ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಅನಾಮಿಕ ಮೊಬೈಲ್ ನಂಬರ್ ಮೂಲಕ ಸಂಸದರ ವಿರುದ್ಧ ಅಪಪ್ರಚಾರ

ಸಂಸದ ರಮೇಶ ಜಿಗಜಿಣಗಿ ಆರೋಪ
Published 22 ಜುಲೈ 2023, 15:52 IST
Last Updated 22 ಜುಲೈ 2023, 15:52 IST
ಅಕ್ಷರ ಗಾತ್ರ

ವಿಜಯಪುರ: ‘ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಕೆಲವು ದುಷ್ಟರು ನನ್ನ ವಿರುದ್ಧ ಅನಾಮಿಕ ಮೊಬೈಲ್ ನಂಬರ್‌ಗಳನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದು, ಅವರ ವಿರುದ್ಧ ದೂರು ನೀಡಲು ಕ್ರಮ ಕೈಗೊಂಡಿದ್ದೇನೆ’ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ವಿವಿಧ ನಂಬರ್‌ಗಳಿಂದ ಜಿಲ್ಲೆಯ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಕರೆ ಮಾಡಲಾಗುತ್ತಿದೆ. ಅಲ್ಲದೇ, ನನ್ನ ಬಗ್ಗೆ ರಾಜಕೀಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ನೇರವಾಗಿ ನನ್ನನ್ನು ಎದುರಿಸಲು ಹಿಂಜರಿಯುತ್ತಿರುವ ದುರುಳರು ನಡೆಸುತ್ತಿರುವ ಈ ತಂತ್ರಗಳು ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಕಳೆದ ಹಲವು ದಿನಗಳಿಂದ ಈ ರೀತಿ ಮೊಬೈಲ್ ಕರೆ ಬಂದಿವೆ ಎಂದು ಜಿಲ್ಲೆಯ ವಿವಿಧ ಭಾಗಗಳಿಂದ ಬಿಜೆಪಿ ಮತ್ತು ಇತರ ಪಕ್ಷಗಳ ಜನಪ್ರತಿನಿಧಿಗಳೂ ನನಗೆ ಮಾಹಿತಿ ನೀಡಿದ್ದಾರೆ. ಇಂಥ ಚಿಲ್ಲರೆ ರಾಜಕಾರಣ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬೇನಾಮಿ ಹೆಸರಿನಲ್ಲಿ ಸಮೀಕ್ಷೆ ಮತ್ತೀತರ ಚಟುವಟಿಕೆಗಳ ನೆಪದಲ್ಲಿ ಇವರು ಮಾಡುತ್ತಿರುವ ಇಂಥ ನಾಟಕಗಳಿಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕಳೆದ ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ನನ್ನ ಹೆಸರಿಗೆ ಮಸಿ ಬಳಿಯುವ ಇವರ ಪ್ರಯತ್ನ ಎಂದಿಗೂ ಸಫಲವಾಗುವುದಿಲ್ಲ. ಇಂಥ ಕುತಂತ್ರಗಳಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಬಸವನಾಡು ವಿಜಯಪುರ ಜಿಲ್ಲೆಯ ಜನ ಯಾವತ್ತೂ ದುರುಳರ ತಂತ್ರಗಳಿಗೆ ಮರುಳಾಗುವುದಿಲ್ಲ. ಇಂಥ ಸವಾಲುಗಳು ನನಗೆ ಹೊಸದಲ್ಲ. ಯಾರು ಏನೇ ಮಾಡಿದರೂ ನನ್ನ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸದಾ ನನ್ನೊಂದಿಗಿದ್ದಾರೆ. ಅಣ್ಣ ಬಸವಣ್ಣ, ಸಿದ್ಧೇಶ್ವರ ಸ್ವಾಮೀಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವದಡಿ  ಹಿಂದೆ, ಈಗ ಮತ್ತು ಮುಂದೆಯೂ ಜನಸೇವೆ ಮುಂದುವರಿಸುತ್ತೇನೆ. ಯಾರೂ ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡಬಾರದು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT