ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಯಿಂದ ಸುನೀತಾ ಚವ್ಹಾಣ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್‌–ಜೆಡಿಎಸ್ ಕಾರ್ಯಕರ್ತರ ಶಕ್ತಿ ಪ್ರದರ್ಶನ; ಮುಖಂಡರ ಒಗ್ಗಟ್ಟಿನ ದರ್ಶನ
Last Updated 30 ಏಪ್ರಿಲ್ 2019, 16:01 IST
ಅಕ್ಷರ ಗಾತ್ರ

ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದಿಂದ, ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಗುರುವಾರ, ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಸುನೀತಾ ಚವ್ಹಾಣ ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.

ಕಾಂಗ್ರೆಸ್‌, ಜೆಡಿಎಸ್‌ನ ಹಿರಿಯ ಮುಖಂಡರು, ಸಚಿವರು, ಶಾಸಕರು, ಎರಡೂ ಪಕ್ಷದ ಅಪಾರ ಸಂಖ್ಯೆಯ ಕಾರ್ಯಕರ್ತರ ಸಮ್ಮುಖ, ಬೃಹತ್ ಮೆರವಣಿಗೆ ನಡೆಸಿದ ಅಭ್ಯರ್ಥಿ ಸುನೀತಾ ಚವ್ಹಾಣ ತಮ್ಮ ಶಕ್ತಿ ಪ್ರದರ್ಶನ ಸಹ ನಡೆಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರ ದೇಗುಲದ ಬಳಿ ಜಮಾಯಿಸಿದ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ಸಮ್ಮುಖ ಸಿದ್ಧೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆಯ ಬಳಿಕ ಎರಡು ವಾಹನಗಳಲ್ಲಿ ಮುಖಂಡರು ಮೆರವಣಿಗೆ ಆರಂಭಿಸಿದರು. ಕೈನಲ್ಲಿ ತಮ್ಮ ತಮ್ಮ ಪಕ್ಷದ ಬಾವುಟ ಹಿಡಿದ ಕಾರ್ಯಕರ್ತರು ಉತ್ಸಾಹದಿಂದ ಮೆರವಣಿಗೆ ಮುಂಭಾಗ ಹೆಜ್ಜೆ ಹಾಕಿದರು. ಹಿಂಭಾಗದಲ್ಲಿ ನಾಯಕರ ಕಾರುಗಳ ಸರಣಿ ಮೆರವಣಿಗೆಯೂ ನಡೆದಿದ್ದು ಗೋಚರಿಸಿತು.

ಮಹಿಳಾ ಮುಖಂಡರು, ಕಾರ್ಯಕರ್ತೆಯರು ಸಹ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು, ಜೈಕಾರದ ಘೋಷಣೆಗಳನ್ನು ಮೊಳಗಿಸಿದ್ದು ವಿಶೇಷವಾಗಿತ್ತು. ಲಂಬಾಣಿ ಮಹಿಳೆಯರು ಹಾದಿಯುದ್ದಕ್ಕೂ ಬಂಜಾರರ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದರು. ಕುದುರೆಯ ಕಮಾಲ್ ಸಹ ಮೆರವಣಿಗೆಯ ಮೆರುಗು ಹೆಚ್ಚಿಸಿತ್ತು.

ಮೆರವಣಿಗೆಯ ಹಾದಿಯುದ್ದಕ್ಕೂ ಸುನೀತಾ ನೆರೆದಿದ್ದ ಜನಸ್ತೋಮಕ್ಕೆ ಕೈ ಮುಗಿದು ಜನಾಶೀರ್ವಾದ ಬೇಡಿದರು. ಗಾಂಧಿಚೌಕ್‌, ಬಸವೇಶ್ವರ ವೃತ್ತ, ಅಂಬೇಡ್ಕರ್ ಚೌಕ್‌ ಮೂಲಕ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಸಮೀಪ ತೆರಳಿತು. ಕಾಂಗ್ರೆಸ್‌–ಜೆಡಿಎಸ್‌ ಅಗ್ರೇಸರರಾದ ರಾಹುಲ್‌ಗಾಂಧಿ, ಎಚ್‌.ಡಿ.ದೇವೇಗೌಡರ ಆಳೆತ್ತರದ ಕಟೌಟ್‌ಗಳು ಮೆರವಣಿಗೆಯಲ್ಲಿ ರಾರಾಜಿಸಿದವು.

ಗೃಹ ಸಚಿವ ಎಂ.ಬಿ.ಪಾಟೀಲ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ, ಶಿಕ್ಷಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ದೇವಾನಂದ ಚವ್ಹಾಣ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ ತೆರೆದ ವಾಹನದಲ್ಲಿ ಬೆಂಬಲಿಗರೊಂದಿಗೆ ನಿಂತು ಮೆರವಣಿಗೆಯಲ್ಲಿ ಭಾಗಿಯಾದರು.

ನೆತ್ತಿ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಸಚಿವದ್ವಯರಾದ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ ತಮ್ಮ ಪಕ್ಷದ ಚಿಹ್ನೆಯುಳ್ಳ ಟೋಪಿ ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಮಾಜಿ ಸಚಿವ ಸಿ.ಎಸ್.ನಾಡಗೌಡ, ಮಾಜಿ ಶಾಸಕರಾದ ಪ್ರೊ.ರಾಜು ಆಲಗೂರ, ವಿಠ್ಠಲ ಕಟಕದೊಂಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಸಹ ಪಾಲ್ಗೊಂಡಿದ್ದರು.

ಜಿಗಜಿಣಗಿಗೆ ವಿಶ್ರಾಂತಿಯ ಸಮಯ; ಎಂ.ಬಿ
‘ಕೇಂದ್ರ ಸಚಿವ ರಮೇಶ ಜಿಗಜಿಣಗಿ ರಾಜಕಾರಣದಿಂದ ನಿವೃತ್ತಗೊಂಡು, ವಿಶ್ರಾಂತಿ ಪಡೆಯುವ ಸಮಯ ಸನ್ನಿಹಿತವಾಗಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಲೇವಡಿ ಮಾಡಿದರು.

‘ದಶಕದಿಂದ ಕ್ಷೇತ್ರದ ಸಂಸದರಾಗಿರುವ ಜಿಗಜಿಣಗಿ ಲೋಕಸಭೆಯಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ಕೇಂದ್ರದ ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ನೈರ್ಮಲ್ಯ ಖಾತೆಯ ಸಚಿವರಾಗಿದ್ದರೂ; ಕನಿಷ್ಠ ಪಕ್ಷ ತಮ್ಮೂರು ಇಂಡಿ ತಾಲ್ಲೂಕಿನ ಸಮಸ್ಯೆಯನ್ನು ಇಂದಿಗೂ ಬಗೆಹರಿಸಿಲ್ಲ’ ಎಂದು ಲೇವಡಿ ಮಾಡಿದರು.

‘1983ರಿಂದ ಅಧಿಕಾರ ಅನುಭವಿಸಿದರೂ; ಜಿಗಜಿಣಗಿ ಜಿಲ್ಲೆಗೆ ಏನೂ ಮಾಡಲಿಲ್ಲ, ಇದೀಗ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಮೇಲ್ಸೇತುವೆಗಳಲ್ಲಿ ರಾಜ್ಯ ಸರ್ಕಾರದ ಪಾಲಿದೆ. ಎನ್.ಟಿ.ಪಿ.ಸಿ.ಗೆ ಸುಶೀಲ ಕುಮಾರ ಶಿಂಧೆ ಕೊಡುಗೆಯಾಗಿದೆ ಹೊರತು, ಇವು ಜಿಗಜಿಣಗಿ ಅವರ ಕೊಡುಗೆಗಳಲ್ಲ’ ಎಂದು ವಾಗ್ದಾಳಿ ನಡೆಸಿದರು.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ ‘ನಮ್ಮೂರಿನ ಗೋಳಗುಮ್ಮಟದ ಪಿಸುಗ್ಯಾಲರಿಯಲ್ಲಿ ಒಮ್ಮೆ ಕೂಗಿದರೆ ಏಳು ಬಾರಿ ಪ್ರತಿಧ್ವನಿಸುತ್ತದೆ. ಆದರೆ ಜಿಗಜಿಣಗಿ 10 ವರ್ಷದಿಂದ ಒಮ್ಮೆಯೂ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ. ಕುಡಿಯುವ ನೀರಿನ ಸಚಿವರಾದರೂ; ತಮ್ಮೂರು ಇಂಡಿ ತಾಲ್ಲೂಕಿನ ನೀರಿನ ಸಮಸ್ಯೆ ಬಗೆಹರಿಸಿಲ್ಲ’ ಎಂದು ಕಟು ಟೀಕೆ ಮಾಡಿದರು.

ವಿಜಯಪುರದಲ್ಲೂ ಜೋಡೆತ್ತು..!
‘ಮೈತ್ರಿಯ ಶಕ್ತಿ ಅದ್ಭುತವಾಗಿದೆ. ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ವಿಜಯಪುರ ಜಿಲ್ಲೆಯ ಜೋಡೆತ್ತುಗಳು. ಎಂ.ಸಿ.ಮನಗೂಳಿ ಚಕ್ಕಡಿ ಹೊಡೆಯಲಿದ್ದು, ಜಿಗಜಿಣಗಿ ಅವರಿಗೆ ಮನೆಯಲ್ಲಿ ಕೂಡುವಂಥ ಪರಿಸ್ಥಿತಿ ಎದುರಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

‘ಎರಡೂ ಪಕ್ಷದವರು ಒಂದೇ ಪಕ್ಷದವರಂತೆ ಸೇರಿದ್ದು, ಮೈತ್ರಿ ಶಕ್ತಿ ಎಂತಹದ್ದು ಎಂಬುದು ಗೊತ್ತಾಗಿದೆ. ಜಿಗಜಿಣಗಿ ಯಾವ ಕೆಲಸ ಮಾಡಿಲ್ಲ. ಹೀಗಾಗಿ ಬಿಜೆಪಿಯವರಿಗೆ ಮುಖ ತೋರಿಸಲಾಗುತ್ತಿಲ್ಲ. ಹೀಗಾಗಿ ಮೋದಿ ನೋಡಿ ವೋಟ್ ಹಾಕಿ ಅಂತಿದ್ದಾರೆ, ಯಾರಿಗೆ ಹೇಗೆ ಮೋಸ ಮಾಡಬೇಕು ಎಂಬುದು ಬಿಜೆಪಿಯವರಿಗೆ ಕರಗತವಾಗಿದೆ’ ಎಂದು ಟೀಕಿಸಿದರು.

ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಮಾತನಾಡಿ ‘ರಮೇಶ ಜಿಗಜಿಣಗಿ ಅತಿ ಹೆಚ್ಚು ಅಧಿಕಾರ ಅನುಭವಿಸಿದರೂ, ಜಿಲ್ಲೆಗೆ ಏನು ಮಾಡಿಲ್ಲ. ಬರೀ ಕಾಕಾ, ಬಾಬಾ ಎಂದು ಒಂದೂ ಕೆಲಸ ಮಾಡಿಲ್ಲ. ಈ ಸಲ ಜಿಲ್ಲೆಯ ಜನ ಅಭಿವೃದ್ಧಿ ಪರ ಚಿಂತನೆಗೆ ಬೆಂಬಲ ನೀಡಲಿದ್ದಾರೆ. ಇಂದಿನ ಜನಸ್ತೋಮ ನೋಡಿ ಜಿಗಜಿಣಗಿ ಅವರಿಗೆ ನಡುಕ ಶುರುವಾಗಿದೆ’ ಎಂದರು.

ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಮಾತನಾಡಿ ‘ಒಳಗಿಂದ ಒಳಗೆ ಒಂದಾಗಿಲ್ಲ ಎಂಬ ಆರೋಪಕ್ಕೆ, ಉತ್ತರ ಎಂಬಂತೆ ಎರಡೂ ಪಕ್ಷದ ನಾಯಕರು ಸೇರಿದ್ದೇವೆ’ ಎಂದು ಹೇಳಿದರು.

ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ ಮಾತನಾಡಿ ‘ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಸೇರಿದಂತೆ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದು, ಮೈತ್ರಿ ಶಕ್ತಿ ಪ್ರದರ್ಶನಗೊಂಡಿದೆ. ಈ ಚುನಾವಣೆ ದೇಶದ ಬದಲಾವಣೆ, ಬಿಜೆಪಿಯವರು ಏನೇನೋ ಮಾತಾಡುತ್ತಾರೆ, ನಮಗೆ ಬೇಕಾಗಿದ್ದು ರೈತರು. ಕೇಂದ್ರ ಸರ್ಕಾರ ರೈತರಿಗೆ ₹ 2000 ಕೊಡುವ ಭರವಸೆ ನೀಡಿದೆ, ಆದರೆ ಅದು ಪುಟಾಣಿಗೂ ಸಾಲಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT