಿದ್ದಾರೆ. ಹಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್‌, ಬಿಜೆಪಿಗೆ ತೀವ್ರ ಪೈಪೋಟಿ ಒಡ್ಡುವಲ್ಲಿ ಸಫಲರಾಗಿದ್ದಾರೆ.

ಖಾತೆ ತೆರೆಯಲು ವಿಫಲ:

ಕಣದಲ್ಲಿ ಅಬ್ಬರದ ಪ್ರಚಾರ ಮಾಡುವ ಮೂಲಕ ಹಾಗೂ 10 ಪ್ರಮುಖ ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿ ಚುನಾವಣೆಯಲ್ಲಿ ಗಮನ ಸೆಳೆದಿದ್ದ ಆಮ್‌ ಆದ್ಮಿ ಪಕ್ಷಹಾಗೂ ಕರ್ನಾಟಕ ರಾಷ್ಟ್ರ ಸಮಿತಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಪ್ರಮುಖರಿಗೆ ಗೆಲುವು:ಘಟಾನುಘಟಿಗಳಿಗೆ ಸೋಲು!

ಪಾಲಿಕೆ ಚುನಾವಣೆಯಲ್ಲಿ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ 22ನೇ ವಾರ್ಡಿನಲ್ಲಿ ಮಾಜಿ ಕಾರ್ಪೊರೇಟರ್‌ ಪ್ರೇಮಾನಂದ ಬಿರಾದಾರ, 7ನೇ ವಾರ್ಡಿನಿಂದ ರಾಹುಲ್‌ ಜಾಧವ ಅವರು ಪುನರಾಯ್ಕೆಯಾಗಿದ್ದಾರೆ. ರಾಜು ಮಗಿಮಠ, ಶಿವರುದ್ರ ಬಾಗಲಕೋಟೆ, ಅಶೋಕ ನ್ಯಾಮಗೊಂಡ, ದಿನೇಶ್‌ ಎಸ್‌. ಅವರು ಗೆಲುವು ಸಾಧಿಸುವ ಮೂಲಕ ಪಾಲಿಕೆ ಪ್ರವೇಶಿಸಿದ್ದಾರೆ.

ಕಣಕ್ಕಿಳಿದಿದ್ದ ಮಾಜಿ ಮೇಯರ್‌ಗಳಾದ ಸಂಗೀತ ಪೋಳ, ಶ್ರೀದೇವಿ ಲೋಗಾವಿ, ಮಾಜಿ ಉಪ ಮೇಯರ್‌ ಆನಂದ ದುಮಾಳೆ, ಬಿಜೆಪಿಯ ಪ್ರಬಲ ಮುಖಂಡರಾದ ರವಿಕಾಂತ ಬಗಲಿ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಗೂಳಪ್ಪ ಶೆಟಗಾರ, ಪರಶುರಾಮ ರಜಪೂತ, ಸೈಕ್ಲಿಸ್ಟ್‌ ರಾಜು ಬಿರಾದಾರ ಅವರಿಗೆ ಸೋಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT