ಬುಧವಾರ, ಏಪ್ರಿಲ್ 14, 2021
24 °C
ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿಕೆ

ಸಿಂದಗಿ ಚುನಾವಣೆ: ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದ ವಿಜುಗೌಡ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಸಿಂದಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಈಗಾಗಲೇ ಕ್ಷೇತ್ರದ ಅನೇಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ, ನನಗೆ ಬಬಲೇಶ್ವರ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗಲು ಮನಸ್ಸಿಲ್ಲ. ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧನಿದ್ದೇನೆ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ನನ್ನ ತಾಯಿ ತವರು ಮನೆ. ಅಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನಮ್ಮ ಆಸ್ತಿಯೂ ಅಲ್ಲಿಯೇ ಇದೆ. ಆದರೆ, ಸಿಂದಗಿ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಾನು ಎಲ್ಲಿಯೂ ಹೇಳಿಲ್ಲ ಎಂದರು.

ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಬಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ಕೇವಲ 10, 12 ಸಾವಿರ ಮತಗಳ ಅಂತರದಲ್ಲಿ ಸೋಲಾಗಿದೆ. ಹೀಗಾಗಿ ಕಾಯಂ ಆಗಿ ಬಬಲೇಶ್ವರ ಕ್ಷೇತ್ರದಲ್ಲೇ ಇರಲು ಇಚ್ಛಿಸುತ್ತೇನೆ ಎಂದು ಹೇಳಿದರು.

ಫುಡ್‌ಪಾರ್ಕ್‌ ನಮ್ಮ ಕೂಸು

ಇಟ್ಟಂಗಿಹಾಳದಲ್ಲಿ ಆರಂಭವಾಗಲಿರುವ ಫುಡ್‌ಪಾರ್ಕ್ ನಾವು ಹುಟ್ಟಿಸಿದ ಕೂಸು. ಆದರೆ, ಕಾಂಗ್ರೆಸ್‌ನವರು ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.

ಬಬಲೇಶ್ವರ ಕ್ಷೇತ್ರದಲ್ಲಿ ಯಾವೊಬ್ಬರ ಬಿಜೆಪಿ ಕಾರ್ಯಕರ್ತ ಪಕ್ಷ ತೊರೆದು ಕಾಂಗ್ರೆಸ್‌ಗೆ ಹೋಗಿಲ್ಲ. ಕಾಂಗ್ರೆಸ್‌ ಮುಖಂಡರು ತಮಗೆ ತಾವೇ ಹಾರ ಹಾಕಿಕೊಂಡು ಬಿಜೆಪಿಯಿಂದ ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ದಾಸ್ಯಾಳ ಗ್ರಾಮದ ಕೆಲವರು ಬೆಳಿಗ್ಗೆ ಒಂದು ಪಕ್ಷ, ಮಧ್ಯಾಹ್ನ ಇನ್ನೊಂದು ಪಕ್ಷ, ಸಂಜೆ ಮತ್ತೊಂದು ಪಕ್ಷದಲ್ಲಿ ಇರುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಬಬಲೇಶ್ವರ ಮತ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ವಿಠಲ ಕಿರಸೂರ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಜುಗೌಡ ಪಾಟೀಲ, ಮಾಧ್ಯಮ ವಕ್ತಾರ ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹಿಟ್ನಳ್ಳಿಯಲ್ಲಿ ತಳಿ ಶುದ್ಧೀಕರಣ ಕೇಂದ್ರ

ವಿಜಯಪುರ:  ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯಿಂದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲದ ಆವರಣದಲ್ಲಿ ತಳಿ ಶುದ್ಧೀಕರಣ ಕೇಂದ್ರ ಆರಂಭಿಸಲು ಅಗತ್ಯವಿರುವ 10 ಎಕರೆ ಜಾಗವನ್ನು ಒದಗಿಸುವಂತೆ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದರು.

ವಿಜಯಪುರ ನಗರದ ಬೆಂಗಳೂರು ರಸ್ತೆಯಲ್ಲಿ ₹1.80 ಕೋಟಿ ಅನುದಾನದಲ್ಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಜಿಲ್ಲಾ ಕಚೇರಿ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.

ವಿಜಯಪುರ ನಗರದ ಗಾಂಧಿ ಚೌಕ್‌ನಲ್ಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಎರಡು ಸಿರಿಧಾನ್ಯ ಮಳಿಗೆಗಳನ್ನು ಆರಂಭಿಸಲಾಗುವುದು. ಜೊತೆಗೆ ಜಿಲ್ಲೆಯಾದ್ಯಂತ ರೈತರಿಗೆ ಸಿರಿಧಾನ್ಯಗಳ ಬೀಜ ಮಾರಾಟಕ್ಕೆ ಅನುಕೂಲವಾಗುವಂತೆ ಸಂಚಾರಿ ವಾಹನವನ್ನು ಒದಗಿಸುವಂತೆ ಮುಖ್ಯಮಂತ್ರಿಗೆ ಕೋರಿದ್ದೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಗೆ ಪ್ರಸಕ್ತ ಬಜೆಟ್‌ನಲ್ಲಿ ₹ 500 ಕೋಟಿ ನೀಡಿದ್ದಾರೆ ಎಂದರು.

ಸಂಸ್ಥೆಯಲ್ಲಿ ಸದ್ಯ 76 ಸಿಬ್ಬಂದಿ ಇದ್ದಾರೆ. ಇನ್ನೂ 125 ಸಿಬ್ಬಂದಿ ಅಗತ್ಯವಿದ್ದು, ಹುದ್ದೆಗಳನ್ನು ಭರ್ತಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಇದುವರೆಗೆ 270 ಸಾವಯವ ರೈತರ ಗುಂಪು ರಚನೆ ಮಾಡಲಾಗಿದೆ. 5500 ಹೆಕ್ಟೆರ್‌ನಲ್ಲಿ ಸಾವಯವ ಕೃಷಿ ನಡೆಯುತ್ತಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ 32 ಸಾವಯವ ರೈತರ ಗುಂಪು ರಚನೆಗೆ ಹೆಸರು ನೋಂದಾಣಿಯಾಗಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು