ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಕೇರಿ | ಅಧಿಕಾರಿಗಳ ನಿರ್ಲಕ್ಷ: ನೆನೆಗುದಿಗೆ ಬಿದ್ದ ಹೆಸ್ಕಾಂ ಕ್ಯಾಶ್‌ಕೌಂಟರ್‌

ಸಂಗಮೇಶ ಸಗರ
Published 27 ಫೆಬ್ರುವರಿ 2024, 7:34 IST
Last Updated 27 ಫೆಬ್ರುವರಿ 2024, 7:34 IST
ಅಕ್ಷರ ಗಾತ್ರ

ಕಲಕೇರಿ: ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳ ಹಿಂದೆ ಹೆಸ್ಕಾಂ ವಿಭಾಗ ಕಲಕೇರಿಯಲ್ಲಿ ಕ್ಯಾಶ್‌ ಕೌಂಟರ್‌ ಕಟ್ಟಡ ನಿರ್ಮಿಸಿದೆ. ಆದರೇ ಅಧಿಕಾರಿಗಳ ನಿರ್ಲಕ್ಷದಿಂದ ಈವರೆಗೆ ಕ್ಯಾಶ್‌ ಕೌಂಟರ್‌ ಪ್ರಾರಂಭವಾಗದೇ ಸ್ಥಳೀಯರು 50 ಕಿ.ಮಿ ದೂರದ ಕೋರವಾರಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

20 ಸಾವಿರ ಜನಸಂಖ್ಯೆ ಹೊಂದಿರುವ ಕಲಕೇರಿ ಗ್ರಾಮ, 18 ಹಳ್ಳಿಗಳ ಹೆಸ್ಕಾಂ ಶಾಖೆಯ ಹೊಂದಿರುವ ಕೇಂದ್ರವಾಗಿದೆ. ಪ್ರತಿ ತಿಂಗಳು ಈ ಕೇಂದ್ರದಿಂದ ಹೆಸ್ಕಾಂ ಖಜಾನೆಗೆ ₹45 ರಿಂದ ₹50 ಲಕ್ಷಗಳ ಬಿಲ್ ಹಣ ಸಂಗ್ರಹವಾಗುತ್ತದೆ, ಆದರೂ ನಾಲ್ಕು ವರ್ಷಗಳಿಂದ ಕ್ಯಾಶ್‌ ಸೆಂಟರ್‌ ಪ್ರಾರಂಭಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.

ಇಲ್ಲಿನ ಸ್ಥಳೀಯರು, ಗ್ರಾಹಕರು ತಮಗೆ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಬೇಕಾದರೂ ದೂರದ ಕೋರವಾರದ ಕಂದಾಯ ಶಾಖೆಗೆ ಹೋಗಬೇಕು, ಇದು ಕೇವಲ ಕಲಕೇರಿ ಗ್ರಾಮಸ್ಥರ ಸಮಸ್ಯೆಯಲ್ಲ ಬದಲಿಗೆ ಕಲಕೇರಿಯ ಸುತ್ತಲಿನ 18 ಹಳ್ಳಿಗಳ ಜನರ ಗೋಳಾಗಿದೆ. ಸುಮಾರು 40 ರಿಂದ 50ಕಿ.ಮೀ ದೂರದ ಕೋರವಾರ ಹೋಗಲು ಸೂಕ್ತ ವಾಹನಗಳ ವ್ಯವಸ್ಥೆಗಳಿಲ್ಲದೆ ಜನರು ಪ್ರತಿನಿತ್ಯ ಹರಸಾಹಸ ಪಡುವುದು ತಪ್ಪುತ್ತಿಲ್ಲ.

ಕಲಕೇರಿಯಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಕ್ಯಾಶ ಕೌಂಟರ್ ಪ್ರಾರಂಭಿಸುವಂತೆ ಇಲ್ಲಿನ ರೈತರು, ಹೋರಾಟಗಾರರು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸುಸ್ತಾದರೇ ಹೊರೆತು ಯಾವುದೆ ಪ್ರಯೋಜನಕ್ಕೆ ಬಂದಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಕಲಕೇರಿ ಶಾಖಾ ವ್ಯಾಪ್ತಿಯಲ್ಲಿ ಕಲಕೇರಿ, ಆಸ್ಕಿ, ಬೆಕಿನಾಳ ಗ್ರಾಮ ಪಂಚಾಯಿತಿಗಳು ಬರುತ್ತವೆ. ಇಲ್ಲಿ ಬರುವ ಎಲ್ಲ ಹಳ್ಳಿಗಳು ತಾಳಿಕೋಟಿ ತಾಲ್ಲೂಕಿನಲ್ಲಿದೆ. ಇಲ್ಲಿನ ಸ್ಥಳೀಯರು ಪ್ರತಿದಿನ ವ್ಯಾಪಾರ ವಹಿವಾಟುಗಳಿಗೆ ತಾಳಿಕೋಟೆಗೆ ಹೋಗುವುದು ಸಾಮಾನ್ಯ. ಆದರೆ ವಿದ್ಯುತ ಸಮಸ್ಯೆ ಎದುರಾದರೇ ದೇವರಹಿಪ್ಪರಗಿ ಉಪ ವಿಭಾಗಕ್ಕೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದ್ದು ಕಲಕೇರಿ ಶಾಖೆಯನ್ನು ತಾಳಿಕೋಟಿ ಉಪವಿಭಾಗಕ್ಕೆ ಸೇರಿಸಬೇಕು ಎನ್ನುತ್ತಾರೆ ಇಲ್ಲಿನ ಸ್ಥಳೀಯ ಹೋರಾಟಗಾರರು.

ಕಲಕೇರಿಯಲ್ಲಿ ಕ್ಯಾಶ್‌ ಕೌಂಟರ್‌ ನಿರ್ಮಾಣವಾದರೇ ಸುಮಾರು ಹಳ್ಳಿಯ ಜನರಿಗೆ ಅನುಕೂಲವಾಗಲಿದೆ. ದೂರದ ಊರಿಗೆ ಬುದ್ದಿ ಕಟ್ಟಿಕೊಂಡು ಹೋಗುವುದು ತಪ್ಪಲಿದೆ. ಈಗಾಗಲೆ ಕಟ್ಟಡ ನಿರ್ಮಾಣವಾಗಿದೆ, ಬದಲಿಗೆ ಈಗ ಕ್ಯಾಶ್‌ ಕೌಂಟರ್‌ ಪ್ರಾರಂಭಿಸಿದರೆ ಅನೇಕ ತೊಂದರೆಗಳಿಂದ ಮುಕ್ತಿ ಸಿಗಲಿದೆ. ಅಧಿಕಾರಿಗಳು ನಿರ್ಲಕ್ಷತನವನ್ನು ಬದಿಗಿಟ್ಟು ಸ್ಥಳೀಯರಿಗೆ ಇದರಿಂದ ಆಗುತ್ತಿರುವ ಅನಾನುಕೂಲದ ಬಗ್ಗೆ ಚಿಂತಿಸಿ ಕ್ಯಾಶ್‌ ಕೌಂಟರ್‌ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದು ನಿಶ್ಚಿತ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ಮಹಿಬೂಬಬಾಷಾ ಮನಗೂಳಿ.

ಕಲಕೇರಿಯಲ್ಲಿ ಕ್ಯಾಶ್‌ ಕೌಂಟರ್ ಆರಂಭಿಸಬೇಕು ಎನ್ನುವುದು ಬಹುದಿನದ ಬೇಡಿಕೆಯಾಗಿದ್ದು ಇದರಿಂದ ಅನೇಕ ಹಳ್ಳಿ ಗ್ರಾಹಕರಿಗೆ ಅನುಕೂಲವಾಗಲಿದೆ. ನಾವು ಈ ವಿಷಯವನ್ನು ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ.
–ಶಂಕರಗೌಡ ಬಿರಾದಾರ ಶಾಖಾಧಿಕಾರಿ ಕಲಕೇರಿ
ಕೂಡಲೇ ಕಲಕೇರಿಯ ಕ್ಯಾಶ್‌ ಕೌಂಟರ್‌ ಪ್ರಾರಂಭಿಸಬೇಕು ಕೋರವಾರ ಗ್ರಾಮಕ್ಕಿಂತ ಕಲಕೇರಿಯಲ್ಲಿ ಹೆಚ್ಚಿನ ಬಿಲ್ ಸಂಗ್ರಹವಾಗುತ್ತಿದ್ದು ಗ್ರಾಹಕರು ಹೆಚ್ಚಿರುವುದರಿಂದ ಕ್ಯಾಶ್‌ ಕೌಂಟರ್ ಪ್ರಾರಂಭಿಸಿದರೆ ಜನರ ನಿತ್ಯದ ಅಲೆದಾಟ ತಪ್ಪಲಿದೆ.
–ಸುಧಾಕರ ಅಡಕಿ ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT