ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: 654 ಜನ ವಸತಿ ಪ್ರದೇಶಗಳಿಗೆ ಟ್ಯಾಂಕರ್ ನೀರು ಪೂರೈಕೆ

ಮುಖ್ಯಮಂತ್ರಿಗಳಿಗೆ ವಿಡಿಯೊ ಸಂವಾದದ ಮೂಲಕ ಮಾಹಿತಿ ಒದಗಿಸಿದ ಜಿಲ್ಲಾಧಿಕಾರಿ
Published 23 ಮೇ 2024, 16:09 IST
Last Updated 23 ಮೇ 2024, 16:09 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ವಿವಿಧ ತಾಲ್ಲೂಕಿನ 119 ಗ್ರಾಮಗಳ 654 ಜನ ವಸತಿಗಳಿಗೆ 294 ಟ್ಯಾಂಕರ್‌ಗಳ ಮೂಲಕ 588 ಟ್ರಿಪ್ ಕುಡಿಯುವ ನೀರು ಸರಬರಾಜ ಮಾಡಲಾಗಿದೆ ಎಂದು  ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುರುವಾರ ವಿಡಿಯೊ ಸಂವಾದದ ಮೂಲಕ ಮಾಹಿತಿ ಒದಗಿಸಿದರು.

ಆಲಮಟ್ಟಿ ಜಲಾಶಯದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ 27 ಕೆರೆಗಳಿಗೆ ಹಾಗೂ ಮುಳವಾಡ ಹಂತ-3ರ ಅಡಿ 72 ಕೆರೆಗಳನ್ನು ತುಂಬಿಸಲು 6 ಟಿಎಂಸಿ ಅಡಿ ನೀರು ಕಾಯ್ದಿರಿಸಲಾಗಿದ್ದು, ನೀರನ್ನು ಹಂತ ಹಂತವಾಗಿ ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಅನುಮತಿ ಪಡೆದು ಕಾಲುವೆಗಳಿಗೆ ಹರಿಸಲಾಗಿದೆ ಎಂದರು.

ನಾರಾಯಣಪುರ ಜಲಾಶಯದಿಂದ ಐಬಿಸಿ ಮತ್ತು ಐಎಲ್‍ಸಿ ಕಾಲುವೆಗಳಿಗೆ 3.47 ಟಿಎಂಸಿ ಅಡಿ ನೀರು ಹರಿಸಲಾಗಿದೆ. ನಗರದ ಭೂತನಾಳ ಕೆರೆಗೆ ಮುಳವಾಡ ಏತ ನೀರಾವರಿ ಕಾಲುವೆಯಿಂದ ನೀರು ಹರಿಸಲಾಗಿದ್ದು, ಕುಡಿಯುವ ನೀರಿನ ಯಾವುದೇ ತೊಂದರೆಯಿಲ್ಲ. ಜಿಲ್ಲೆಯಲ್ಲಿ ಜೂನ್ 30ರವರೆಗೆ ಸಾಕಾಗುವಷ್ಟು ನೀರು ಸಂಗ್ರಹವಿದ್ದು, ಕುಡಿಯುವ ನೀರಿನ ಯಾವುದೇ ಸಮಸ್ಯೆ ಜಿಲ್ಲೆಯಲ್ಲಿ ಇಲ್ಲ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 3,13,652 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇದನ್ನು 16 ವಾರಗಳ ವರೆಗೆ ಉಪಯೋಗಿಸಹುದಾಗಿದೆ. 35,808 ಮೇವಿನ ಬೀಜಗಳ ಮಿನಿ ಕಿಟ್ ಸರಬರಾಜಾಗಿದ್ದು, ಎಲ್ಲ ಕಿಟ್‍ಗಳನ್ನು ರೈತರಿಗೆ ವಿತರಿಸಲಾಗಿದೆ. ಬರ ಹಿನ್ನೆಲೆಯಲ್ಲಿ ಅಂತರರಾಜ್ಯ ಮೇವು ಸಾಗಾಣಿಕೆ ನಿಷೇಧಿಸಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 12 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಮೇವು ಲಭ್ಯತೆ ಇರುವ ಕಡೆಗಳಲ್ಲಿ ಒಟ್ಟು  2 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ ಎಂದರು.

ಬರ ನಿರ್ವಹಣೆಗೆ ಒಟ್ಟು ₹ 18 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 3.31ಕೋಟಿಗಳಲ್ಲಿ ಒಟ್ಟು 238 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಟ್ಯಾಂಕರ್‌ ಮತ್ತು ಮೇವಿಗಾಗಿ ಇದುವರೆಗೆ ತಹಶೀಲ್ದಾರರಿಗೆ ₹3.5 ಕೋಟಿ  ಬಿಡುಗಡೆಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹42.68 ಕೋಟಿ ಅನುದಾನ ಲಭ್ಯವಿದೆ. ಜಿಲ್ಲೆಯ ಎಲ್ಲ ತಹಶೀಲ್ದಾರ್‌ ಖಾತೆಗಳಲ್ಲಿ ₹5.10 ಕೋಟಿ ಅನುದಾನವಿದೆ ಎಂದು ಅವರು ಮಾಹಿತಿ ಒದಗಿಸಿದರು.

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಮಾರ್ಚ್‌ನಿಂದ ಮೇ 22ರ ವರೆಗೆ ವಾಡಿಕೆ ಮಳೆ ಪ್ರಮಾಣ 41 ಮಿ.ಮೀ. ಇದ್ದು, 69  ಮೀ.ಮೀ. ಮಳೆಯಾಗಿದೆ ಎಂದರು.

ಜಿಲ್ಲೆಯ 2,67,720 ಫಲಾನುಭವಿಗಳ ಪೈಕಿ 2,50,063 ರೈತರಿಗೆ ₹413.48 ಕೋಟಿ ಬೆಳೆ ಪರಿಹಾರ ಧನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. 3,278 ವಿವಿಧ ಪ್ರಕರಣಗಳು ಬಾಕಿ ಉಳಿದಿದ್ದು, ಮೇ 22 ರಂದು 1329 ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸಿ ಸಲ್ಲಿಸಲಾಗಿದೆ. ಜಿಲ್ಲೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪರಿಹಾರ ಧನ ಬೆಳೆ ಹಾನಿ ಜಮಾ ಆಗಿದೆ ಎಂದು ತಿಳಿಸಿದರು. 

ವಿಡಿಯೊ ಸಂವಾದ ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT