ಸೋಮವಾರ, ಆಗಸ್ಟ್ 8, 2022
21 °C
ಜಿಲ್ಲಾ ಪಂಚಾಯ್ತಿ ಕೊನೆಯ ಸಾಮಾನ್ಯ ಸಭೆ

ಅಂಜದ ಅಧಿಕಾರಿ ವರ್ಗ; ವಾಗ್ವಾದದೊಂದಿಗೆ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಹಾಲಿ ಜಿಲ್ಲಾ ಪಂಚಾಯ್ತಿಯ ಬಹುತೇಕ ಕೊನೆಯ ಸಾಮಾನ್ಯ ಸಭೆಯು ಅಧಿಕಾರಿಗಳು ಮತ್ತು ಸದಸ್ಯರ ನಡುವೆ ಆರೋಪ, ವಾಗ್ವಾದ ಮತ್ತು ವಿದಾಯಕ್ಕೆ ವೇದಿಕೆ ಕಲ್ಪಿಸಿತು.

ಸದಸ್ಯರ ಗಂಭೀರ ಆರೋಪಗಳಿಗೆ ಕಿಂಚಿತ್ತು ಅಂಜದ ಅಧಿಕಾರಿ ವರ್ಗ, ಗಟ್ಟಿ ಧ್ವನಿಯಲ್ಲಿ ಆರೋಪಗಳನ್ನು ಅಲ್ಲಗಳೆದರು. ಅಷ್ಟೇ ಅಲ್ಲ ವಿರೋಧವನ್ನು ದಾಖಲಿಸಿದರು. ತಮ್ಮ ಮೇಲೆ ಜಿ.ಪಂ. ಸದಸ್ಯರು ಮಾಡಿದ ಭ್ರಷ್ಟಾಚಾರ ಆರೋಪಗಳ ಬಗ್ಗೆ  ತನಿಖೆ ನಡೆಸಿ ಕ್ರಮಕೈಗೊಳ್ಳಿ ಎಂದು ಸ್ವತಃ ಅಧಿಕಾರಿಗಳೇ ಸವಾಲು ಎಸೆದದ ಪ್ರಸಂಗವೂ ನಡೆಯಿತು.

ತನಿಖೆಗೆ ಸೂಚನೆ:

ಅಕ್ಷರ ದಾಸೋಹ ಶಿಕ್ಷಣಾಧಿಕಾರಿಯು ಶಾಲೆಯ ಶಿಕ್ಷರಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಸದಸ್ಯೆ ಪ್ರತಿಭಾ ಪಾಟೀಲ ಮತ್ತು ಇತರೆ ಸದಸ್ಯರ ಆರೋಪಕ್ಕೆ ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಎಸ್‌.ಎಸ್‌. ಮುಜಾವರ ತೀವ್ರ ವಿರೋಧ ದಾಖಲಿಸಿದರು.

‘ನನ್ನ ಮೇಲಿನ ಆರೋಪ ಸಂಪೂರ್ಣ ಸುಳ್ಳು, ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಪತಿ, ವಿಜಯಪುರ ನಗರ ಬಿಇಒ ಮುಜಾವರ ಅವರ ಹೆಸರ ಪ್ರಸ್ತಾಪ ಮಾಡುತ್ತಿರುವುದು ಸರಿಯಲ್ಲ. ಆಹಾರಧಾನ್ಯ ಮಾರಾಟ ಮಾಡಿಕೊಳ್ಳುತ್ತಿದ್ದ ಶಿಕ್ಷಕರಿಗೆ ನೋಟಿಸ್‌ ನೀಡಿದ್ದೆ. ಆದರೆ, ಅವರೇ ನನ್ನ ವಿರುದ್ಧ ಸುಳ್ಳು ಆರೋಪ ಹೊರಸಿದ್ದಾರೆ. ಇದಕ್ಕೆ ಸದಸ್ಯರ ಬಳಿ ಸಾಕ್ಷ್ಯಾಧಾರಗಳಿವೆಯೇ’ ಎಂದು ಅಕ್ಷರ ದಾಸೋಹ ಅಧಿಕಾರಿ ಪ್ರಶ್ನಿಸಿದರು.

ಅಧಿಕಾರಿಯ ಉತ್ತರವು ಸದಸ್ಯರ ಮತ್ತು ಅಧ್ಯಕ್ಷೆ, ಉಪಾಧ್ಯಕ್ಷರ ಅಸಮಾಧಾನಕ್ಕೆ ಕಾರಣವಾಯಿತು. ಮಧ್ಯ ಪ್ರವೇಶಿಸಿದ ಸಿಇಒ ಗೋವಿಂದ ರೆಡ್ಡಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ 20ರ ಒಳಗಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚಿಸಿದರು.

ಪಿಡಿಒ ವಿರುದ್ಧ ಕ್ರಮ:

ಬಂದಾಳ ಗ್ರಾಮ ಪಂಚಾಯ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸದಸ್ಯೆ ಭುವನೇಶ್ವರಿ ಬಗಲಿ ಸಭೆಯ ಗಮನಕ್ಕೆ ತಂದರು.

ಬಂದಾಳ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಈಗಾಗಲೇ ಇಲಾಖಾ ತನಿಖೆ ನಡೆಯುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಿಇಒ ಗೋವಿಂದ ರೆಡ್ಡಿ ತಿಳಿಸಿದರು.

ಕ್ರಮಕ್ಕೆ ಆಗ್ರಹ:

ಅಂಗನವಾಡಿ ಮಕ್ಕಳಿಗೆ ವಿತರಿಸುವ ಹಾಲಿನ ಪುಡಿಯನ್ನು ಜಿಲ್ಲೆಯ ಇಬ್ಬರು ಸಿಡಿಪಿಒಗಳು ಕದ್ದು ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಪ್ರಕರಣದ ಕುರಿತು ಪ್ರಸ್ತಾಪಿಸಿದ ಸದಸ್ಯ ಮಹಾಂತಗೌಡ ಪಾಟೀಲ, ಈ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಶಾಮೀಲಾಗಿದ್ದಾರೆ. ಅವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ.ಚವ್ಹಾಣ, ಹಾಲು ಪುಡಿ ಅಕ್ರಮ ಮಾರಾಟ ಪ್ರಕರಣದಲ್ಲಿ ನಾನು ಶಾಮೀಲಾಗಿಲ್ಲ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ಕುರಿತು ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸಿಕ್ಕಿಬಿದ್ದಿರುವ ಅಧಿಕಾರಿಗಳು ಜೈಲಿನಲ್ಲಿದ್ದಾರೆ ಎಂದು ಹೇಳಿದರು.

ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಪ್ರಕರಣದ ಕುರಿತು ಬೆಳಗಾವಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖಾ ವರದಿ ಬರುವವರೆಗೆ ಕಾಯಿರಿ ಎಂದು ಸದಸ್ಯರಿಗೆ ಸಲಹೆ ನೀಡಿದರು. 

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸದಸ್ಯರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಉನ್ನತ ಮಟ್ಟದ ತನಿಖೆಗೆ ಕ್ರಮ

ಕನ್ನಾಳ ಕ್ರಾಸ್‌ ಹತ್ತಿರ ಇರುವ ರಸಗೊಬ್ಬರ ಫ್ಯಾಕ್ಟರಿ ಕಳಪೆ ಗುಣಮಟ್ಟದ ಗೊಬ್ಬರವನ್ನು ರೈತರಿಗೆ ವಿತರಿಸಿರುವ ಪ್ರಕರಣವನ್ನು ಪ್ರಸ್ತಾಪಿಸಿದ ಸದಸ್ಯರಾದ ಭೀಮರಾವ್‌ ಎಂಟಮಾನ, ನವೀನ್‌ ಅರಕೇರಿ, ಶಿವಶರಣ ಭೈರಗೊಂಡ, ಫ್ಯಾಕ್ಟರಿ ವಿರುದ್ಧ ಕೃಷಿ ಅಧಿಕಾರಿಗಳು ಶಿಸ್ತು ಕ್ರಮಕೈಗೊಳ್ಳದೇ ಬಿಟ್ಟಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ ಮಾಡಿದ ಫ್ಯಾಕ್ಟರಿಯ ಲೈಸನ್ಸ್‌  ರದ್ದುಗೊಳಿಸಲಾಗಿತ್ತು. ಅಲ್ಲದೇ, ಏಳು ಅಂಗಡಿಗಳ ಮೇಲೆ ದಾಳಿ ಮಾಡಿ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗಿದೆ ಎಂದು ಉತ್ತರಿಸಿದರು.

ಅಧಿಕಾರಿಗಳ ಉತ್ತರದಿಂದ ಸಮಾಧಾನಗೊಳ್ಳದ ಸದಸ್ಯರು, ಕಳಪೆ ರಸಗೊಬ್ಬರ,ಔಷಧ ಮಾರಾಟಗಾರರ ಜೊತೆ ಕೃಷಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಮಧ್ಯ ಪ್ರವೇಶಿಸಿದ ಸಿಇಒ ಗೋವಿಂದ ರೆಡ್ಡಿ, ರಾಜ್ಯಮಟ್ಟದ ವಿಚಕ್ಷಣ ದಳದಿಂದ ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಗೈರಾದ ಅಧಿಕಾರಿಗಳಿಗೆ ನೋಟಿಸ್‌

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಗೆ ಸತತವಾಗಿ ಗೈರಾಗುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಹಾಗೂ ಕೆಬಿಜಿಎನ್‌ಎಲ್‌ನ ನಾಲ್ವರು ಎಂಜಿನಿಯರ್‌ಗೆ ನೋಟಿಸ್‌ ನೀಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ಸಾಮಾನ್ಯ ಸಭೆಗೆ ಗೈರಾಗುತ್ತಿರುವ ಅಧಿಕಾರಿಗಳಿಗೆ ನೋಟಿಸ್‌ ನೀಡಬೇಕು ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಜಿ.ಪಂ.ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹಾಗೂ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದ್ದರು.

ಕ್ಷಮೆಯಾಚಿಸಿದ ಡಿಎಚ್‌ಒ

ಕಚೇರಿಗೆ ಹೋದರೆ ಕನಿಷ್ಠ ಗೌರವ ನೀಡದೇ ನಿರ್ಲಕ್ಷ್ಯ ತೋರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್‌ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸದಸ್ಯರಾದ ಬಿಂದುರಾಯಗೌಡ ಪಾಟೀಲ ಮತ್ತು ಭೀಮರಾವ್‌ ಎಂಟಮಾನೆ ಆಗ್ರಹಿಸಿದರು.

ಮಧ್ಯ ಪ್ರವೇಶಿಸಿದ ಜಿ.ಪಂ.ಅಧ್ಯಕ್ಷೆ ಸುಜಾತಾ, ಡಿಎಚ್‌ಒ ಅವರು ತಕ್ಷಣ ಸದಸ್ಯರ ಕ್ಷಮೆಯಾಚಿಸಬೇಕು, ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

‘ನಾನು ಯಾವ ಸದಸ್ಯರಿಗೂ ಅಗೌರವ ತೋರಿಲ್ಲ. ಒಂದು ವೇಳೆ ನನ್ನಿಂದ ಬೇಸರವಾಗಿದ್ದರೆ ಸದಸ್ಯರ ಕ್ಷಮೆಯಾಚಿಸುತ್ತೇನೆ’ ಎಂದು ಡಿಎಚ್‌ಒ ಡಾ. ರಾಜಕುಮಾರ್‌ ಯರಗಲ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು