ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ್ತಿ: ಪ್ರವಾಸಿಗರನ್ನು ಆಕರ್ಷಿಸುವ ಇಂಚಗೇರಿಯ ನವಿಲುಗಳು

Published 9 ಮೇ 2024, 5:59 IST
Last Updated 9 ಮೇ 2024, 5:59 IST
ಅಕ್ಷರ ಗಾತ್ರ

ಹೊರ್ತಿ: ಭಾವೈಕ್ಯ ಹಾಗೂ ರಾಷ್ಟ್ರಭಕ್ತರ ನಿರ್ಮಾಣಕ್ಕೆ ಹೆಸರುವಾಸಿಯಾದ ಇಂಚಗೇರಿ ಆಧ್ಯಾತ್ಮಿಕ ಕೇಂದ್ರವೂ ಹೌದು. ಚಡಚಣ ತಾಲ್ಲೂಕಿನ ಇಂಚಗೇರಿ ಮಠದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮೈದಳೆದಿರುವ ‘ನವಿಲುತಾಣ’ವು ಈಗ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿದೆ.

ಕರ್ನಾಟಕದ ಗಡಿಭಾಗದಲ್ಲಿರುವ ಇಂಚಗೇರಿ ಮಠಕ್ಕೆ ನೆರೆಯ ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶ-ವಿದೇಶಗಳಿಂದ ಭಕ್ತರು ಬರುತ್ತಾರೆ. ಇಲ್ಲಿ ಸ್ವಚ್ಛಂದವಾಗಿ ವಿಹರಿಸುವ ನವಿಲುಗಳು ಅವರ ಗಮನ ಸೆಳೆಯುತ್ತವೆ. ಬೆಳಿಗ್ಗೆ ಮತ್ತು ಸಂಜೆ ಮಠದ ಆವರಣದಲ್ಲಿ ನಿರ್ಭಯದಿಂದ ಸಂಚರಿಸುವ ಅವು, ಅಲ್ಲಲ್ಲಿ ಸಾಲು ಸಾಲಾಗಿ ಬಂದು ವಿಹರಿಸುತ್ತವೆ. ಹಾಯಾಗಿ ನಲಿದಾಡುವ ಮತ್ತು ಗರಿಗೆದರಿಕೊಂಡು ನರ್ತಿಸುವ ನವಿಲುಗಳನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿದೆ.

ಇಲ್ಲಿಯ ಸಪ್ತ ಮಹಾರಾಜರ ಕರ್ತೃ ಗದ್ದುಗೆಗಳ ದರ್ಶನಕ್ಕೆಂದು ನಿತ್ಯವೂ ವಿವಿಧೆಡೆಯಿಂದ ಮಠಕ್ಕೆ ಬರುವ ಭಕ್ತರಿಗೆ ನವಿಲುಗಳ ದರ್ಶನವೂ ಲಭ್ಯವಾಗುತ್ತದೆ. ಪ್ರತಿ ನಿತ್ಯ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ಮಠ, ಶ್ರೀ ಸದ್ಗುರು ಮಾಧವಾನಂದ ಪ್ರಭೂಜಿ ಪ್ರೌಢಶಾಲೆಯ ಆವರಣ, ಸುತ್ತಲಿನ  ಪ್ರದೇಶ, ಹೊಲಗದ್ದೆಗಳದಲ್ಲಿ ಪುಟ್ಟ-ಪುಟ್ಟ ಹೆಜ್ಜೆ ಇಡುತ್ತ, ಆಹಾರ ಅರಸುತ್ತ ಗುಂಪು-ಗುಂಪಾಗಿ ಕಾಣಸಿಗುತ್ತವೆ.

ನಸುಕಿನ 4ಕ್ಕೆ ಕಾಕಡಾರುತಿಯ ವೇಳೆ ಘಂಟೆ, ಜಾಗಟೆ ಹಾಗೂ ತಾಳಗಳ ನಾದಕ್ಕೆ ನವಿಲುಗಳ ಸಾಮೂಹಿಕ ನಿನಾದವೂ ಸೇರಿಕೊಳ್ಳುತ್ತದೆ. ಬೆಳಿಗ್ಗೆ 6ಕ್ಕೆ ಮಠದಲ್ಲಿ ಜಾಗಟೆ ಹಾಗೂ ತಾಳಗಳ ನಾದದೊಂದಿಗೆ ಪೂಜೆ ನಡೆಯುತ್ತಿದ್ದಂತೆ ಅತ್ತ ಆವರಣದಲ್ಲಿ ಎಲ್ಲೆಡೆ ಕ್ಯಾಂವ್...ಕ್ಯಾಂವ್...ಕ್ಯಾಂವ್.... ಎಂಬ ನವಿಲುಗಳ ಕೂಗು ಮಾರ್ದನಿಸುತ್ತದೆ.

ದಿನವಿಡೀ ಮಠದ ಹೊಲಗದ್ದೆಗಳಲ್ಲಿ ಆಹಾರಕ್ಕಾಗಿ ಹುಳಹುಪ್ಪಡಿಗಳನ್ನು ಅರಸುತ್ತ ಸಂಚರಿಸುವ ಈ ನವಿಲುಗಳು ಸಂಜೆಯಾಗುತ್ತಿದ್ದಂತೆ ಹಿಂಡು-ಹಿಂಡಾಗಿ ಮಠದ ಆವರಣವನ್ನು ಪ್ರವೇಶಿಸಿ ಅಲ್ಲಲ್ಲಿ ಗರಿಗೆದರಿ ನರ್ತಿಸುತ್ತವೆ. ಈ ದೃಶ್ಯವನ್ನು ನೋಡಲು ಪ್ರವಾಸಿಗರು ಕಾದಿರುತ್ತಾರೆ.

ಯಾವುದೇ ರೀತಿಯ ಸದ್ದನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತ ಸದಾ ಎಚ್ಚರದಿಂದಲೇ ಇರುವ ಬೆರಗುಗಣ್ಣಿನ ಈ ನವಿಲುಗಳು ಸಣ್ಣದೊಂದು ಶಬ್ದವಾದರೂ ಬೆಚ್ಚಿ ಬಿದ್ದು ಛಂಗನೆ ಹಾರಿ ಮರಗಳ ಕೊಂಬೆಗಳ ಮೇಲೆ ಹೋಗಿ ಕುಳಿತುಕೊಳ್ಳುತ್ತವೆ. ಮಠದ ಆವರಣದಲ್ಲಿ ಕಾಳುಕಡಿ ಹಸನುಗೊಳಿಸಿದ ನಂತರ ಅಲ್ಲಲ್ಲಿ ಬಿದ್ದ ಅಳಿದುಳಿದ ಕಾಳುಗಳನ್ನು ತಿನ್ನುತ್ತ ಎಲ್ಲೆಂದರಲ್ಲಿ ಸಂಚರಿಸುತ್ತವೆ. ನವಿಲುಗಳಿಗೆ ಇಲ್ಲಿ ಯಾರ ಉಪದ್ರವವೂ ಇಲ್ಲ. ಬದಲಾಗಿ ಅವು ತಡಕಾಡಿ ಹುಳಹುಪ್ಪಡಿಗಳನ್ನು ಹೆಕ್ಕಿ ತಿನ್ನುವುದರಿಂದ ಬೆಳೆಗಳಿಗೆ ಕೀಟದ ಬಾಧೆ ಇಲ್ಲದಂತೆ ಮಾಡಿದ್ದು, ರೈತನ ಮಿತ್ರನಾಗಿ ಪರಿಣಮಿಸಿವೆ.

ನವಿಲುಗಳ ಸಂಖ್ಯೆ ಹೆಚ್ಚಳ: ಎಂಬತ್ತರ ದಶಕದಲ್ಲಿ ಬೆರಳೆಣಿಕೆಯಷ್ಟಿದ್ದ ನವಿಲುಗಳ ಸಂತತಿ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತ ಇಂದು ಅವುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಾಗಿದೆ. ಇಂಚಗೇರಿ ಭಾಗದಲ್ಲಿರುವ ಗುಡ್ಡಗಳ ಸಾಲು, ಮಠದ ಸುತ್ತಲಿನ ಪ್ರದೇಶದಲ್ಲಿರುವ ದಟ್ಟವಾದ ಗಗನಚುಂಬಿ ಗಿಡಮರಗಳು, ಪ್ರಶಾಂತ ವಾತಾವರಣ ಈ ನವಿಲುಗಳ ವಾಸಕ್ಕೆ ಅತ್ಯಂತ ಪ್ರಶಸ್ತ ಸ್ಥಳವಾಗಿದೆ.

ಅಷ್ಟೇ ಅಲ್ಲ ಈ ಭಾಗದ ಜನರ, ಮಠದ ಭಕ್ತರ ಹಾಗೂ ಇಲ್ಲಿಯ ಜನರ ರಾಷ್ಟ್ರಪಕ್ಷಿ ಪ್ರೇಮವೂ ಈ ನವಿಲುಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಬಹುದು. ಅದೆಷ್ಟೋ ನವಿಲುಗಳು ಇಲ್ಲಿ ಸಂತಾನಾಭಿವೃದ್ಧಿ ಹೊಂದಿ ಭೀಮಾನದಿ, ಕೃಷ್ಣಾ ನದಿ ತೀರ ಮತ್ತು ಅನೇಕ ಹಳ್ಳಿಗಳಿಗೆ ಹಾಗೂ ನೆರೆಯ ಮಹಾರಾಷ್ಟ್ರಕ್ಕೆ ವಲಸೆ ಹೋಗಿರುವುದುಂಟು.

ಇಂಚಗೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ನವಿಲುಗಳು ಬಹುಸಂಖ್ಯೆಯಲ್ಲಿರುವುದನ್ನು ಗಮನಿಸಿಯೇ ಈ ಹಿಂದೆ ‘ನಾನೂ ನೀನು ಜೋಡಿ’ ಚಿತ್ರ ತಂಡದವರು `ನವಿಲೇ...ನವಿಲೇ...ಮಾಯದ ನವಿಲೇ...’ ಎಂಬ ಹಾಡಿಗೆ ಮಠದ ಆವರಣ, ಹಸಿರಿನಿಂದ ಕಂಗೊಳಿಸುವ ಗುಡ್ಡಗಳ ಸಾಲಿನ ರಮಣೀಯ ನೋಟ ಹಾಗೂ ಇತರ ಕಡೆಗಳಲ್ಲಿನ ದೃಶ್ಯಾವಳಿಗಳ ಚಿತ್ರೀಕರಣ ಮಾಡಿಕೊಂಡಿರುವುದನ್ನು ಸ್ಮರಿಸಬಹುದು. ನವಿಲುಗಳು ಗರಿ ಬಿಚ್ಚಿ ಕುಣಿಯುವ ದೃಶ್ಯ ನೋಡಲು ಮಳೆಗಾಲ ಮತ್ತು ಚಳಿಗಾಲ ಈ ಸೂಕ್ತ ಸಮಯ

ಹೊರ್ತಿ ಸಮೀಪದ ಇಂಚಗೇರಿ ಮಠದ ಆವರಣದಲ್ಲಿ ಬೆಳಿಗ್ಗೆ 6ಕ್ಕೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ನವಿಲು
ಹೊರ್ತಿ ಸಮೀಪದ ಇಂಚಗೇರಿ ಮಠದ ಆವರಣದಲ್ಲಿ ಬೆಳಿಗ್ಗೆ 6ಕ್ಕೆ ಸ್ವಚ್ಛಂದವಾಗಿ ವಿಹರಿಸುತ್ತಿರುವ ನವಿಲು
ಹೊರ್ತಿ ಸಮೀಪದ ಇಂಚಗೇರಿ ಮಠದ ಆವರಣದ ಉದ್ಯಾನದಲ್ಲಿ ಸ್ವಚ್ಛಂದವಾಗಿ ಕುಳಿತ ನವಿಲು
ಹೊರ್ತಿ ಸಮೀಪದ ಇಂಚಗೇರಿ ಮಠದ ಆವರಣದ ಉದ್ಯಾನದಲ್ಲಿ ಸ್ವಚ್ಛಂದವಾಗಿ ಕುಳಿತ ನವಿಲು
ಹೊರ್ತಿ ಸಮೀಪದ ಇಂಚಗೇರಿ ಮಠದ  ಆವರಣದಲ್ಲಿ ನಿರ್ಭಯವಾಗಿ ಸಂಚರಿಸುತ್ತಿರುವ ನವಿಲುಗಳು
ಹೊರ್ತಿ ಸಮೀಪದ ಇಂಚಗೇರಿ ಮಠದ  ಆವರಣದಲ್ಲಿ ನಿರ್ಭಯವಾಗಿ ಸಂಚರಿಸುತ್ತಿರುವ ನವಿಲುಗಳು
ಹೊರ್ತಿ ಸಮೀಪದ ಇಂಚಗೇರಿ ಮಠದ ಆವರಣದಲ್ಲಿ ನಿರ್ಭಯವಾಗಿ ಸಂಚರಿಸುತ್ತಿರುವ ನವಿಲುಗಳು
ಹೊರ್ತಿ ಸಮೀಪದ ಇಂಚಗೇರಿ ಮಠದ ಆವರಣದಲ್ಲಿ ನಿರ್ಭಯವಾಗಿ ಸಂಚರಿಸುತ್ತಿರುವ ನವಿಲುಗಳು
ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ನವಿಲುಗಳು ಮಳೆಗಾಲ ಮತ್ತು ಚಳಿಗಾಲದಲ್ಲ ನವಿಲು ನಾಟ್ಯ ದರ್ಶನ ಘಂಟೆ, ಜಾಗಟಗಳ ನಾದದೊಂದಿಗೆ ಮೊಳಗುವ ನವಿಲುಗಳ ಕೂಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT