ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಕಡ್ಡಾಯಗೊಳಿಸಿ: ಸಾಹಿತಿ ಎಚ್‌.ಟಿ.ಪೋತೆ

10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ
Published 29 ಜುಲೈ 2023, 22:43 IST
Last Updated 29 ಜುಲೈ 2023, 22:43 IST
ಅಕ್ಷರ ಗಾತ್ರ

ವಿಜಯಪುರ: ‘ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಕಡ್ಡಾಯಗೊಳಿಸಬೇಕು. ಶೋಷಿತ ವರ್ಗದ ಸಾಹಿತ್ಯ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಚಿಂತನೆ ಮನವರಿಕೆ ಮಾಡಿಕೊಡಬೇಕು. ಇದರಿಂದ ಅವರಲ್ಲಿ ಮಾನವೀಯ ಸಂಬಂಧಗಳು ಬೆಸೆಯಲು ಸಾಧ್ಯ’ ಎಂದು ಸಾಹಿತಿ ಎಚ್‌.ಟಿ.ಪೋತೆ ಪ್ರತಿಪಾದಿಸಿದ್ದಾರೆ.

ದಲಿತ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಆರಂಭಗೊಂಡ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ದಲಿತ ಸಾಹಿತ್ಯ, ಸಂಸ್ಕೃತಿಗೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.

‘ನವ ಬೌದ್ಧರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವುದರ ಜೊತೆಗೆ ಡಾ. ಬಿ.ಅರ್‌.ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ತರಬೇಕು’ ಎಂದು ಸಾಹಿತಿ ಪ್ರೊ. ಎಚ್.ಟಿ.ಪೋತೆ ಒತ್ತಾಯಿಸಿದರು.

‘ದಲಿತ ಚಳವಳಿಯ ಹೋರಾಟಗಾರರು ಹಾಗೂ ಚಿಂತಕರ ಜೀವನಚರಿತ್ರೆ ಪ್ರಕಟಣೆಗೆ ಅನುದಾನ ನೀಡಬೇಕು. ಸಫಾಯಿ ಕರ್ಮಚಾರಿ ಕೆಲಸಕ್ಕೆ ಮನುಷ್ಯರ ಬದಲು ಯಂತ್ರೋಪಕರಣ ಬಳಸಬೇಕು.‌ ಸಫಾಯಿ ಕರ್ಮಚಾರಿಗಳಿಗೆ ಪರ್ಯಾಯ ಉದ್ಯೋಗ ಕಲ್ಪಿಸಬೇಕು’ ಎಂದರು.

ವಿಜಯಪುರದಲ್ಲಿ ಶನಿವಾರ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಡೆದ ಮೆರವಣಿಗೆಯ ಸಾರೋಟಿನಿಂದ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಎಚ್‌.ಟಿ.ಪೋತೆ ಮತ್ತು ಅವರ ಪತ್ನಿ ಜನರತ್ತ ಕೈಬೀಸಿದರು
–ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಶನಿವಾರ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಡೆದ ಮೆರವಣಿಗೆಯ ಸಾರೋಟಿನಿಂದ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಎಚ್‌.ಟಿ.ಪೋತೆ ಮತ್ತು ಅವರ ಪತ್ನಿ ಜನರತ್ತ ಕೈಬೀಸಿದರು –ಪ್ರಜಾವಾಣಿ ಚಿತ್ರ

‘ಸಂವಿಧಾನ ಸುಡುವುದು, ಮಹಾತ್ಮ ಗಾಂಧಿಯ ಅಣಕು ಹತ್ಯೆ ಮಾಡುವಂತಹ ಶಕ್ತಿಗಳಿಗೆ ಬುದ್ಧಿ ಕಲಿಸಬೇಕು. ದಲಿತ, ಶೋಷಿತ, ಮಹಿಳಾ ಸಮುದಾಯದಲ್ಲಿ ಶಕ್ತಿ ತುಂಬಲು ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಹೆಚ್ಚು ಪ್ರಚಾರ ಮಾಡುವ ಕಾರ್ಯವು ಸರ್ಕಾರ ಮತ್ತು ಜನರಿಂದ ಆಗಬೇಕು’ ಹೇಳಿದರು.

‘ದೇವಾಲಯಗಳು ಅಸಮಾನತೆಯ ಕೇಂದ್ರಗಳಾಗಿ ನೆಲೆ ನಿಂತಿದ್ದು ಸಾಮಾಜಿಕ ವಿಘಟನೆಗೆ, ಸಂಘರ್ಷಕ್ಕೆ ಕಾರಣ ಆಗುತ್ತಿದೆ. ಇಂಥದ್ದನ್ನು ಸರ್ಕಾರ ಪೋಷಿಸಬಾರದು. ಮುಕ್ತ ಪ್ರವೇಶದ ಜೊತೆಗೆ ಮೀಸಲಾತಿ ನಿಯಮ ದೇವಾಲಯದಲ್ಲೂ ಜಾರಿಗೊಳಿಸಬೇಕು’ ಎಂದರು.

‘ಭಾರತ ಪ್ರಕಾಶಿಸುತ್ತಿದೆ’, ‘ಸಬಕಾ ಸಾಥ್ ಸಬಕಾ ವಿಕಾಸ್’ ಎಂಬ ಘೋಷ ವಾಕ್ಯಗಳು ವಿಜೃಂಭಿಸುತ್ತಿವೆ. ಆದರೆ, ಬಡತನ ಎಲ್ಲ ಸಮುದಾಯಗಳಲ್ಲೂ ಯಥಾಸ್ಥಿತಿಯಿದೆ. ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯ ಬೆತ್ತಲೆ ಮೆರವಣಿಗೆ ನಡೆದರೂ ಇದರ ವಿರುದ್ಧ ದೇಶದ ಪ್ರಜ್ಞಾವಂತ ಮಹಿಳೆಯರು, ಚಿಂತಕಿಯರು, ಸಾಹಿತಿಗಳು ಧ್ವನಿ ಎತ್ತದಿರುವುದು ನಾಚಿಕೆಗೇಡು’ ಎಂದು ಕಳವಳ ವ್ಯಕ್ತಪಡಿಸಿದರು.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ‘ದಲಿತ ಸಾಹಿತ್ಯ ಎಂಬುದು ಜೀವನಾನುಭವ ಒಳಗೊಂಡ ಅರ್ಥಪೂರ್ಣ ನೈಜ ಸಾಹಿತ್ಯ’ ಎಂದರು.

ಇದಕ್ಕೂ ಮುನ್ನ ಪ್ರೊ.ಎಚ್‌.ಟಿ.ಪೋತೆ ದಂಪತಿಯನ್ನು ಸಾರೋಟಿನಲ್ಲಿ ಕೂರಿಸಿ, ಜಾನಪದ ಕಲಾತಂಡಗಳ ಜೊತೆ ಮೆರವಣಿಗೆ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸಾಹಿತ್ಯಾಸಕ್ತರು ಮೆರವಣಿಯಲ್ಲಿ ಪಾಲ್ಗೊಂಡರು.

ವಿಜಯಪುರದಲ್ಲಿ ಶನಿವಾರ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಭಿಮಾನಿಗಳು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು 
–ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಶನಿವಾರ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಭಿಮಾನಿಗಳು ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು  –ಪ್ರಜಾವಾಣಿ ಚಿತ್ರ
ರಾಜ್ಯದ ಸಮಗ್ರ ದಲಿತ ಸಾಹಿತ್ಯವನ್ನು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹಾ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ಪ್ರಕಟಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು.
ಎಂ.ಬಿ.ಪಾಟೀಲ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ
ರಾಜ್ಯದಲ್ಲಿ ಮೇಲ್ವರ್ಗದ‌ ಸಾಹಿತಿ ಚಿಂತಕರ ಹೆಸರಲ್ಲಿ ಪ್ರತಿಷ್ಠಾನಗಳು ಇವೆ. ಆದರೆ ದಲಿತ ಸಾಹಿತಿಗಳು ಚಿಂತಕರ ಹೆಸರಲ್ಲಿ ಒಂದು ಪ್ರತಿಷ್ಠಾನವೂ ಇಲ್ಲ. ಸರ್ಕಾರವೇ ಸ್ಥಾಪಿಸಬೇಕು.
ಪ್ರೊ. ಎಚ್.ಟಿ.ಪೋತೆ ಸರ್ವಾಧ್ಯಕ್ಷ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ
ವಿಜಯಪುರದಲ್ಲಿ ಶನಿವಾರ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು. ಮಾಜಿ ಶಾಸಕ ಪ್ರೊ.ರಾಜು ಆಲಗೂರ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಡಿ.ಜಿ.ಸಾಗರ್‌ ಪ್ರೊ.ಎಚ್‌.ಟಿ.ಪೋತೆ  ವಿಜಯಪುರ ಬುದ್ಧ ವಿಹಾರದ ಸಂಘಪಾಲ ಭಂತೇಜಿ ಕವಿ ಅಲ್ಲಾಗಿರಿರಾಜ ಇದ್ದಾರೆ –ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಶನಿವಾರ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು. ಮಾಜಿ ಶಾಸಕ ಪ್ರೊ.ರಾಜು ಆಲಗೂರ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಸಂಚಾಲಕ ಡಿ.ಜಿ.ಸಾಗರ್‌ ಪ್ರೊ.ಎಚ್‌.ಟಿ.ಪೋತೆ  ವಿಜಯಪುರ ಬುದ್ಧ ವಿಹಾರದ ಸಂಘಪಾಲ ಭಂತೇಜಿ ಕವಿ ಅಲ್ಲಾಗಿರಿರಾಜ ಇದ್ದಾರೆ –ಪ್ರಜಾವಾಣಿ ಚಿತ್ರ

‘ದೇವರ ಚಿತ್ರಗಳನ್ನು ಕಿತ್ತೆಸೆಯಿರಿ’

‘ಅಡುಗೆ ಮನೆಯಲ್ಲಿ ಒಂದೇ ಸೌಟನ್ನು ಸಸ್ಯಾಹಾರಕ್ಕೆ ಮಾಂಸಾಹಾರಕ್ಕೆ ಬಳಸಬಾರದು’ ಎಂಬ ಲೇಖಕಿ ಸುಧಾ‌ಮೂರ್ತಿ ಅವರ ಹೇಳಿಕೆಗೆ ಪ್ರೊ. ಎಚ್.ಟಿ.ಪೋತೆ ಆಕ್ಷೇಪ ವ್ಯಕ್ತಪಡಿಸಿದರು. ‘ನಿಮ್ಮ (ಸುಧಾಮೂರ್ತಿ) ಮನೆಯಲ್ಲಿ ಪೂಜಿಸುವ ದೇವಾನುದೇವತೆಗಳು ಯಾವ ಪ್ರಾಣಿಗಳ ಮೇಲೆ ಕೂತಿವೆ. ಅವು ಮಾಂಸಾಹಾರಿ ಪ್ರಾಣಿಗಳಲ್ಲವೇ? ಅಂತಹ ದೇವರ ಚಿತ್ರಗಳನ್ನು ಮನೆಯಲ್ಲಿ ಏಕೆ ಇಟ್ಟಿದ್ದೀರಿ ಕಿತ್ತೆಸೆಯಿರಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT