ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಿ; ನಾಗ ದೇವನಿಗೆ ಎಲ್ಲೆಡೆ ನಮನ

ಶ್ರದ್ಧಾ ಭಕ್ತಿಯ ನಮನ, ವಿಶೇಷ ಪೂಜೆ, ಧನ್ಯತಾಭಾವ ಹೊಂದಿದ ಭಕ್ತಸಮೂಹ
Last Updated 15 ಆಗಸ್ಟ್ 2018, 13:54 IST
ಅಕ್ಷರ ಗಾತ್ರ

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದ ಎಲ್ಲೆಡೆ ಬುಧವಾರ ನಸುಕಿನಲ್ಲೇ ನಾಗ ಪಂಚಮಿ ಸಂಭ್ರಮ ಮನೆ ಮಾಡಿತ್ತು.

ನಾಗಪಂಚಮಿ ಆಚರಣೆಗಾಗಿ ಮಂಗಳವಾರ ರಾತ್ರಿಯೇ ಅಂತಿಮ ಸಿದ್ಧತೆ ಪೂರೈಸಿಕೊಂಡಿದ್ದ ಹೆಂಗೆಳೆಯರು, ಬುಧವಾರ ನಸುಕಿನಲ್ಲೇ ಮತ್ತೊಮ್ಮೆ ಮನೆ ಸ್ವಚ್ಛಗೊಳಿಸಿ, ಸ್ನಾನ ಪೂರೈಸಿ, ಅಲಂಕೃತಗೊಂಡು ದೇಗುಲ ಸೇರಿದಂತೆ ಹುತ್ತಗಳನ್ನು ಅರಸಿ ತೆರಳಿ ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಂಗಳವಾರ ಮುಸ್ಸಂಜೆ ಮನೆಯಲ್ಲಿನ ಜಗುಲಿ ಕಟ್ಟೆಯಲ್ಲಿ ನಾಗ ಮೂರ್ತಿ ಪ್ರತಿಷ್ಠಾಪಿಸಿ ಬೆಲ್ಲದ ನೀರು ಎರೆದಿದ್ದ ಮನೆ ಮಂದಿ, ಬುಧವಾರ ಹೊರಗೆ ತೆರಳಿ ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ, ಹುತ್ತಕ್ಕೆ, ನಾಗರ ಮೂರ್ತಿಗಳಿಗೆ ಕೊಬ್ಬರಿ ಗುಂಡಿನಿಂದ ಹಾಲಿನ ಧಾರೆಯೆರೆದು ಧನ್ಯತಾಭಾವ ಹೊಂದಿದರು.

ನಸುಕಿನಲ್ಲೇ ಮನೆಗಳಲ್ಲಿ ನಾಗ ದೇವನಿಗಾಗಿ ವಿಶೇಷ ನೈವೇದ್ಯ ತಯಾರಿಸಿದ್ದ ಮಹಿಳೆಯರು, ಉಪವಾಸದಲ್ಲೇ ಹುತ್ತಗಳ ಬಳಿ ತೆರಳಿ ಪಂಚಮಿಯ ಪೂಜೆ ಸಲ್ಲಿಸಿದರು. ಮನೆ ಮಂದಿಯೆಲ್ಲ ಒಟ್ಟಿಗೆ ಕಲೆತು ನಾಗರ ಮೂರ್ತಿಗೆ ಹಿರಿಯರ ಪಾಲು... ಕಿರಿಯರ ಪಾಲು... ಅಣ್ಣನ ಪಾಲು... ತಮ್ಮನ ಪಾಲು... ಅಕ್ಕ–ತಂಗಿಯರ ಪಾಲು ಎಂದು ಪ್ರಾರ್ಥಿಸುತ್ತಾ ಹಾಲಿನ ಧಾರೆಯೆರೆದರು.

ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಪಂಚಮಿ ವಿಶಿಷ್ಟತೆಯಿಂದ ಆಚರಣೆಗೊಂಡಿತು. ಮನೆ ಮಂದಿ ಒಟ್ಟಾಗಿ ಪ್ರತಿ ವರ್ಷ ತಾವು ಪೂಜಿಸುವ ಹುತ್ತದ ಬಳಿ ತೆರಳಿ ನಾಗದೇವನನ್ನು ಆರಾಧಿಸಿ, ವಿಶೇಷ ಪೂಜೆ ಸಲ್ಲಿಸುವ ದೃಶ್ಯ ಎಲ್ಲೆಡೆ ಗೋಚರಿಸಿತು.

ಇದೇ ವರ್ಷದಲ್ಲಿ ಮದುವೆಯಾಗಿದ್ದ ಹೆಂಗೆಳೆಯರು ಪಂಚಮಿ ಆಚರಣೆಗಾಗಿಯೇ ತವರಿಗೆ ಬಂದಿದ್ದು ವಿಶೇಷ. ಇವರು ತಮ್ಮ ಬಾಲ್ಯದ ಗೆಳತಿಯರೊಂದಿಗೆ ನಾಗಪ್ಪನ ಮೂರ್ತಿಗೆ ಹಾಲೆರೆದು, ನೈವೇದ್ಯ ಸಲ್ಲಿಸಿ ತಮ್ಮ ಸಹೋದರನ ರಕ್ಷಣೆಗಾಗಿ ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರೆ, ಇನ್ನೂ ಕೆಲವರು ಅಪರೂಪಕ್ಕೆ ತವರಿಗೆ ಬಂದು ಭೇಟಿಯಾದ ಬಾಲ್ಯದ ಗೆಳತಿಯರೊಂದಿಗೆ ಪರಸ್ಪರ ಕುಶಲೋಪರಿ ನಡೆಸಿದ ದೃಶ್ಯ ಗೋಚರಿಸಿದವು.

ಸ್ವಾತಂತ್ರ್ಯೋತ್ಸವ ಆಚರಣೆ ಬಳಿಕ ಮನೆಗೆ ಮರಳಿದ ಮಕ್ಕಳು ಕೊಬ್ಬರಿ ಗುಂಡಿನ ಆಟ, ಕಣ್ಣಾಮುಚ್ಚಾಲೆ, ಜೋಕಾಲಿ ಜೀಕುವುದು. ಲಿಂಬೆ ಹಣ್ಣು ಎಸೆಯುವ, ಏಣಿ ಏರುವ ಸ್ಪರ್ಧಾತ್ಮಕ ಆಟಗಳಲ್ಲಿ ಉಂಡೆಗಳನ್ನು ಸವಿಯುತ್ತಾ ತಲ್ಲೀನರಾದರು.

ಹಬ್ಬದ ಆಚರಣೆ ಮುಗಿದ ಬಳಿಕ ಎಲ್ಲರೂ ತಮ್ಮ ಮನೆಗಳಲ್ಲಿ ಒಟ್ಟಾಗಿ ಕಲೆತು ಚುರುಮುರಿ ಚೂಡಾ, ಬೇಸನ್‌, ಗರಿ ಉಂಡಿ, ಚಕ್ಕುಲಿ, ಕರ್ಜಿಕಾಯಿ, ರವೆ, ಕಡ್ಲೆ, ಹೆಸರು, ಶೇಂಗಾ, ಬೂಂದಿ ಉಂಡೆ, ಕರದಂಟು ಸೇರಿದಂತೆ ಇನ್ನಿತರೆ ಬಗೆ ಬಗೆಯ ಉಂಡೆಗಳನ್ನು ಪರಸ್ಪರ ಹಂಚಿಕೊಂಡು ಸವಿದು ಸಂತಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT