ಸೋಮವಾರ, ಏಪ್ರಿಲ್ 12, 2021
23 °C
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಮತ

ಎಪಿಎಂಸಿ ತಿದ್ದುಪಡಿ ಕಾಯ್ದೆ; ರೈತರಿಗೆ ತೊಂದರೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲೆ ಮಾರಬೇಕು ಎಂಬ ನಿಯಮವಿಲ್ಲ ಅವರಿಗೆ ಎಲ್ಲಿ ಅನುಕೂಲ ಹಾಗೂ ಲಾಭವಾಗುತ್ತದೋ ಅಲ್ಲಿ ವ್ಯವಹರಿಸಬಹುದಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಪಿಎಂಸಿ ಕಾಯ್ದೆಯಿಂದ ಖಾಸಗಿಯವರಿಗೆ ಅನುಕೂಲವಾಗಲಿದೆ, ಎಪಿಎಂಸಿಗಳು ಮುಚ್ಚಿಹೋಗುತ್ತವೆ. ಇದರಿಂದ ರೈತರು ಬೆಳೆದಂತ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರೆಯುವುದಿಲ್ಲ ಎಂದು ಕೆಲವರು ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ದಾರಿ ತಪ್ಪಿಸಿ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಎಪಿಎಂಸಿ ಕಾಯ್ದೆಯಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ವಾತಾವರಣ ನಿರ್ಮಾಣ ಮಾಡಲಾಗಿದೆ. ರೈತರು ತಮ್ಮ ಉತ್ಪನ್ನವನ್ನು ಮಾರುಕಟ್ಟೆ, ಹೊಲ, ಎಪಿಎಂಸಿ ಸೇರಿದಂತೆ ಎಲ್ಲಿ ಬೇಕಾದರೂ ಮಾರಬಹುದು. ರೈತರಿಗೆ ಯಾವುದೇ ನಿರ್ಬಂಧಗಳು ಇರುವುದಿಲ್ಲ ಎಂದು ಹೇಳಿದರು.

ರೈತರ ಆದಾಯವನ್ನು ದ್ವಿಗುಣ ಮಾಡಲು ಮೋದಿ ಸರ್ಕಾರ ಪಣ ತೊಟ್ಟಿದ್ದು, ಪ್ರಸಕ್ತ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ ₹ 1.63 ಸಾವಿರ ಕೋಟಿ ಹಾಗೂ ರಾಜ್ಯ ಬಜೆಟ್‍ನಲ್ಲಿ ₹ 32 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ರೈತರಿಗೆ ವಿವಿಧ ಯೋಜನೆಗಳ ಮೂಲಕ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

ಡಾ. ನವೀನ್‍ಕುಮಾರ ಮಾತನಾಡಿ,  ದೇಶದಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚಾಗಿದ್ದಾರೆ. ಆದರೆ ನಾವು ಇಷ್ಟು ದಿನ ರೈತರನ್ನು ಮಾರುಕಟ್ಟೆಗೆ ಪರಿಗಣಿಸಲಿಲ್ಲ. ನಾವು ವೇಗವಾಗಿ ಯಾಂತ್ರಿಕರಣ ಮಾಡಿ, ಕೃಷಿಯನ್ನು ಮಾರುಕಟ್ಟೆ ವ್ಯವಸ್ಥೆ ಅಡಿಯಲ್ಲಿ ಬಳಸಬೇಕಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗಬೇಕಾದರೆ ನಾವು ರೈತರನ್ನು ಜಾಗೃತಗೊಳಿಸಬೇಕಾಗಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೆಂದ್ರ ಮೋದಿಯವರು ಎಫ್‍ಪಿಓಗಳನ್ನು ಸ್ಥಾಪಿಸುವುದರ ಮೂಲಕ ರೈತರ ಆದಾಯವನ್ನು ದ್ವಿಗುಣ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದರು.

ರೈತ ಮೋರ್ಚಾದ ಪ್ರತಿಯೊಬ್ಬ ಕಾರ್ಯಕರ್ತರು ಎಫ್‍ಪಿಓಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಹಾಗೂ ದೇಶದಲ್ಲಿ ಇರುವ 5 ಸಾವಿರ ರೈತ ಉತ್ಪಾದಕ ಕೇಂದ್ರಗಳನ್ನು 10 ಸಾವಿರಕ್ಕೆ ಹೆಚ್ಚಿಸಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ 27 ಎಫ್‍ಪಿಓಗಳು ಕಾರ್ಯ ನಿರ್ವಹಿಸಿದರೆ, ಸಿಂದಗಿ ತಾಲ್ಲೂಕು ಒಂದರಲ್ಲೇ 8 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರೈತ ಮೋರ್ಚಾ ಕಾರ್ಯಕರ್ತರು ರೈತರಿಗೆ ಸರ್ಕಾರದ ಕೃಷಿ, ಹಾಗೂ ಎಪಿಎಂಸಿ ಕಾಯ್ದೆಗಳ ಬಗ್ಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಸಚಿವ ಅಪ್ಪಸಾಹೇಬ ಪಟ್ಟಣಶೆಟ್ಟಿ ಹಾಗೂ ಎಸ್.ಕೆ.ಬೆಳ್ಳುಬ್ಬಿ, ಕರ್ನಾಟಕ  ಬೀಜ ಮತ್ತು ಸಾವಯುವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಗುರುಲಿಂಗಪ್ಪಗೌಡ, ಆರ್.ಟಿ.ಪಾಟೀಲ್, ಕಾಸುಗೌಡ ಬಿರಾದಾರ, ಅಶೋಕ ಅಲ್ಲಾಪೂರ, ಸಂಗಮೇಶ ಬಬಲೇಶ್ವರ, ರವಿಕಾಂತ ಬಗಲಿ, ಮಲ್ಲಿಕಾರ್ಜನ ಜೋಗುರ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ವಿವೇಕಾನಂದ ಡಬ್ಬಿ, ಚಂದ್ರಶೇಖರ ಕೌಟಗಿ, ವಿಜಯ ಜೋಶಿ ಉಪಸ್ಥಿತರಿದ್ದರು.

****

ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ರೈತರಿಗೆ ಸರಿಯಾದ ಮಾಹಿತಿ ನೀಡಿ, ಎಪಿಎಂಸಿ ತಿದ್ದುಪ‍ಡಿ ಕಾಯ್ದೆ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು 

ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.