ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ವಿರೋಧ

Last Updated 13 ಜೂನ್ 2020, 14:12 IST
ಅಕ್ಷರ ಗಾತ್ರ

ವಿಜಯಪುರ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ನಡೆಯನ್ನು ರೈತ-ಕೃಷಿ ಕಾರ್ಮಿಕರ ಸಂಘಟನೆಯ (ಆರ್‌ಕೆಎಸ್) ರಾಜ್ಯ ಅಧ್ಯಕ್ಷ ಟಿ.ಎಸ್.ಸುನೀತ್ ಕುಮಾರ್ ಹಾಗೂ ರಾಜ್ಯ ಕಾರ್ಯದರ್ಶಿ ಎಚ್.ವಿ.ದಿವಾಕರ್ ಖಂಡಿಸಿದ್ದಾರೆ.

ಕೊರೊನಾ ಲಾಕ್‍ಡೌನ್‌ನಿಂದ ರೈತರು ತತ್ತರಿಸಿರುವಾಗ ಅವರ ನೆರವಿಗೆ ಬರಬೇಕಾದ ಸರ್ಕಾರ ರೈತರ ಭೂಮಿಯನ್ನೇ ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಠಿಗೆ ಹಾಕುವಂತಹ ರೈತ ವಿರೋಧಿ ನಡೆಯಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಪೊರೇಟ್ ಕಂಪನಿಗಳಿಂದ ಶ್ರೀಮಂತರವರೆಗೆ ಯಾರೂ ಬೇಕಾದಾರೂ ಭೂಮಿ ಕೊಳ್ಳಲು ಮುಕ್ತ ಪರವಾನಗಿ ನೀಡಿರುವುದು ಸರಿಯಲ್ಲ. ರೈತರ ಹೆಸರಿನಲ್ಲಿ ಅಧಿಕಾರದ ಗದ್ದುಗೆಯೇರಿದ ರಾಜ್ಯ ಸರ್ಕಾರವು ವಿಶ್ವಾತಘಾತಕತನವನ್ನು ಮೆರೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಬೆಳೆಹಾನಿ, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಕುಸಿತ, ರೋಗ ಮುಂತಾದ ಹತ್ತು ಹಲವು ಬವಣೆಗಳಿಂದ ಬೆಂಡಾಗಿರುವ ನೇಗಿಲ ಯೋಗಿಯ ಬದುಕನ್ನು ಉಳಿಸಲು ಯೋಜನೆ ಮಾಡಬೇಕಾದ ಸರ್ಕಾರ, ಅವನ ಜೀವನದ ಸೆಲೆಯಾದ ಜಮೀನನ್ನು ಶ್ರೀಮಂತರ ಮಡಿಲಿಗೆ ಹಾಕಿ ಜೀವನೋಪಾಯವನ್ನೇ ಕಸಿದು ಕೊಂಡಿದೆ ಎಂದು ಅವರು ದೂರಿದ್ದಾರೆ.

ಇದು ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳು ರೆಸಾರ್ಟ್, ಮೋಜಿನ ಕೇಂದ್ರಗಳು, ಹೋಟೆಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳಿಗೂ ಬಳಸಲು ಈಗಿದ್ದ ಅಡೆತಡೆಗಳನ್ನೆಲ್ಲ ತೆಗೆದು ಹಾಕಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಕೋಟ್ಯಂತರ ರೈತರು ಬೀದಿ ಪಾಲಾಗುತ್ತಾರೆ. ಬಂಡವಾಳಿಗರು ಸಾವಿರಾರು ಎಕರೆಗಳ ಒಡೆಯರಾಗುತ್ತಾರೆ. ಇದು ಕೃಷಿ ಉತ್ಪನ್ನಗಳ ಉತ್ಪಾದನೆಯ ಕಾರ್ಪೊರೇಟಿರೀಕರಣಕ್ಕೆ, ಖಾಸಗಿ ಮಾಲೀಕತ್ವಕ್ಕೆ ದಾರಿ ಮಾಡಿ ಕೊಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಕೃಷಿ ಹಾಗೂ ಕೃಷಿಕರ ಮೇಲೆ ವಿನಾಶಕಾರಿ ಪರಿಣಾಮ ಬೀರುವ ರೈತರ, ಗ್ರಾಹಕರ ಹಾಗೂ ಜನ ಸಾಮಾನ್ಯರ ಹಿತಗಳನ್ನು ಬಲಿ ಕೊಡುವ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಹಿಂದಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಪ್ರಬಲ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT