ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪದ ಶಾಲಾ ಬ್ಯಾಗ್ ಹೊರೆ: ಸರ್ಕಾರದ ಸೂಚನೆ ಪಾಲಿಸದ ಜಿಲ್ಲೆಯ ಶಾಲೆಗಳು

Last Updated 22 ಜುಲೈ 2019, 19:31 IST
ಅಕ್ಷರ ಗಾತ್ರ

ವಿಜಯಪುರ: ಶಾಲಾ ಮಕ್ಕಳ ಬ್ಯಾಗ್‌ ಹೊರೆ ತಗ್ಗಿಸುವಂತೆ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಸರ್ಕಾರ ಹೊಸ ನಿಯಮಾವಳಿ ರೂಪಿಸಿ, ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರೂ, ಜಿಲ್ಲೆಯ ಬಹುತೇಕ ಶಾಲೆಗಳು ಪಾಲನೆ ಮಾಡುತ್ತಿಲ್ಲ.

ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಉತ್ತಮವಾಗಿ ಕಲಿಯಲು ಸಾಧ್ಯ. ಈ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶದ ಅನ್ವಯ ರಾಜ್ಯ ಸರ್ಕಾರ 1 ಮತ್ತು 2ನೇ ತರಗತಿ ಮಕ್ಕಳ ಬ್ಯಾಗಿನ ತೂಕ 1.5 ಕೆ.ಜಿ, 3 ರಿಂದ 5ನೇ ತರಗತಿ ಮಕ್ಕಳ ಬ್ಯಾಗ್‌ ಭಾರ 3 ಕೆ.ಜಿ, 6 ರಿಂದ 7ನೇ ತರಗತಿ ಮಕ್ಕಳ ತೂಕ 4.5 ಕೆ.ಜಿ, 8 ರಿಂದ 10ನೇ ತರಗತಿ ಮಕ್ಕಳ ಬ್ಯಾಗಿನ ತೂಕ 5 ಕೆ.ಜಿ ಕ್ಕಿಂತ ಹೆಚ್ಚಳ ಇರಬಾರದು ಎಂಬ ನಿಯಮ ರೂಪಿಸಿದೆ.

ಆದರೆ, ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು, ಸರ್ಕಾರದ ಆದೇಶ ಧಿಕ್ಕರಿಸಿ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿವೆ. ಇದರಿಂದ ಮಕ್ಕಳು ಭಾರವಾದ ಬ್ಯಾಗ್‌ ಹೊತ್ತು ನಿಟ್ಟುಸಿರು ಬಿಡುತ್ತ ಶಾಲೆಗೆ ಹೋಗುವುದು ಅನಿವಾರ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗುವರೇ ಎಂಬುದು ಪೋಷಕರ ಒತ್ತಾಯವಾಗಿದೆ.

‘ಮಕ್ಕಳು ಚೆನ್ನಾಗಿ ಓದಲಿ ಅಂತ ಒಳ್ಳೆಯ ಶಾಲೆಗಳಿಗೆ ಸೇರಿಸುತ್ತೇವೆ. ಅಲ್ಲಿನ ನಿಯಮಾವಳಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ವೇಳಾ ಪಟ್ಟಿಯಂತೆ ಪ್ರತಿ ದಿನ ಮಕ್ಕಳ ಬ್ಯಾಗಿಗೆ ಪುಸ್ತಕ ಮತ್ತು ಇನ್ನಿತರ ಚಟುವಟಿಕೆಗಳ ಸಾಮಗ್ರಿಗಳನ್ನು ಹಾಕಿ ಕಳಿಸುತ್ತೇವೆ. ಜತೆಗೆ ಊಟದ ಡಬ್ಬಿ, ನೀರಿನ ಬಾಟಲ್‌ ಇರುವುದರಿಂದ ಮಕ್ಕಳ ಬ್ಯಾಗ್‌ ಭಾರ ಹೆಚ್ಚಾಗುತ್ತದೆ’ ಎಂದು ಪಾಲಕರು ಹೇಳುತ್ತಾರೆ.

‘ಮಕ್ಕಳ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕ ಹೊರಿಸಿದರೆ ಸೊಂಟದ ಮೇಲೆ ನೇರವಾಗಿ ಭಾರ ಬೀಳುತ್ತದೆ. ಭಾರ ಹೆಚ್ಚಾಗುತ್ತದೆ ಎಂದುಕೊಂಡು ಕೆಲ ಪುಸ್ತಕಗಳನ್ನು ಬಿಟ್ಟು ಹೋದರೆ, ಶಾಲೆಯಲ್ಲಿ ಶಿಕ್ಷಕರು ಬೈಯುತ್ತಾರೆ ಎಂಬ ಭಯ ಕಾಡುತ್ತದೆ. ಇದು ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳನ್ನು ಕುಗ್ಗಿಸುತ್ತದೆ. ಈ ಸಮಸ್ಯೆ ನಿವಾರಣೆಗಾಗಿ ಸರ್ಕಾರ ಹೊರಡಿಸಿರುವ ನಿಯಮಗಳಂತೆ ಎಲ್ಲಾ ಶಾಲೆಗಳು ನಡೆದುಕೊಳ್ಳುವುದು ಒಳ್ಳೆಯದು’ ಎಂಬುದು ವೈದ್ಯರ ಅಭಿಪ್ರಾಯ.

*
ಸರ್ಕಾರದ ಸೂಚನೆಯಂತೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಎರಡನೇ ನೋಟಿಸ್‌ ಕೊಡಲಾಗುವುದು. ಸ್ಪಂದಿಸದಿದ್ದರೆ ಸೂಕ್ತ ಕ್ರಮ ಕೈಗೊಳಲಾಗುವುದು.
-ಸಿ.ಪ್ರಸನ್ನಕುಮಾರ್, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT