ಗುರುವಾರ , ಜೂನ್ 30, 2022
23 °C

ಅಸಂಘಟಿತ ಕಾರ್ಮಿಕರಿಗೆ ತ್ವರಿತ ಪರಿಹಾರ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯ ಅಸಂಘಟಿತ ವಲಯದ 11 ವರ್ಗಗಳ ಅರ್ಹ ಕಾರ್ಮಿಕರನ್ನು ಗುರುತಿಸುವ ಜೊತೆಗೆ ತ್ವರಿತವಾಗಿ ಪರಿಹಾರಧನ ಕಲ್ಪಿಸುವಂತೆ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ವಿಡಿಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಅಸಂಘಟಿತ ವಲಯದ  ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ಸರ್ಕಾರವು ಪ್ರತಿ ಕುಟುಂಬಕ್ಕೆ ತಲಾ ₹ 2 ಸಾವಿರ ನೆರವನ್ನು ಘೋಷಿಸಿದೆ. ಈ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು  ಸೂಚನೆ ನೀಡಿದರು.

ಅಸಂಘಟಿತ ವರ್ಗದ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಮಾತ್ರ ಅವಕಾಶವಿದೆ ಎಂದರು.

2020ನೇ ಸಾಲಿನಲ್ಲಿ ಒಂದು ಬಾರಿಯ ನೆರವು ಪಡೆದ ಅಗಸರು ಮತ್ತು ಕ್ಷೌರಿಕ ಫಲಾನುಭವಿ ಕುಟುಂಬಗಳು ಮತ್ತೊಮ್ಮೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ಆ ಸಾಲಿನಲ್ಲಿ ನೆರವು ಪಡೆಯದೆ ಇರುವ ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಕುಟುಂಬದ ಒಬ್ಬ ಕಾರ್ಮಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಅರ್ಜಿ ಸಲ್ಲಿಸಿ ನೋಂದಣಿಯಾದ ಬಿಪಿಎಲ್ ಕುಟುಂಬದ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಇತರೆ ಸದಸ್ಯರು ನೆರವು ಕೋರಿ ಮತ್ತೊಮ್ಮೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆದರೆ, ಈ ವರ್ಗಗಳ 65 ವರ್ಷ ಪೂರೈಸಿದ ಕಾರ್ಮಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.

ಈ ನೆರವು ಪಡೆಯಲು ಅಸಂಘಟಿತ ಕಾರ್ಮಿಕರು 18 ರಿಂದ 65 ವರ್ಷದವರಾಗಿರಬೇಕು. ಕುಟುಂಬದಲ್ಲಿ ಒಬ್ಬರು ಮಾತ್ರ ಪರಿಹಾರ ಧನ ಪಡೆಯಲು ಅರ್ಹರಿದ್ದು, ಒಬ್ಬರು ಮಾತ್ರ ಅರ್ಜಿ ಸಲ್ಲಿಸಬೇಕು ಎಂದರು.

ಅರ್ಹ ಫಲಾನುಭವಿಗಳು ಕೂಡ ನಗರ ಪ್ರದೇಶಗಳ ಸೇವಾ ಸಿಂಧು ಕೇಂದ್ರ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು ಹಾಗೂ ಗ್ರಾಮಾಂತರ ಪ್ರದೇಶದವರು ಗ್ರಾಮ-1 ಸೇವಾ ಕೇಂದ್ರಗಳಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಕಾರ್ಮಿಕ ನಿರೀಕ್ಷಕರಾದ ಜಗದೇವಿ ಸಜ್ಜನ್, ಉಮಾ ಕೋಳಿ, ವಿಶ್ವ ಕರ್ಮ ಸಮಾಜದ ಮುಖಂಡರಾದ ಪ್ರಮೋದ್ ಬಡಿಗೇರ, ಶ್ರೀಕಾಂತ ಕುಂದಣಗಾರ, ಬಾಳು ಗೀರಗಾಂವಕರ್, ಸಂತೋಷ ವಿಶ್ವಕರ್ಮ, ಕ್ಷೌರಿಕ ಸಮಾಜದ ಪಂಚಲಿಂಗ, ಗೃಹ ಕಾರ್ಮಿಕರ ಸಮಾಜದ ಮುಖಂಡರಾದ ಮಹಾದೇವಿ ಕಡ್ನನಳಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು