ಗುರುವಾರ , ಸೆಪ್ಟೆಂಬರ್ 23, 2021
21 °C
ತಳಿರು ತೋರಣ, ರಂಗೋಲಿಯಿಂದ ಶಾಲೆಗಳ ಸಿಂಗಾರ; ವಿದ್ಯಾರ್ಥಿಗಳಿಗೆ ಹೂನೀಡಿ ಸ್ವಾಗತ

ಬಾಗಿಲು ತೆರೆದ ಶಾಲೆ; ಹಾಜರಾತಿ ಕಡಿಮೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಪರಿಣಾಮ ಒಂದೂವರೆ ವರ್ಷದಿಂದ ಬಾಗಲು ಮುಚ್ಚಿದ್ದ ಶಾಲೆಗಳು ಜಿಲ್ಲೆಯಾದ್ಯಂತ ಸೋಮವಾರದಿಂದ ಪುನರಾರಂಭವಾದವು.

6 ರಿಂದ 8ರ ವರೆಗಿನ ಭೌತಿಕ ತರಗತಿಗಳು ಆರಂಭವಾಗಿರುವುದು ವಿದ್ಯಾರ್ಥಿ, ಫೋಷಕರು ಹಾಗೂ ಶಾಲಾ ಶಿಕ್ಷಕರಲ್ಲಿ ಹೊಸ ಚೈತನ್ಯ ಮೂಡಿಸಿರುವುದು ಕಂಡುಬಂದಿತು.

ಈಗಾಗಲೇ 9ರಿಂದ ಪಿಯುಸಿ ವರೆಗಿನ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿ–ಪೋಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸೋಮವಾರದಿಂದ 6ರಿಂದ 8ನೇ ತರಗತಿಗಳನ್ನೂ ಆರಂಭಿಸಿದೆ. ಆದರೆ, ಪ್ರಥಮ ದಿನದಂದು ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು.

ಜಿಲ್ಲೆಯ ಕೆಲವೆಡೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳ ಸ್ವಾಗತಕ್ಕಾಗಿ ತಳಿರು ತೋರಣಗಳನ್ನು ಕಟ್ಟಿ, ರಂಗೋಲಿಯಿಂದ ಸಿಂಗರಿಸಲಾಗಿತ್ತು. ಮಕ್ಕಳಿಗೆ ಗುಲಾಬಿ ನೀಡಿ, ಮೈಮೇಲೆ ಪುಷ್ಪವನ್ನು ಎರಚಿಸಿ ಶಿಕ್ಷಕರು, ಶಾಲಾ ಸಿಬ್ಬಂದಿ ವಿಶೇಷವಾಗಿ ಸ್ವಾಗತಿಸಿದರು.

ಶಾಲಾರಂಭದ ಪ್ರಥಮ ದಿನವಾದ ಕಾರಣ ಕೆಲವು ಶಾಲೆಗಳಲ್ಲಿ ಸರಸ್ವತಿ ಪೂಜೆ, ಸ್ವಾಗತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪೋಷಕರು ಸ್ವತಃ ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಬಿಟ್ಟು ಹೋದರು. ಭೌತಿಕ ತರಗತಿಗಳ ಜೊತೆಗೆ ಆನ್‌ಲೈನ್‌ ತರಗತಿಗಳಿಗೂ ಅವಕಾಶ ಇರುವುದರಿಂದ  ಕೆಲವು ಪೋಷಕರು ಕೋವಿಡ್‌ ಭಯದಿಂದ ಸದ್ಯ ಮಕ್ಕಳನ್ನು ಶಾಲೆಗೆ ಕಳುಹಿಸದೇ ಕಾದು ನೋಡತೊಡಗಿದ್ದಾರೆ. 

ಒಂದೊಂದು ಡೆಸ್ಕ್‌ಗೆ ಇಬ್ಬಿಬ್ಬರಂತೆ ವಿದ್ಯಾರ್ಥಿಗಳನ್ನು ಪರಸ್ಪರ ಅಂತರದಲ್ಲಿ ಕೂರಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆ ಇರುವುದು ಕಂಡುಬಂದಿತು.

ಭೌತಿಕ ತರಗತಿಗೆ ಹಾಜರಾಗಬೇಕೆಂದರೆ ಪಾಲಕರಿಂದ ಒಪ್ಪಿಗೆ ಪತ್ರ ಹಾಗೂ ಕೋವಿಡ್‌ ನಿಯಮ ಪಾಲನೆ ಕುರಿತು ಒಪ್ಪಿಗೆ ಪತ್ರವನ್ನು ಬರೆಯಿಸಿ ಸಹಿ ತೆಗೆದುಕೊಂಡ ಬಳಿಕವೇ ವಿದ್ಯಾರ್ಥಿಗಳನ್ನು ತರಗತಿ ಒಳಗೆ ಶಾಲಾ ಸಿಬ್ಬಂದಿ ಬಿಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. 

ಹ್ಯಾಂಡ್‌ ಸ್ಯಾನಿಟೈಸ್‌ ಸಿಂಪಡಣೆ, ಥರ್ಮಲ್‌ ಸ್ಕ್ಯಾನಿಂಗ್‌ನಿಂದ ದೇಹದ ಉಷ್ಣತೆಯನ್ನು ಪರೀಕ್ಷಿಸಿ ತರಗತಿ ಒಳಗೆ ವಿದ್ಯಾರ್ಥಿಗಳನ್ನು ಬಿಡಲಾಯಿತು. ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು ತರಗತಿ ಪ್ರವೇಶಿಸುವ ಮೂಲಕ ವಿದ್ಯಾರ್ಥಿಗಳು ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಿದರು.

***

1,49,512 ಜಿಲ್ಲೆಯ 6ರಿಂದ 8ನೇ ತರಗತಿ ಒಟ್ಟು ವಿದ್ಯಾರ್ಥಿಗಳು

73,512 ಸೋಮವಾರ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ

ಕೋವಿಡ್‌ ಸೋಂಕು ಹರಡದಂತೆ ಶಾಲೆಗಳಲ್ಲಿ ಮುನ್ನೆಚ್ಚರಿಕೆ 

***

ಜಿಲ್ಲೆಯಲ್ಲಿ ಆರರಿಂದ ಎಂಟನೇ ತರಗತಿಗೆ ಪ್ರಥಮ ದಿನವಾದ ಸೋಮವಾರ ಶೇ 49.17ರಷ್ಟು ಮಕ್ಕಳು ಹಾಜರಾಗಿದ್ದರು. ಹಬ್ಬದ ಬಳಿಕ ಹಾಜರಾತಿ ಹೆಚ್ಚಳವಾಗಲಿದೆ
–ಎನ್‌.ಬಿ.ಹೊಸೂರ
ಡಿಡಿಪಿಐ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.