ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಕೋವಿಡ್-19 ಪರೀಕ್ಷೆ ಹೆಚ್ಚಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸೂಚನೆ
Last Updated 1 ಆಗಸ್ಟ್ 2020, 14:00 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ಆರ್.ಟಿ.ಪಿ.ಸಿ.ಆರ್ ಲ್ಯಾಬ್‍ನಲ್ಲಿ ಗಂಟಲುದ್ರವ ಮಾದರಿ ಪರೀಕ್ಷೆಯನ್ನು ಮೂರು ಶಿಫ್ಟ್‌ಗಳಲ್ಲಿ ಮಾಡಬೇಕು.ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗಂಟಲುದ್ರವ ಮಾದರಿಯನ್ನು ಪರೀಕ್ಷಿಸಲು ಸಾಧ್ಯವಾಗುವುದರಿಂದ ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಆರ್.ಟಿ.ಪಿ.ಸಿ.ಆರ್ ಲ್ಯಾಬ್‍ನಲ್ಲಿ ಸಿಬ್ಬಂದಿ ಕೊರತೆ ಇದ್ದಲ್ಲಿ ಹೆಚ್ಚುವರಿಯಾಗಿ ನೇಮಿಸಿಕೊಂಡು ತರಬೇತಿ ನೀಡಬೇಕು. ಒಂದು ಶಿಫ್ಟ್‌ನಲ್ಲಿ ಸುಮಾರು 91 ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ಮಾಡಬಹುದು. ಮುಂದಿನ ಶುಕ್ರವಾರದಿಂದ ಮೂರು ಶಿಫ್ಟ್‌ಗಳಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 61 ಗಂಟಲುದ್ರವ ಸಂಗ್ರಹ ಕೇಂದ್ರಗಳಲ್ಲಿ ಗಂಟಲು ದ್ರವ ಮಾದರಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅವರ ಮೊಬೈಲ್ ಸಂಖ್ಯೆ, ಆಧಾರ್‌ಕಾರ್ಡ್‍ನಲ್ಲಿರುವ ವಿಳಾಸವನ್ನು ಪಡೆಯಬೇಕು ಎಂದು ಸೂಚಿಸಿದರು.

ಗಂಟಲು ದ್ರವ ಮಾದರಿಯನ್ನು ಪಡೆದಕೊಂಡ ನಂತರ ವ್ಯಕ್ತಿಗೆ ನೆಗೆಟಿವ್ ಬಂದಲ್ಲಿ ನಂತರದ ಕೆಲವು ದಿನಗಳ ಕಾಲ ನಿಗಾ ಇಡಬೇಕು. ಕ್ವಾರಂಟೈನ್ ವಾಚ್ ಆಪ್ ಮೂಲಕ ಪ್ರತಿ ದಿನದ ಮಾಹಿತಿಯನ್ನು ತಿಳಿಸಬೇಕು. ಜೊತೆಗೆ ಆರೋಗ್ಯದ ಬಗ್ಗೆ ಸ್ಥಳೀಯ ಆರೋಗ್ಯ ಅಧಿಕಾರಿಗಳು ಹಾಗೂ ಟಿ.ಎಚ್.ಒ ಗಳು ಮುನ್ನೆಚ್ಚರಿಕೆ ವಹಿಸಬೇಕು. ಹೋಂಕ್ವಾರಂಟೈನ್ ಸಂದರ್ಭದಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಯಲ್ಲಿ ಕೋವಿಡ್‍ಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದಲ್ಲಿ ಅವರ ಗಂಟಲು ದ್ರವ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಬೇಕು ಎಂದರು.

ಕೋವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಕ್ವಾರಂಟೈನ್ ವಾಚ್ ಆಪ್, ಆರೋಗ್ಯ ಸೇತು ಆಪ್ ಗಳನ್ನು ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆ ವ್ಯವಸ್ಥಿತ ರೀತಿಯಲ್ಲಿಕೈಗೊಳ್ಳಬೇಕು ಎಂದು ಹೇಳಿದರು.

ಕೋವಿಡ್ ಪಾಸಿಟಿವ್ ಬಂದಿರುವ ರೋಗಿಗಳನ್ನು ಕೋವಿಡ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರಿಗೆ ಯಾವುದೇ ರೀತಿಯಲ್ಲಿ ಚಿಕಿತ್ಸೆ ಹಾಗೂ ಊಟದಲ್ಲಿ ತೊಂದರೆಗಳಾಗಬಾರದು. ಮೂಲ ಸೌಕರ್ಯದ ಜೊತೆಗೆ ಪ್ರತಿದಿನದ ಚಿಕಿತ್ಸೆಯನ್ನು ವ್ಯವಸ್ಥಿತ ರೀತಿಯಲ್ಲಿ ಕೈಗೊಳ್ಳುವಂತೆ ಅವರು ತಿಳಿಸಿದರು.

ಜಿಲ್ಲೆಯಲ್ಲಿ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟ ತೊಂದರೆ ಇರುವ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1077ಗೆ ಕರೆ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್‌, ಉಪ ವಿಭಾಗಾಧಿಕಾರಿಗಳಾದ ಸ್ನೇಹಲ್ ಲೋಖಂಡೆ, ಸೋಮಲಿಂಗ ಗೆಣ್ಣೂರ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪಸೆ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ಬಿರಾದಾರ, ಡಬ್ಲೂ.ಎಚ್.ಒ ಅಧಿಕಾರಿ ಡಾ. ಮುಕುಂದ ಗಲಗಲಿ, ಡಾ. ಲಕ್ಕಣ್ಣವರ, ಡಾ.ಕಟ್ಟಿ, ಡಾ. ಧಾರವಾಡಕರ ಸಭೆಯಲ್ಲಿ ಇದ್ದರು.

ತಾಲ್ಲೂಕು ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆ

ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಶೇ 50 ಬೆಡ್‍ಗಳನ್ನು ಕೋವಿಡ್‍ಗಾಗಿ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚಿಸಿದರು.

ಕೋವಿಡ್‌ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲ ತಾಲ್ಲೂಕಿನಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಶೇ 50 ರಷ್ಟು ಬೆಡ್‌ಗಳನ್ನು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳ ವ್ಯವಸ್ಥೆ ಮಾಡಬೇಕು ಎಂದರು.

ಈಗಾಗಲೇ ಇರುವ ಸೌಲಭ್ಯ ಬಳಸಿಕೊಂಡು ಕೋವಿಡ್ ಚಿಕಿತ್ಸೆ ಕೈಗೊಳ್ಳಬೇಕು. ಕೆಲವು ತಾಲ್ಲೂಕುಗಳಲ್ಲಿ ಮಾತ್ರ ಪ್ರಾರಂಭವಾಗಿದ್ದು, ಇನ್ನೂ ಕೆಲವು ತಾಲ್ಲೂಕುಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದರ ಮೂಲಕ ಕೋವಿಡ್‌ ಚಿಕಿತ್ಸೆ ಪ್ರಾರಂಭಿಸಬೇಕು ಎಂದು ಸೂಚಿಸಿದರು.

ಕೋವಿಡ್‍15 ಆಂಬುಲೆನ್ಸ್‌ ಮೀಸಲು

ವಿಜಯಪುರಜಿಲ್ಲೆಯಲ್ಲಿ 15 ಆಂಬುಲೆನ್ಸ್‌ಗಳು ಕೋವಿಡ್‍ಗಾಗಿಯೇ ಮೀಸಲು ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದರು.

ಕೋವಿಡ್‌ಗೆ ಸಂಬಂಧಿಸಿದಂತೆ ಪ್ರತಿ ತಾಲ್ಲೂಕಿಗೆ ಒಂದರಂತೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಒಂದೊಂದು ಆಂಬುಲೆನ್ಸ್‌ಗಳನ್ನು ಪ್ರತಿ ತಾಲ್ಲೂಕುವಾರು ನೀಡಬೇಕು. ರೋಗಿಗಳಿಗೆ ಸರಿಯಾದ ಸಮಯದಲ್ಲಿ ನಿಗದಿತ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT