ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆ ಸಾರಿಗೆ ಬಸ್‌ ಕಾರ್ಯಾಚರಣೆಗೆ ವಿರೋಧ

ಬೆಳಗಾವಿ-ಅಥಣಿ-ವಿಜಯಪುರ ಮಾರ್ಗ
Last Updated 26 ಸೆಪ್ಟೆಂಬರ್ 2022, 13:35 IST
ಅಕ್ಷರ ಗಾತ್ರ

ವಿಜಯಪುರ:ಬೆಳಗಾವಿ-ಅಥಣಿ-ವಿಜಯಪುರ ಮಾರ್ಗದಲ್ಲಿ 41 ಬೇಂದ್ರೆ ಸಾರಿಗೆ ಬಸ್ಸುಗಳ ಕಾರ್ಯಾಚರಣೆ ಮಾಡಲು ಅನುಮತಿ ನೀಡಿರುವ ಸರ್ಕಾರದ ನಿರ್ಧಾರಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಕಾರ್ಮಿಕ ಸಂಘಟನೆಗಳ ಮುಖಂಡರು, ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳ ಕಾರ್ಯಾಚರಣೆಗೆ ಅನುಮತಿ ನೀಡುವುದರಿಂದ ಪ್ರಸ್ತುತ ಸಂಸ್ಥೆಯಿಂದ ಕಾರ್ಯಾಚರಣೆಯಲ್ಲಿರುವ ವಿಜಯಪುರ-ಬೆಳಗಾವಿ ಮಾರ್ಗದ ಸಾರಿಗೆಗಳ ಆದಾಯಕ್ಕೆ ಕತ್ತರಿ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಪರಿಣಾಮಈಗಾಗಲೇ ಸಾರಿಗೆ ಸಂಸ್ಥೆಯು ನಷ್ಠ ಅನುಭವಿಸಿದ್ದು, ಸಂಸ್ಥೆಯ ಕಾರ್ಮಿಕರಿಗೆ ಸರಿಯಾಗಿ ವೇತನವೂ ಸಿಗುತ್ತಿಲ್ಲ. ಅಲ್ಲದೆ, ಇತ್ತೀಚೆಗೆ ಡಿಸೈಲ್ ಬೆಲೆಯಲ್ಲಿ ಆದ ಹೆಚ್ಚಳ ಹಾಗೂ ಬಿಡಿಭಾಗಗಳ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. 2020ರಲ್ಲಿ ಆಗಬೇಕಾಗಿದ್ದ ಕಾರ್ಮಿಕರ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ಇದೂವರೆಗೂ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಸಂಸ್ಥೆಯನ್ನು ಉಳಿಸಬೇಕು, ಬೆಳೆಸಬೇಕು, ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮವಾದ ಸಾರಿಗೆ ಸೇವೆಯನ್ನು ಒದಗಿಸಬೇಕು ಎಂಬ ಬಲವಾದ ಧ್ಯೇಯದೊಂದಿಗೆ ನಿಗಮದ ಎಲ್ಲ ಕಾರ್ಮಿಕರು ಸೇರಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಬೆಳಗಾವಿ-ಅಥಣಿ-ಬೆಳಗಾವಿ ಮಾರ್ಗವನ್ನು ಖಾಸಗಿಯವರಿಗೆ ಮಾರಿಕೊಂಡಿದ್ದು, ಸಂಸ್ಥೆಗೆ ಹಾಗೂ ಸಂಸ್ಥೆಯ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದ್ದಾರೆ.

ಬೆಳಗಾವಿ-ಅಥಣಿ-ಬೆಳಗಾವಿ ಮಾರ್ಗವು ಸಂಸ್ಥೆಗೆ ಆದಾಯ ಬರುವ ಮಾರ್ಗವಾಗಿದ್ದು, ಈ ಮಾರ್ಗಗಳಲ್ಲಿ 41 ಬಸ್‌ಗಳ ಕಾರ್ಯಾಚರಣೆಗೆ ಖಾಸಗೀಯವರಿಗೆ ಮಂಜೂರು ಮಾಡಿದಲ್ಲಿ, ಸಂಸ್ಥೆಗೆ ಪ್ರತಿದಿನ ಅಂದಾಜು ₹10 ಲಕ್ಷದಿಂದ ₹12 ಲಕ್ಷ ಆರ್ಥಿಕ ನಷ್ಟ ಉಂಟಾಗಿ ಮತ್ತಷ್ಟು ಕಾರ್ಮಿಕರಿಗೆ ವೇತನ ಪಡೆಯಲು ತೊಂದರೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಎಸ್.ಟಿ.ಎ ಸಭೆಯ ನಡಾವಳಿಯಲ್ಲಿ ರಾಜ್ಯ ಸರ್ಕಾರವು ಬೇಂದ್ರೆ ಸಾರಿಗೆ ಎಂಬ ಖಾಸಗಿ ಪ್ರವರ್ತಕರಿಗೆ ಬೆಳಗಾವಿ-ಅಥಣಿ-ವಿಜಯಪುರ ಮಾರ್ಗದಲ್ಲಿ ಕಾರ್ಯಾಚರಣೆಗೆ ಒಪ್ಪಿಗೆ ಸೂಚಿಸಿ, ಆದೇಶ ಹೊರಡಿಸಿರುವುದು ಖಂಡನೀಯ ಎಂದರು.‌

ಈಗಾಗಲೇ ಈ ಮಾರ್ಗದಲ್ಲಿ ಪ್ರತಿ 15 ನಿಮಿಷಕ್ಕೊಂದರಂತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ವಿಷಯ ಸರ್ಕಾರದ ಗಮನದಲ್ಲಿ ಇದ್ದರೂ ಕೂಡಾ, ಖಾಸಗಿ ವಾಹನಗಳಿಗೆ ಪರವಾನಿಗೆ ನೀಡಿರುವುದು ಕಾರ್ಮಿಕ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.

ಸಂಸ್ಥೆಯಲ್ಲಿ ಸುಮಾರು 1.35 ಲಕ್ಷ ಕಾರ್ಮಿಕರು ಹಾಗೂ ಅವರ 10 ಲಕ್ಷ ಜನ ಕುಟುಂಬದ ಸದಸ್ಯರು ಸಂಸ್ಥೆಯನ್ನೆ ಅವಲಂಬಿಸಿರುವುದರಿಂದ, ನಿಗಮದ ಎಲ್ಲ ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗ ಬೀದಿಗೆ ಬರುವ ಸಂಭವವಿರುತ್ತದೆ ಎಂದು ತಿಳಿಸಿದ್ದಾರೆ.

ಈ ಆದೇಶವನ್ನು ಕೂಡಲೇ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಸಂಸ್ಥೆಯ ಎಲ್ಲಾ ಕಾರ್ಮಿಕ ಸಂಘಟನೆಯ ಮುಖಂಡರು, ಸದಸ್ಯರು ಹಾಗೂ ಕಾರ್ಮಿಕರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ ಪರಿಸಿಷ್ಟ ಪಂಗಡ ನೌಕರರ ಅಸೋಸಿಯೇಷನ್ ಅಧ್ಯಕ್ಷ ಆರ್.ಜಿ. ನಿಂಗದಳ್ಳಿ, ಗೌರವಾಧ್ಯಕ್ಷ ಪಿ.ವೈ. ಚವ್ಹಾಣ, ಪದಾಧಿಕಾರಿ ಮೋಹನ ಗುನ್ನಾಪೂರ, ಮುಖ್ಯ ಉಪಾಧ್ಯಕ್ಷ ಜೆ.ಆರ್. ಕಬಾಡೆ, ಯುವರಾಜ ಪರನಾಕರ, ಯುವರಾಜ ಸಾಗರ, ಶಿವಾಜಿ ಚವ್ಹಾಣ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

****

ವಿಜಯಪುರ ಜಿಲ್ಲೆಯು ಸಂಪೂರ್ಣ ರಾಷ್ಟ್ರಿಕೃತ ವಲಯವಾಗಿದ್ದು, ಈ ವಲಯದಲ್ಲಿ ಖಾಸಗಿ ಕಾರ್ಯಾಚರಣೆಗೆ ಅವಕಾಶವಿಲ್ಲ. ಅವಕಾಶ ನೀಡಿದರೆ ಉಗ್ರ ಹೋರಾಟ ನಡೆಸುತ್ತೇವೆ

–ಆರ್‌.ಆರ್‌.ನದಾಫ್, ರಾಜ್ಯ ಸಂಘಟನಾ ಕಾರ್ಯದರ್ಶಿ,

ಕೆಎಸ್‌ಆರ್‌ಟಿಸಿ ಸ್ಟಾಪ್‌ ಅಂಡ್‌ ವರ್ಕಸ್‌ ಯೂನಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT