ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕಾರ್ಮಿಕರಿಂದ ಮುಷ್ಕರ, ಪ್ರತಿಭಟನೆ

ಕೇಂದ್ರ ಸರ್ಕಾರದ ಕಾರ್ಮಿಕ, ರೈತ, ಜನ ವಿರೋಧಿ ನೀತಿಗೆ ವಿರೋಧ
Last Updated 26 ನವೆಂಬರ್ 2020, 11:52 IST
ಅಕ್ಷರ ಗಾತ್ರ

ವಿಜಯಪುರ:ಕೇಂದ್ರ ಸರ್ಕಾರದ ಕಾರ್ಮಿಕ, ರೈತ, ಜನ ವಿರೋಧಿ ನೀತಿಗಳನ್ನು ವಿರೋಧಿಸಿ, ಕಾರ್ಮಿಕ ಕಾನೂನು ತಿದ್ದುಪಡಿ ನಿಲ್ಲಿಸಲು ಹಾಗೂ ಸಾರ್ವಜನಿಕೆ ಉದ್ದಿಮೆಗಳ ಖಾಸಗೀಕರಣ ಕೈಬಿಡಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಗುರುವಾರ ಮುಷ್ಕರ ನಡೆಸಲಾಯಿತು.

ಮುಷ್ಕರದ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ವಿವಿಧ ಗುತ್ತಿಗೆ ಕಾರ್ಮಿಕರು, ದಿನಗೂಲಿ ನೌಕರರು, ರೈತ-ಕೃಷಿ ಕಾರ್ಮಿಕರು, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಗ್ರಾಮ ಪಂಚಾಯ್ತಿ ನೌಕರರು, ಮನೆಗೆಲಸ ಕಾರ್ಮಿಕರು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ರೈತ ವಿರೋಧಿ ಕಾನೂನುಗಳನ್ನು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರವು ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಶಿಕ್ಷಣ, ಆರೋಗ್ಯ, ರೈಲ್ವೆ, ವಿದ್ಯುತ್, ದೂರಸಂಪರ್ಕ, ವಿಮಾ, ಬ್ಯಾಂಕ್ ಮತ್ತಿತರರ ಸಾರ್ವಜನಿಕ ವಲಯದ ಖಾಸಗಿಕರಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ ₹ 7,500 ನಗದು ವರ್ಗಾವಣೆ ಮಾಡಬೇಕು. ತಿಂಗಳಿಗೆ 10 ಕೆಜಿ ಉಚಿತ ಪಡಿತರ ಒದಗಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ 200 ದಿನಗಳ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನೀಡಬೇಕು. ಉದ್ಯೋಗ ಖಾತರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು. ಕೂಲಿಯನ್ನು ₹ 600ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಆಶಾ, ಅಂಗನವಾಡಿ, ಬಿಸಿಯೂಟ ಸ್ಕೀಮ್ ಕಾರ್ಯಕರ್ತೆಯರಿಗೆ ಕಾರ್ಮಿಕ ಸ್ಥಾನ ನೀಡಬೇಕು. ₹ 21 ಸಾವಿರ ಕನಿಷ್ಠ ವೇತನ ನಿಗದಿಯಾಗಬೇಕು. ಗುತ್ತಿಗೆ ಕಾರ್ಮಿಕರ ಕಾಯಂಗೆ ಅಸ್ಸಾಂ ಹಾಗೂ ತಮಿಳುನಾಡು ಮಾದರಿಯಲ್ಲಿ ಶಾಸನ ರೂಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಹೆಚ್ಚಿಸಿಬೇಕು.ಎನ್.ಪಿ.ಎಸ್ ರದ್ದುಮಾಡಿ ಮತ್ತು ಹಿಂದಿನ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಭೀಮಶಿ ಕಲಾದಗಿ, ಗ್ರಾಮೀಣ ಬ್ಯಾಂಕ್ ಯೂನಿಯನ್‍ನ ರಾಷ್ಟ್ರೀಯ ಕಾರ್ಯದರ್ಶಿ ಜಿ.ಜಿ ಗಾಂಧಿ,ಆರ್ ಕೆ ಎಸ್ ಜಿಲ್ಲಾ ಸಂಚಾಲಕ ಬಾಳು ಜೇವೂರ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷಣ ಹಂದ್ರಾಳ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಅಂಗನವಾಡಿ ನೌಕರರ ಜಿಲ್ಲಾ ಅಧ್ಯಕ್ಷರು ಸುನಂದಾ ನಾಯಕ, ಆಶಾ ಸಂಘಟನಾಕಾರರಾದ ಜಯಶ್ರೀ ಕಂಬಾರ, ಬಿಸಿಯೂಟ ಸಂಘಟನೆಯಿಂದ ಸುಮಂಗಲಾ ಆನಂದಶೆಟ್ಟಿ, ಚಂದ್ರಶೇಖರ ಗಂಟೆಪ್ಪಗೋಳ. ಎಸ್ ಆರ್ ನಾಯಕ, ಭಾರತಿ ದೇವಕತೆ, ಅಂಬಿಕಾ ಒಳಸಂಗ, ಲೈಲಾ ಪಠಾಣ, ಸುರೇಖಾ ರಜಪೂತ, ಈರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT