ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಂದ್‌ ವಿರೋಧಿಸಿ ಪ್ರತಿಭಟನೆ; ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಬೆಂಬಲ

Last Updated 22 ನವೆಂಬರ್ 2020, 12:38 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕ ಬಂದ್ ವಿರೋಧಿಸಿ ಸ್ವಾಮಿ ವಿವೇಕಾನಂದ ಸೇನೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮಾನಿ ಬಳಗ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ನಗರದ ಸಿದ್ದೇಶ್ವರ ಮಂದಿರದ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ, ವಾಟಾಳ್‌ ನಾಗರಾಜ್‌, ನಾರಾಯಣಗೌಡ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಧ್ವಜ ಹಾಗೂ ಭಾಗಧ್ವಜ ಹಿಡಿದು ಪ್ರತಿಭಟಿಸಿದರು.

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುವವರು ನಾಡದ್ರೋಹಿಗಳು. ತಕ್ಷಣ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಡಿ.5ರಂದು ಬಂದ್‌ಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಕರವೇ ಕಾರ್ಯಕರ್ತರು ಶಾಸಕ ಯತ್ನಾಳ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿರುವುದು ಖಂಡನೀಯ. ಕರವೇ ಮತ್ತು ವಾಟಾಳ್‌ ನಾಗರಾಜ್‌ ವಿರುದ್ಧ ಶಾಸಕ ಯತ್ನಾಳ ಅವರು ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘು ಅಣ್ಣಿಗೇರಿ, ಮರಾಠಾ ಸಮುದಾಯ ಕನ್ನಡ ಪ್ರೇಮಿಗಳಾಗಿದ್ದಾರೆ.‌ ಕನ್ನಡ ನಾಡು, ನುಡಿ, ನೆಲ, ಜಲವನ್ನು ಗೌರವಿಸುತ್ತಾ ಬಂದಿದ್ದಾರೆ. ನೂರಾರು ವರ್ಷಗಳಿಂದ ರಾಜ್ಯದಲ್ಲೇ ವಾಸವಾಗಿದ್ದಾರೆ. ಆ ಸಮುದಾಯದಲ್ಲಿ ಇರುವ ಬಡವರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮರಾಠಾ ಅಭಿವೃದ್ದಿ ನಿಗಮ ಮಾಡಿರುವುದು ಸರಿಯಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ ವಾಟಾಳ್ ನಾಗರಾಜ್ ಸರ್ಕಾರದಿಂದ ಎಷ್ಟು ಹಣ ಪಡೆದಿದ್ದಾರೆ‌ ಎಂಬುದನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು‌.

ಬಿಜೆಪಿ ಮುಖಂಡ ರಾಹುಲ್‌ ಜಾಧವ್‌ ಮಾತನಾಡಿ, ಮರಾಠಾ ಪ್ರಾಧಿಕಾರ ಮಾಡಿರುವುದು ಸಮುದಾಯದ ಅಭಿವೃದ್ಧಿಗಾಗಿಯೇ ಹೊರತು, ಮರಾಠಾ ಭಾಷೆಗಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಎಂಇಎಸ್‌ ಪುಂಡಾಟಿಕೆಗೆ, ಕನ್ನಡ ವಿರೋಧಿ ಚಟುವಟಿಕೆಗಳಿಗೆ ನಮ್ಮ ಬೆಂಬಲವಿಲ್ಲ. ಅದಕ್ಕೆ ನಮ್ಮ ವಿರೋಧವಿದೆ ಎಂದರು.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ ಮುಖ್ಯಮಂತ್ರಿ, ರಾಜ್ಯ ಸರ್ಕಾರಕ್ಕೆ ಹಾಗೂ ಶಾಸಕ ಯತ್ನಾಳಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಮುಖಂಡರಾದ ವಿಜಯಕುಮಾರ ಚವ್ಹಾಣ, ಸಂತೋಷ ಪಾಟೀಲ, ಬಾಗಪ್ಪ ಕನ್ನೊಳ್ಳಿ, ಪ್ರಕಾಶ ಚವ್ಹಾಣ, ಜ್ಯೂ.ವಿಷ್ಣು ವರ್ಧನ, ದಾದಾಸಾಹೇಬ ಬಾಗಾಯತ್‌, ವಿಕ್ರಂ ಗಾಯಕವಾಡ, ಬಾಬು ಶಿರಶ್ಯಾಡ, ಎಂ.ಎಸ್‌.ಕರಡಿ, ಲಕ್ಷ್ಮಿ ಕನ್ನೊಳ್ಳಿ, ಛಾಯಾ ಮಶಿವರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT