ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಪೂರ್ವ ಮೀಸಲಾತಿ ನಿಶ್ಚಿತ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Last Updated 3 ಫೆಬ್ರುವರಿ 2023, 15:42 IST
ಅಕ್ಷರ ಗಾತ್ರ

ವಿಜಯಪುರ: ಪಂಚಮಸಾಲಿ 2 ಎ ಮೀಸಲಾತಿಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶುಕ್ರವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆ, ಸಮಾವೇಶದ ಮೂಲಕ ವಿವಿಧ ಉಪನಾಮಗಳಿಂದ ಹರಿದು ಹಂಚಿ ಹೋಗಿದ್ದ ಪಂಚಮಸಾಲಿ ಸಮಾಜವನ್ನು ಒಂದು ಗೂಡಿಸುವ ಕೆಲಸ ಮಾಡಲಾಗಿದೆ. ಇದರಿಂದ ಇಡೀ ಲಿಂಗಾಯತರಲ್ಲೇ ಶೇ 70 ರಷ್ಟು ಜನಸಂಖ್ಯೆಯ ದೊಡ್ಡ ಸಮುದಾಯ ಪಂಚಮಸಾಲಿ ಎನ್ನುವುದು ಗೊತ್ತಾಯಿತು ಎಂದರು.

ನಮ್ಮ ಸಮಾಜಕ್ಕೆ ಮೀಸಲಾತಿ ಕೊಟ್ಟರೆ ದೊಡ್ಡ ಶಕ್ತಿ ಆಗುತ್ತದೆ ಎಂಬ ಭಾವನೆಯಿಂದ, ಎರಡು ವರ್ಷಗಳಿಂದ ಸಮಾಜವನ್ನು ಒಡೆಯಬೇಕೆಂದು ಕುತಂತ್ರ ನಡೆಯಿತು. ಆದರೂ ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ, ಸಮಾಜದ ಬಡ ಮಕ್ಕಳಿಗಾಗಿ ನ್ಯಾಯಯುತವಾಗಿ ಹೋರಾಡುತ್ತಿದ್ದೇವೆ. ಉಳಿದವರಂತೆ ರಾಜಕೀಯ ಸ್ಥಾನಮಾನ ಕೇಳುತ್ತಿಲ್ಲ ಎಂದರು.

ಇದು ಈಗಿನ ಹೋರಾಟವಲ್ಲ, 25-30 ವರ್ಷಗಳಿಂದ ನಡೆದುಕೊಂಡು ಬಂದಿದೆ. ಸಂಘಟನೆ ಮಾಡಿಕೊಳ್ಳುತ್ತಾ ಬಂದು ಇದೀಗ ದೊಡ್ಡ ಶಕ್ತಿ ಆಗಿ ನಿಂತಿದ್ದೇವೆ. ಮುಖ್ಯಮಂತ್ರಿಗಳು ತಾವಾಗಿಯೇ ಗಡುವು ನೀಡಿದ್ದರು. ಧಮಕಿ ಹಾಕಿಲ್ಲದಿದ್ದರೂ, ಸಚಿವರಿಂದ ಧಮಕಿ ಅಂತ ಹೇಳಿಸಲಾಯಿತು. ಬೆಳಗಾವಿ ಸಮಾವೇಶದ ದಿನ ಲಕ್ಷಾಂತರ ಜನ ಸೇರಿದ್ದರು. ಅಂದು ಸುವರ್ಣ ಸೌಧಕ್ಕೆ ಮುತ್ತಿಗೆಗೆ ಕರೆ ಕೊಟ್ಟಿದ್ದರೆ, ಹೊರ ಬರಲು ಗೋಲಿಬಾರ್‌ ಹೊರತು ಬೇರೆ ಪರ್ಯಾಯ ಅಸ್ತ್ರ ಇರಲಿಲ್ಲ. ಅದನ್ನು ನಾವು ಮಾಡಲು ಹೋಗಲಿಲ್ಲ ಎಂದರು.

ಸಮಾಜಕ್ಕೆ ಒಳ್ಳೆಯದು ಆಗುವುದು ಇದೆ. ಅದಕ್ಕಾಗಿ ಬಾಯಿ ಮುಚ್ಚಿಕೊಂಡು ಇರುವೆ. ಕೆಲವರು ಯಾವಾಗ ಹೊರಗೆ ಹಾಕಬೇಕು ಅಂತ ನಿಂತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT