ಸೋಮವಾರ, ಮಾರ್ಚ್ 27, 2023
29 °C
ಅಶೋಕ ಮನಗೂಳಿಗೆ ಮುಳುವಾದವರು ಯಾರು; ಚರ್ಚೆ ಜೋರು

ಸಿಂದಗಿ ಉಪ ಚುನಾವಣೆ: ಕಾಂಗ್ರೆಸ್‌ ಸೋಲಿಗೆ ಕಾಂಗ್ರೆಸಿಗರೇ ಕಾರಣ?

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಇದ್ದರೂ ನಿರೀಕ್ಷೆ ಮೀರಿ ದೊಡ್ಡ ಅಂತರದಿಂದ ಸೋಲಲು ಕಾರಣವೇನು ಎಂಬ ಚರ್ಚೆ ಜೋರಾಗಿದೆ.

ಕಾಂಗ್ರೆಸ್‌ ಸೋಲಿಗೆ ಕಾಂಗ್ರೆಸಿಗರೇ ಕಾರಣ ಎಂಬ ಆರೋಪ ದೊಡ್ಡಮಟ್ಟದಲ್ಲಿ ಕೇಳಿಬಂದಿದೆ.

ಹೌದು, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ವಿಧಾನಸಭೆ ಉಪ ಚುನಾವಣೆ ಟಿಕೆಟ್‌ ಗಿಟ್ಟಿಸಿದರೂ ಅಶೋಕ ಮನಗೂಳಿ ಅವರಿಗೆ ಆರಂಭದಿಂದ ಚುನಾವಣೆ ಮತದಾನದ ದಿನದ ವರೆಗೂ ಟಿಕೆಟ್‌ ವಂಚಿತ ಮೂಲ ಕಾಂಗ್ರೆಸ್‌ ನಾಯಕರನ್ನು ಓಲೈಸುವುದು, ಸಮಾಧಾನ ಪಡಿಸುವುದಕ್ಕೆ ಹೆಚ್ಚು ಕಾಲ ವ್ಯಯವಾಯಿತು ಎಂಬ ಮಾತು ಕೇಳಿಬಂದಿದೆ.

ಅಲ್ಲದೇ, ರಾಜ್ಯ ನಾಯಕರು ಕೂಡ ಟಿಕೆಟ್‌ ವಂಚಿತ ಮುಖಂಡರ ಓಲೈಕೆಗೆ ಹೆಚ್ಚು ಒತ್ತು ನೀಡಿದರು. ವಿಧಾನ ಪರಿಷತ್‌ಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಆದರೆ, ಅಸಮಾಧಾನಿತರು ಮನಗೂಳಿ ಅವರನ್ನು ಹಣಿಯದಿದ್ದರೆ ಪಕ್ಷದಲ್ಲಿ ನಮ್ಮ ಭವಿಷ್ಯಕ್ಕೆ ಕಂಟಕವಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಅನ್ನೇ ಸೋಲಿಸಲು ತಾವೇ ಬತ್ತಳಿಕೆಯನ್ನು ಪ್ರಯೋಗಿಸಿದರು ಎಂಬ ವಿಶ್ಲೇಷಣೆ ನಡೆದಿದೆ.

ತಮ್ಮ ಅಭ್ಯರ್ಥಿ ಸೋಲಿಸಲೆಂದೇ ಬಿಜೆಪಿ ಜೊತೆ ಪರೋಕ್ಷವಾಗಿ ಕೈಜೋಡಿಸಿದರು. ತಮ್ಮ ಜೊತೆಗಿರುವ ಮುಖಂಡರನ್ನು ರಾತ್ರೋರಾತ್ರಿ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದರು ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್‌ ಮುಖಂಡರು ’ಪ್ರಜಾವಾಣಿ‘ಗೆ ತಿಳಿಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್‌, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ,ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಎದುರು ಟಿಕೆಟ್‌ ’ತ್ಯಾಗಿ‘ಗಳಂತೇ ಬಿಂಬಿಸಿಕೊಂಡರು. ಆದರೆ,  ವರಿಷ್ಠರು ಪಕ್ಷದೊಳಗಿನ ಸೋಲಿನ ತಂತ್ರಗಾರಿಕೆಯನ್ನು ಬೇಧಿಸಲು ವಿಫಲವಾದ ಪರಿಣಾಮ ಗೆಲುವು ದೂರವಾಯಿತು.

ಅಶೋಕ  ಅವರೊಂದಿಗೆ ಅಪಾರ ಪ್ರಮಾಣದ ಜೆಡಿಎಸ್‌ ಕಾರ್ಯಕರ್ತರೂ ಕಾಂಗ್ರೆಸ್‌ಗೆ ಬಂದರಾದರೂ ಅವರೊಂದಿಗೆ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಬೆರೆಯಲಿಲ್ಲ. ಅವರನ್ನು ಹೊರಗಿನವರಂತೆ ಕಂಡರು. ಅಲ್ಲದೇ, ಚುನಾವಣೆಯಲ್ಲೂ ಜೆಡಿಎಸ್‌ನಿಂದ ಬಂದ ಕಾರ್ಯಕರ್ತರೇ ಮನಗೂಳಿ ಪರ ಚುನಾವಣೆ ನಡೆಸಿದರಾದರು. ಕಾಂಗ್ರೆಸ್‌ ಕಾರ್ಯಕರ್ತರು ಅಖಾಡಕ್ಕೆ ಇಳಿಯಲಿಲ್ಲ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರು ಬಹಿರಂಗವಾಗಿಯೇ ಬಿಜೆಪಿಯತ್ತ ಹೊರಟರೂ ಅವರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯ ಮಾಡಲಿಲ್ಲ. ಇದು ಕಾಂಗ್ರೆಸ್‌ ಸೋಲಿಗೆ ಮುಖ್ಯ ಕಾರಣವಾಯಿತು ಎನ್ನಲಾಗುತ್ತಿದೆ.

ಕಾಂಗ್ರೆಸ್‌ ಚುನಾವಣಾ ಸೋಲಿನ ಆತ್ಮಾವಲೋಕನದಲ್ಲಿ ಈ ಅಂಶಗಳ ಮೇಲೆ ಬೆಳಕು ಚೆಲ್ಲುವುದೇ ಎಂಬುದನ್ನು ಕಾದು ನೋಡಬೇಕಿದೆ.

****

ಎಲ್ಲ ಸಮಾಜದವರೂ ಕೈಕೊಟ್ಟಿದ್ದಾರೆ: ಸುಣಗಾರ

ವಿಜಯಪುರ: ಪ್ರತಿಯೊಂದು ಹಳ್ಳಿ ಸುತ್ತಾಡಿ ಪ್ರಾಮಾಣಿಕವಾಗಿ ನಮ್ಮ ಅಭ್ಯರ್ಥಿ ಅಶೋಕ ಮನಗೂಳಿ ಪರ ಕೆಲಸ ಮಾಡಿದ್ದೇನೆ ಎನ್ನುತ್ತಾರೆ ಕಾಂಗ್ರೆಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಶರಣಪ್ಪ ಶುಣಗಾರ.

’ಪ್ರಜಾವಾಣಿ‘ಯೊಂದಿಗೆ ಬುಧವಾರ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಾನು ಅಶೋಕ ಮನಗೂಳಿ ಪರ ಕೆಲಸ ಮಾಡಲಿಲ್ಲ ಎಂಬ ಆರೋಪವನ್ನು ಸಾರಸಗಟಾಗಿ ತಳ್ಳಿ ಹಾಕಿದರು.

ಈ ಚುನಾವಣೆಯಲ್ಲಿ ಕೇವಲ ನಮ್ಮ ಸಮಾಜ(ತಳವಾರ) ಮಾತ್ರವಲ್ಲ, ಬಣಜಿಗ, ಪಂಚಮಸಾಲಿ, ಎಸ್‌ಸಿ ಮತಗಳು ಬಿಜೆಪಿಗೆ ಹೋಗಿವೆ. ಆದರೆ, ಮುಸ್ಲಿಂ ಮತದಾರರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಪರ ಮಾಡಿದ್ದಾರೆ ಎಂದು ತಮ್ಮ ಲೆಕ್ಕ ನೀಡಿದರು.

ಮತದಾನಕ್ಕೆ ಎರಡು–ಮೂರು ದಿನಗಳ ವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರವಾದ ವಾತಾವರಣ ಇತ್ತು. ಏಳೆಂಟು ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇತ್ತು. ಆದರೆ, ಬಿಜೆಪಿಯವರು ಅಧಿಕಾರ ದುರುಪಯೋಗ ಪಡಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಿದರು. ಇದನ್ನು ತಡೆಯಲು ನಮಗೆ ಸಾಧ್ಯವಾಗಲಿಲ್ಲ. ಇದೇ ಸೋಲಿಗೆ ಮುಖ್ಯ ಕಾರಣವಾಯಿತು ಎಂದು ಅವರು ವಿಶ್ಲೇಸಿದರು.

ಅಶೋಕ ಅವರೊಂದಿಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ಕಾರ್ಯಕರ್ತರು ಮತ್ತು ಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗ್ರಾಮೀಣ ಪ್ರದೇಶದಲ್ಲಿ  ಹೊಂದಾಣಿಕೆ ಆಗಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಮತದಾರರು ಪರಸ್ಪರ ಹೋಲಿಕೆ ಮಾಡಿ ನೋಡತೊಡಗಿದರು. ಕಾಂಗ್ರೆಸ್‌ ಅಭ್ಯರ್ಥಿ ಬಗ್ಗೆ ಕಾರ್ಯಕರ್ತರಿಗೆ ಇದ್ದ ತುಸು ವೈಮನಸ್ಸನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ ಎಂದರು.

***

ಸೋಲು–ಗೆಲುವಿಗೆ ಸಾಕಷ್ಟು ಕಾರಣಗಳಿರುತ್ತವೆ. ನಮ್ಮಿಂದ ಆಗಿರುವ ಲೋಪಗಳ ಬಗ್ಗೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ಆತ್ಮಾವಲೋಕನ ಮಾಡಿಕೊಳ್ಳಲಾಗುವುದು

–ಅಶೋಕ ಮನಗೂಳಿ, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

****

ಚುನಾವಣೆಯಲ್ಲಿ ಅಶೋಕ ಮನಗೂಳಿ ಪರ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಯಾವುದೇ ಬೇಧಬಾವ ಮಾಡಲಿಲ್ಲ

–ಶರಣಪ್ಪ ಸುಣಗಾರ, ಮಾಜಿ ಶಾಸಕ, ಕಾಂಗ್ರೆಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು