ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಲೋಕಸಭೆ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ

ವಿಜಯಪುರ ಸೈನಿಕ್‌ ಶಾಲೆಯಲ್ಲಿ ವ್ಯವಸ್ಥೆ: ಜಿಲ್ಲಾಧಿಕಾರಿ ಟಿ.ಭೂಬಾಲನ್
Published 2 ಜೂನ್ 2024, 15:24 IST
Last Updated 2 ಜೂನ್ 2024, 15:24 IST
ಅಕ್ಷರ ಗಾತ್ರ

ವಿಜಯಪುರ: ನಗರದ ಸೈನಿಕ್‌ ಶಾಲೆಯಲ್ಲಿ ಜೂನ್‌ 4ರಂದು ಲೋಕಸಭೆ ಚುನಾವಣೆ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.

ಮತ ಎಣಿಕೆಯ ಸ್ಟ್ರಾಂಗ್ ರೂಂ ಅನ್ನು ಅಂದು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುವುದು. ಸರಿಯಾಗಿ ಎಂಟು ಗಂಟೆಗೆ ಸೇವಾ ಮತಗಳು, ಅಂಚೆ ಮತಗಳು ಹಾಗೂ ಮತಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ ಎಂದರು.

ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯುವ ಸೈನಿಕ ಶಾಲೆಯ ಸುತ್ತಲೂ 200 ಮೀಟರ್ ಅಳತೆಯಲ್ಲಿ ನಿಷೇಧಾಜ್ಞೆ ಇರಲಿದೆ. ಪೊಲೀಸ್‌ ಭದ್ರತೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೈನಿಕ್‌ ಶಾಲೆಯ ಒಡೆಯರ ಸದನದಲ್ಲಿ ಮುದ್ದೇಬಿಹಾಳ ಮತ್ತು ದೇವರ ಹಿಪ್ಪರಗಿ ಮತ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಆದಿಲ್‌ಶಾಹಿ ಸದನದಲ್ಲಿ ಬಸವನ ಬಾಗೇವಾಡಿ ಮತ್ತು ಬಬಲೇಶ್ವರ ಕ್ಷೇತ್ರ, ಹೊಯ್ಸಳ ಸದನದಲ್ಲಿ ವಿಜಯಪುರ ನಗರ ಮತ್ತು ನಾಗಠಾಣ ಕ್ಷೇತ್ರ,  ವಿಜಯಪುರ ಸದನದಲ್ಲಿ ಇಂಡಿ ಮತ್ತು ಸಿಂದಗಿ ಕ್ಷೇತ್ರ ಹಾಗೂ ಹೊಯ್ಸಳ ಸದನದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆಯಾ ವಿಧಾನಸಭೆ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಎಣಿಕೆ ಕಾರ್ಯವನ್ನು ಕೈಗೊಳ್ಳಲು ಪ್ರತಿ ವಿಧಾನಸಭೆ ಮತಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಒಟ್ಟು 8 ಮತಕ್ಷೇತ್ರಗಳಿಗೆ 112 ಟೇಬಲ್‌ಗಳಲ್ಲಿ ಹಾಗೂ ಅಂಚೆ ಮತಪತ್ರಗಳ ಎಣಿಕೆ ಕಾರ್ಯಕ್ಕಾಗಿ 12 ಟೇಬಲ್‌ಗಳಲ್ಲಿ ಹಾಗೂ ಇಟಿಪಿಬಿಎಸ್‌ ಮತಪತ್ರಗಳ ಸ್ಕ್ಯಾನಿಂಗ್‌ ಕಾರ್ಯವನ್ನು 6 ಟೇಬಲ್‌ಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಸುತ್ತಿನಲ್ಲಿ ಎಣಿಕೆಯಾದ ಅಂಕಿ ಅಂಶಗಳನ್ನು ಕ್ರೂಢಿಕರಿಸಿ ಸುತ್ತುವಾರು ಅಭ್ಯರ್ಥಿಗಳು ಪಡೆದ ಮತಗಳ ಅಂಕಿ–ಅಂಶಗಳನ್ನು ಚುನಾವಣಾಧಿಕಾರಿಗಳ ಕೊಠಡಿಯಿಂದ ನೇರವಾಗಿ ಮಾಧ್ಯಮ ಕೊಠಡಿಗೆ ಡಿಸ್‌ಪ್ಲೇ ಮಾಡಲಾಗುವುದು. ವಿದ್ಯುನ್ಮಾನ ಮತಯಂತ್ರಗಳ ಹಾಗೂ ಅಂಚೆ ಮತಪತ್ರಗಳ ಎಣಿಕೆ ಕಾರ್ಯವನ್ನು ಕೈಗೊಂಡ ನಂತರ ಅಂತಿಮವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಫಲಿತಾಂಶ ಘೋಷಿಸಲಾಗುವುದು ಎಂದರು.

ಪ್ರವೇಶ:

ಸೈನಿಕ ಶಾಲೆಯ ಗೇಟ್‌ ನಂ.1ರಲ್ಲಿ ಅಭ್ಯರ್ಥಿ, ಚುನಾವಣಾ ಏಜೆಂಟ್‌, ಸಹಾಯಕ ಚುನಾವಣಾಧಿಕಾರಿಗಳ ಟೇಬಲ್‌ಗೆ ನೇಮಕಾತಿ ಮಾಡಿದ ಎಣಿಕೆ ಏಜೆಂಟ್‌, ಚುನಾವಣಾ ಕಾರ್ಯನಿರತ ಅಧಿಕಾರಿ, ಸಿಬ್ಬಂದಿ, ಎಣಿಕೆ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ, ಪೊಲೀಸ್‌ ಅಧಿಕಾರಿ, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳಿಗೆ, ಸ್ವಚ್ಛತಾ ಸಿಬ್ಬಂದಿ, ಆಹಾರ ಪೂರೈಕೆ ಸಿಬ್ಬಂದಿ ಹಾಗೂ ಇತರೆ ಅಧಿಕಾರಿ, ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ಇರಲಿದೆ.

ಎರಡನೇ ಗೇಟ್‌(ಜಿಲ್ಲಾಸ್ಪತ್ರೆ ಎದುರು)ನಿಂದ ಸೈನಿಕ ಶಾಲೆಯ ಹೊಯ್ಸಳ ಸದನ ಹಾಗೂ ವಿಜಯನಗರ ಸದನಗಳಿಗೆ ತೆರಳಲು ವಿಜಯಪುರ ನಗರ, ನಾಗಠಾಣ, ಇಂಡಿ, ಸಿಂದಗಿ ವಿಧಾನಸಭಾ ಮತಕ್ಷೇತ್ರಗಳ ಹಾಗೂ ಹೊಯ್ಸಳ ಸದಸನದಲ್ಲಿ ಅಂಚೆ ಮತಗಳ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶ ಇರಲಿದೆ.

ಮೂರನೇ ಗೇಟ್‌(ಜಿಮ್‌ ಖಾನಾ ಕ್ಲಬ್‌ ಹಿಂದೆ)ನಿಂದ ಸೈನಿಕ ಶಾಲೆಯ ಒಡೆಯರ ಸದನ ಹಾಗೂ ಆದಿಲ್‌ಶಾಹಿ ಸದನಗಳಿಗೆ ತೆರಳಲು ಮುದ್ದೇಬಿಹಾಳ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ ವಿಧಾನಸಭೆ ಮತಕ್ಷೇತ್ರಗಳ ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶ ಇರಲಿದೆ.

ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶಿಸಲು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿಕೊಂಡು ಬರಬೇಕು ಎಂದು ತಿಳಿಸಿದ್ದಾರೆ.

ಯಾವುದೇ ಅಧಿಕಾರಿ, ಸಿಬ್ಬಂದಿಗಳಿಗೆ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್‌ ಪೋನ್‌ ತರುವುದನ್ನು ನಿಷೇಧಿಸಿರುವುದರಿಂದ ಮೊಬೈಲ್‌ಗಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಬರಬೇಕು ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ವಿಜಯಪುರ ನಗರದ ಸೈನಿಕ್‌ ಶಾಲೆಯಲ್ಲಿ ಲೋಕಸಭೆ ಚುನಾವಣೆ ಮತ ಎಣಿಕೆಗಾಗಿ ಮಾಡಿರುವ ಸಿದ್ಧತೆ 
ವಿಜಯಪುರ ನಗರದ ಸೈನಿಕ್‌ ಶಾಲೆಯಲ್ಲಿ ಲೋಕಸಭೆ ಚುನಾವಣೆ ಮತ ಎಣಿಕೆಗಾಗಿ ಮಾಡಿರುವ ಸಿದ್ಧತೆ 

ಶುಷ್ಕ ದಿನ ನಾಳೆ:

ಲೋಕಸಭಾ ಚುನಾವಣೆ ಮತ ಎಣಿಕೆಯು ಜೂನ್ 4ರಂದು ನಗರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು ಮತ ಎಣಿಕೆ ಕಾರ್ಯವನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸಲು ಅನೂಕೂಲವಾಗಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಜೂನ್‌ 4 ರಂದು ಬೆಳಿಗ್ಗೆ 6 ರಿಂದ ಜೂನ್ 5 ರ ಬೆಳಗಿನ 6 ಗಂಟೆವರೆಗೂ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಸಾಗಾಣಿಗೆ ಹಾಗೂ ಸಂಗ್ರಹವನ್ನು ನಿಷೇಧಿಸಿ ‘ಶುಷ್ಕ ದಿನ’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT