ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪರಿಷ್ಕರಣೆ; ಎಲ್ಲರ ಅಭಿಪ್ರಾಯಕ್ಕೆ ಗೌರವ- ಡಾ.ಸಿ.ಎನ್. ಅಶ್ವತ್ಥನಾರಾಯಣ

Last Updated 3 ಜೂನ್ 2022, 13:51 IST
ಅಕ್ಷರ ಗಾತ್ರ

ವಿಜಯಪುರ:ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಉಂಟಾಗಿರುವ ಗೊಂದಲ, ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಬಾಗಿಲು ಸದಾ ತೆರೆದಿದೆಯೇ ಹೊರತು ಮುಚ್ಚಿಲ್ಲ; ಈ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯವನ್ನು ಗೌರವಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.‌

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರು ಶಿಕ್ಷಣ ಸಚಿವರಿಂದ ವರದಿ ತರಿಸಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಅಕ್ಕಮಹಾದೇವಿ ಮಹಿಳಾ ವಿವಿ ಮುಚ್ಚುವ ಯಾವುದೇ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಈ ಭಾಗದ ಜನರ ಅಭಿಪ್ರಾಯ ಆಧರಿಸಿ ತೀರ್ಮಾನಕೈಗೊಳ್ಳಲಾಗುವುದು. ಈಗಾಗಲೇ ಆರು ಹೊಸ ವಿವಿ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ. ಇನ್ನೂ ಹೊಸದಾಗಿ ಏಳು ವಿವಿ ಆರಂಭಿಸಲಾಗುವುದು. ವಿಶ್ವವಿದ್ಯಾಲಯಕ್ಕೆ ಸ್ವಾಯತ್ತತೆ ಕೊಟ್ಟು, ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಯುವಜನರ ಆಶೋತ್ತರಗಳನ್ನು ಅರಿತು ಸ್ಪಂದಿಸುವ ಮತ್ತು ಶಿಕ್ಷಕರ ಹಕ್ಕುಗಳನ್ನು ಎತ್ತಿ ಹಿಡಿಯುವ ಪರಂಪರೆ ಇರುವ ಬಿಜೆಪಿ ಅಭ್ಯರ್ಥಿಗಳನ್ನು ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಹನುಮಂತ ನಿರಾಣಿ ಮತ್ತು ಅರುಣ ಶಹಾಪುರ ಅವರು ಪದವೀಧರರು ಮತ್ತು ಶಿಕ್ಷಕರ ಪರವಾಗಿ ಪ್ರಾಮಾಣಿಕವಾಗಿ ದನಿ ಎತ್ತುವವರಾಗಿದ್ದಾರೆ. ಇಂತಹ ನೈಜ ಕಾಳಜಿ ಇರುವವರನ್ನು ಪದವೀಧರರ ಮತ್ತು ಶಿಕ್ಷಕರು ಪರಿಷತ್ತಿಗೆ ಮತದಾರರು ಆರಿಸಿ ಕಳಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮುಖಂಡರಾದ ವಿವೇಕಾನಂದ ಡಬ್ಬಿ,ಶಿವರುದ್ರ ಬಾಗಲಕೋಟೆ, ಮಲ್ಲಿಕಾರ್ಜುನ ಜೋಗೂರ, ಬಸು ಬಿರಾದಾರ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ದರಬಾರ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಜೇಶ ದರಬಾರ್‌ ಇದ್ದರು.

****

ಶಹಪೂರ, ನಿರಾಣಿ ಪರ ಪ್ರಚಾರ

ವಿಜಯಪುರ: ನಗರದ ಬಿಡಿಇ ಬಾಲಕಿಯರ ಪದವಿ ಪೂರ್ವ ಕಾಲೇಜು, ದರಬಾರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಗಳಲ್ಲಿ ಸಚಿವರು ಪಾಲ್ಗೊಂಡು,ಪಕ್ಷದ ಅಭ್ಯರ್ಥಿಗಳಾದ ಅರುಣ ಶಹಾಪುರ ಮತ್ತು ಹನುಮಂತ ನಿರಾಣಿ ಅವರ ಪರವಾಗಿ ಮತ ಯಾಚಿಸಿದರು.

34 ವರ್ಷಗಳ ಬಳಿಕ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರಿಂದಾಗಿ, ಇನ್ನು 24 ವರ್ಷಗಳಲ್ಲಿ ಭಾರತವು ಜಾಗತಿಕವಾಗಿ ನಾಯಕನಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದೆ. ವೇತನ ಹೆಚ್ಚಳ, ವರ್ಗಾವಣೆ ಮತ್ತು ಬಡ್ತಿ ನೀಡುವಿಕೆಗಳಲ್ಲಿ ಪಾರದರ್ಶಕತೆ ತರಲಾಗಿದೆ. ಜತೆಗೆ, ಸಮಗ್ರ ವಿವಿ ನಿರ್ವಹಣೆ ಕಾಯ್ದೆ ತರಲಾಗಿದೆ ಎಂದು ಅವರು ವಿವರಿಸಿದರು.

ಹಿಂದೆ ಕೂಡ ಯಡಿಯೂರಪ್ಪನವರ ಅವಧಿಯಲ್ಲಿ ಸಾವಿರಾರು ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಲಾಯಿತು. ಜತೆಗೆ, ದೈಹಿಕ ಶಿಕ್ಷಕರಿಗೆ ಉಪನ್ಯಾಸಕರಾಗಿ ಪದೋನ್ನತಿ ನೀಡಿ, ಜೆಒಸಿ ನೌಕರರನ್ನೆಲ್ಲ ಸರ್ಕಾರಿ ಉದ್ಯೋಗಿಗಳು ಎಂದು ಪರಿಗಣಿಸಲಾಯಿತು ಎಂದು ಅವರು ಹೇಳಿದರು.

ಬಿಜೆಪಿ ಆಡಳಿತಾವಧಿಯಲ್ಲಿ ವೇತನ ಆಯೋಗಗಳನ್ನು ರಚಿಸಲಾಗಿದೆ. ಕುಮಾರ ನಾಯಕ್ ವರದಿಯ ಶಿಫಾರಸಿನ ಮೇರೆಗೆ ಒಂದು ವೇತನ ಬಡ್ತಿಯನ್ನೂ ಶಿಕ್ಷಕರಿಗೆ ಕೊಟ್ಟ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ ಎಂದು ಸಚಿವರು ತಿಳಿಸಿದರು.

ಕಗ್ಗಂಟಾಗಿ‌ ಪರಿಣಮಿಸಿದ್ದ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಈಗಿನ ಬಿಜೆಪಿ ಸರ್ಕಾರವು ಬಗೆಹರಿಸಿದೆ. ಅಲ್ಲದೇ, ವೇತನವನ್ನು ದುಪ್ಪಟ್ಟುಗೊಳಿಸಲಾಗಿದೆ. ಇದರಿಂದ 11,500 ಮಂದಿಗೆ ಅನುಕೂಲವಾಗಿದೆ. ಹಿಂದಿನ ಯಾವ ಸರ್ಕಾರಗಳೂ ಇಂತಹ ಕಳಕಳಿಯನ್ನು ತೋರಿರಲಿಲ್ಲ ಎಂದು ಅವರು ಹೇಳಿದರು.

ಎನ್ಇಪಿ ಜಾರಿಯಲ್ಲಿ ರಾಜ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ಸಾಧ್ಯವಾಗಬೇಕು ಎನ್ನುವುದು ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದರು.

***

ಪದವೀಧರ, ಶಿಕ್ಷಕರ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆವಿಧಾನ ಪರಿಷತ್ತಿನಲ್ಲಿ ಪಕ್ಷಕ್ಕೆ ಬಹುಮತ ಲಭಿಸಲಿದ್ದು, ಜನಪರ ಆಡಳಿತ ನೀಡಲು ಅನುಕೂಲವಾಗಲಿದೆ

–ಡಾ.ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT