ಭಾನುವಾರ, ಏಪ್ರಿಲ್ 2, 2023
24 °C
ಕೊರೊನಾದಿಂದ ಸಮಯಕ್ಕೆ ಸರಿಯಾಗಿ ಸಿಗದ ಮಾಸಾಶನ; ಕಲೆ ಪ್ರದರ್ಶನಕ್ಕೂ ಸಿಗದ ಅವಕಾಶ

ವಿಜಯಪುರ: ಲಯ ತಪ್ಪಿದ ಜಾನಪದ ಕಲಾವಿದರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾದಿಂದ ಸಮಾಜದ ವಿವಿಧ ಕ್ಷೇತ್ರದ ಜನರು ಸಂಕಷ್ಟ ಎದುರಿಸಿದ ಹಾಗೆಯೇ ಜಾನಪದ ಕಲಾವಿದರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ರಂಗಭೂಮಿ ಕಲಾವಿದರು, ಗೋಂಧಲಿಗರ ಪದ ಹಾಡುವವರು, ಬುಡುಬುಡುಕೆ ಹಾಡುಗಾರರು, ಬಯಲಾಟ, ದೊಡ್ಡಾಟ, ಸಣ್ಣಾಟ, ಲಾವಣಿ, ಗೀಗಿಪದ, ಸೋಬಾನೆ ಪದ, ರಿವಾಯತ್‌, ಕರಡಿ ಮೇಳ, ಸಂಗ್ಯಾ ಬಾಳ್ಯಾ, ಶಹನಾಯಿ, ರಾಧಾನಾಟ, ಶ್ರೀಕೃಷ್ಣ ಪಾರಿಜಾತ, ದೇಸಿ, ಚೌಡಿಕೆ ಪದ, ಭಜನಾ ಪದ, ದತ್ತಿ ಕುಣಿತ, ಮಂಗಳವಾದ್ಯ, ಡೊಳ್ಳು ಕುಣಿತ, ಸಾಂಬಾಳ, ತೊಗಲು ಗೊಂಬೆ, ಚಿಟ್ಟಹಲಗೆ, ಹಂತಿಪದಗಳು, ಹರದೇಶಿ ನಾಗೇಶಿ ಗೀಗೀ ಪದಗಳು ಹೀಗೆ ನೂರಾರು ಜಾನಪದೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲಾವಿದರು ಮತ್ತು ಆರ್ಕೆಸ್ಟ್ರಾ, ಸುಗಮ ಸಂಗೀತ, ಬ್ರಾಸ್ ಬ್ಯಾಂಡ್, ಗಾಯಕರು, ಬೀದಿನಾಟಕ, ರಂಗಕಲೆಗಳನ್ನು ನಂಬಿದ್ದವರ ಬದುಕು ಲಾಕ್‌ಡೌನ್‌ನಿಂದ ‘ಲಯ’ ತಪ್ಪಿದೆ. ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕಿದೆಯಾದರೂ, ಜನಜೀವನ ಸಂಪೂರ್ಣ ಸಹಜ ಸ್ಥಿತಿಗೆ ಬಾರದೆ ಬಹುತೇಕರಿಗೆ ಕೆಲಸ ಇಲ್ಲವಾಗಿದೆ.

ಜಾತ್ರೆ, ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಕಲೆಯ ಪ್ರದರ್ಶನದಿಂದ ಸಿಗುತ್ತಿದ್ದ ಗೌರವಧನದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ, ಉತ್ಸವ, ಪುರಾಣ, ಪ್ರವಚನಗಳಂತಹ ಕಾರ್ಯಕ್ರಮಗಳು ಇಲ್ಲದೇ ಇರುವುದರಿಂದ ಕಲಾವಿದರು ಕೆಲಸವಿಲ್ಲದೇ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ.

ಪ್ರತಿ ವರ್ಷ ಬಿಡುವಿಲ್ಲದಂತೆ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ವರ್ಷಕ್ಕೆ ಲಕ್ಷದಷ್ಟು ಆದಾಯ ತರುತ್ತಿದ್ದೇವು. ಅದರಿಂದ ನಮ್ಮ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷದಿಂದ ಕೋವಿಡ್‌ದಿಂದಾಗಿ ನಿರ್ದಿಷ್ಟ ಕಾರ್ಯಕ್ರಮಗಳು ಇಲ್ಲದೇ ಇರುವುದರಿಂದ ಕೆಲಸವಿಲ್ಲದೇ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಬಸವನ ಬಾಗೇವಾಡಿ ತಾಲ್ಲೂಕಿನ ಇವಣಗಿ ಗ್ರಾಮದ ಹಾರ್ಮೊನಿಯಂ ಹಾಗೂ ತಬಲಾ ವಾದಕ ಕಾಳಪ್ಪ ಮಾಸ್ತರ ಬಡಿಗೇರ.

ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಸಹೋದರ ಇಬ್ಬರು ಕಲೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದೇವೆ. ಒಂದಿಲ್ಲ ಒಂದು ಕಾರ್ಯಕ್ರಮದ ಮೂಲಕ ಕುಟುಂಬ ನಿರ್ವಹಣೆ ಮಾಡಿ ಒಂದಷ್ಟು ಹಣ ಉಳಿಯುತ್ತದೆ ಎಂಬ ಆಶಾಭಾವನೆಯಿಂದ ಸಾಲ ಮಾಡಿ ಮನೆ ಕಟ್ಟಿಸಿದ್ದೇನೆ. ಕೋವಿಡ್‌ನಿಂದಾಗಿ ಈಗ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಕಲಾವಿದರ ಸಂಕಷ್ಟವನ್ನು ಅರಿತುಕೊಂಡು ಅವರನ್ನು ಪ್ರೋತ್ಸಾಯಿಸುವ ಕಾರ್ಯ ಮಾಡಬೇಕು. ಕಲಾವಿದರ ಮಾಸಾಶನ ಪಡೆಯಲು ವಯಸ್ಸಿನ ಮಿತಿ ಇರುವುದರಿಂದ ನಮ್ಮಂತಹ ಕಲಾವಿದರು ಮಾಸಾಶನದಿಂದ ವಂಚಿತರಾಗಿದ್ದೇವೆ ಎನ್ನುತ್ತಾರೆ ಬಸವನ ಬಾಗೇವಾಡಿ ತಾಲ್ಲೂಕಿನ ನರಸಲಗಿ ಗ್ರಾಮದ ಗವಾಯಿಗಳಾದ ಚನಬಸು ಹೂಗಾರ.

ಕೋವಿಡ್‌ಗೂ ಮುಂಚೆ ಹೊರರಾಜ್ಯಕ್ಕೂ ಪ್ರದರ್ಶನಕ್ಕಾಗಿ ಇಲಾಖೆಯೇ ನಮ್ಮನ್ನು ಕಳಿಸಿದ್ದಾರೆ. ಈಗ ನಮ್ಮಲ್ಲಿಯೇ ಯಾವುದೇ ಕಾರ್ಯಕ್ರಮ ಇಲ್ಲ ಎಂದು ಅಳಲು ತೋಡಿಕೊಂಡವರು ನಿಡಗುಂದಿ ತಾಲ್ಲೂಕಿನ ಮುದ್ದಾಪುರ ಗ್ರಾಮದ ಏಕತಾರಿ ಪದಗಳ ಕಲಾವಿದ ವೀರಭದ್ರಪ್ಪ ದಳವಾಯಿ ಹಾಗೂ ರಂಗನಾಥ.

ಪ್ರತಿ ವರ್ಷ ಇಲಾಖೆಯ ವತಿಯಿಂದ ಎರಡು ಮೂರು ಕಾರ್ಯಕ್ರಮವಾದರೂ ನಮಗೆ ಸಿಗುತ್ತಿದ್ದವು, ಈಗ ಒಂದು ಇಲ್ಲ ಎನ್ನುತ್ತಾರೆ ಇಟಗಿ ಗ್ರಾಮದ ಡೊಳ್ಳಿನ ಕುಣಿತ ಹಾಗೂ ಹೆಜ್ಜೆ ಮೇಳದ ಕಲಾವಿದ ಭೂಸಣ್ಣ ಮಾಗಿ.

ಜನಪದ ಉತ್ಸವ, ಸಾಂಸ್ಕೃತಿಕ ಸಂಭ್ರಮ, ಜಾನಪದ ಜಾತ್ರೆ, ಸುಗ್ಗಿ ಹುಗ್ಗಿ, ಯುವ ಸೌರಭ, ಚಿಗುರು, ಗಿರಿಜನ ಉತ್ಸವ, ಜನಪರ ಉತ್ಸವ ಎಂಬ ನಾನಾ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ವರ್ಷವೀಡಿ ಏರ್ಪಾಡು ಮಾಡುವುದು ಪ್ರತಿ ವರ್ಷದ ಕೆಲಸ. ಅಲ್ಲೆಲ್ಲ ಆಯಾ ವರ್ಗವಾರು, ವಿವಿಧ ಕಲಾ ಪ್ರಕಾರಗಳು, ಸಮಾಜದ ವಿವಿಧ ವರ್ಗವಾರು, ಕಲಾವಿದರ ಆಧಾರದ ಮೇಲೆ ಕಾರ್ಯಕ್ರಮ ನಡೆಯುತ್ತಿದ್ದವು. ಒಂದೊಂದು ಕಾರ್ಯಕ್ರಮಕ್ಕೂ ಒಂದೊಂದು ತಂಡಕ್ಕೆ ₹25 ಸಾವಿರ ವರೆಗೂ ಸಂಭಾವನೆ ನೀಡುತ್ತಿದ್ದರು ಎಂದು ಅವರು ಹೇಳಿದರು.

ಕೊರೊನಾದಿಂದ ನಮ್ಮ ದುಡಿಮೆಗೆ ಹೊಡೆತ ಬಿದ್ದದರಿ, ಜೀವನ ನಡೆಸೋದು ಕಷ್ಟ ಆಗ್ಯದರೀ ಕೂಲಿನಾಲಿ ಮಾಡಿ ಬದುಕೂದ ನಡದದರಿ ಎನ್ನುತ್ತಾರೆ ತಾಳಿಕೋಟೆ ತಾಲ್ಲೂಕಿನ ಅಡವಿ ಹುಲಗಬಾಳದ ಭಜನಾ ಕಲಾವಿದ ಬಸಣ್ಣ ಕಿಲ್ಲೆದ.

***

ಕುರಿ ಕಾಯುವ ಜಾನಪದ ಕಲಾವಿದೆ!
ಸಿಂದಗಿ:
ಈ ಭಾಗದಲ್ಲಿ ಭಜನಾ ಪದ, ಗೀಗೀ ಪದ, ತತ್ವಪದಗ ಹಾಡುವದರಲ್ಲಿ ಮೊದಲಿಗೆ ಕೇಳಿ ಬರುವ ಹೆಸರೇ ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದ ಇಮಾಂಬಿ ದೊಡಮನಿಯವರದು.

25 ವರ್ಷಗಳಿಂದ ಜಾನಪದ ಹಾಡುಗಾರಿಕೆ ಮುಂದುವರೆಸಿಕೊಂಡು ಬಂದಿದ್ದಾರೆ. ಹೊಲ ಇಲ್ಲ ಯಾವುದೇ ಆರ್ಥಿಕ ಸಬಲತೆ ಇವರಿಗಿಲ್ಲ. ಇಷ್ಟು ವರ್ಷಗಳಾದರೂ ಸರ್ಕಾರದಿಂದ ಇವರಿಗೆ ಮಾಸಶಾನ ಮರಿಚಿಕೆಯಾಗಿಯೇ ಉಳಿದಿದೆ. ಬದುಕು ನಿರ್ವಹಣೆಗಾಗಿ ಕುರಿ ಕಾಯುವಂಥ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎನ್ನುತ್ತಾರೆ ಬೋರಗಿ ಗ್ರಾಮದ ಮಲ್ಲಿಕಾರ್ಜುನ ಸಾವಳಸಂಗ.

ಇಮಾಂಬಿ ಅವರು ಅತ್ಯುತ್ತಮ ಜಾನಪದ ಗಾಯಕಿ ನಮ್ಮ ‘ನೆಲೆ’ ಪ್ರಕಾಶದ ವತಿಯಿಂದ ಹಲವಾರು ಸಲ ವೇದಿಕೆಯಲ್ಲಿ ಹಾಡುಗಾರಿಕೆ ಪ್ರದರ್ಶಿಸಿ ಬೇಷ್ ಎನಿಸಿಕೊಂಡಿದ್ದಾರೆ ಎಂದು ಪ್ರಕಾಶನದ ಮುಖ್ಯಸ್ಥ, ಸಾಹಿತಿ ಡಾ.ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಕಾರಣದಿಂದಾಗಿ ಸಭೆ ಸಮಾರಂಭಗಳು ಸ್ಥಗಿತಗೊಂಡು ನನ್ನ ಭಜನಾ ಪದ, ತತ್ವಪದಗಳು ಹಾಡುವುದು ಸಂಪೂರ್ಣ ನಿಂತು ಉಪಜೀವನಕ್ಕೆ ತುಂಬಾ ತೊಂದರೆಯಾಗಿದೆ ಎಂದು ಇಮಾಂಬಿ ದೊಡಮನಿ ಅಳಲು ತೋಡಿಕೊಂಡರು.

****

ಜಾಲತಾಣದಲ್ಲಿ ಜಾನಪದ
ಕೋವಿಡ್ ಸಂದರ್ಭದಲ್ಲಿ ‘ಜಾಲತಾಣದಲ್ಲಿ ಜಾನಪದ’ ಸರಣಿಯಾಗಿ 101 ಉಪನ್ಯಾಸ ಕಾರ್ಯಕ್ರಮ ಆಯೋಜಿಸುವ ಮೂಲಕ ಜಾನಪದ ಕಲಾವಿದರು, ವಿದ್ವಾಂಸರು ಹಾಗೂ ತಜ್ಞರಿಗೆ ವೇದಿಕೆ ಕಲ್ಪಿಸಿದವರು ಕನ್ನಡ ಜಾನಪದ ಪರಿಷತ್‌ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಬಾಳನಗೌಡ ಎಸ್‌.ಪಾಟೀಲ. 

ಕನ್ನಡ ಸಾಹಿತ್ಯ ಪರಿಷತ್‌ ಸೇರಿದಂತೆ ಸರ್ಕಾರದ ಯಾವುದೇ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಗಳು ಮಾಡದ ಕಾರ್ಯವನ್ನು ಬಾಳನಗೌಡ ಪಾಟೀಲ ಮಾಡುವ ಮೂಲಕ ಕೋವಿಡ್‌ ಕಾಳಘಟ್ಟದಲ್ಲಿ ಜಾನಪದ ಸಾಹಿತ್ಯ ಉಳಿಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. 

ಜಾಲತಾಣದಲ್ಲಿ ಜಾನಪದ 101ನೇ ದಿನದಂದು ‘ರಾಷ್ಟ್ರಮಟ್ಟದ ಪ್ರಥಮ ಜಾಲತಾಣದಲ್ಲಿ ಜಾನಪದ ಸಮ್ಮೇಳನ’ ಏರ್ಪಡಿಸಿ ರಾಜ್ಯದ ಗಮನ ಸೆಳೆದಿದ್ದಾರೆ.

****

ಹೊಸದಾಗಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದ ವಯೋವೃದ್ಧ ಕಲಾವಿದರಿಗೆ 2017ರಿಂದ ಮಂಜೂರಾಗಿಲ್ಲ.ಐದು ವರ್ಷದಿಂದ ಮಾಸಾಶನಕ್ಕೆ ಚಾತಕ ಪಕ್ಷಿಗಳಿಂತೆ ಕಾಯುತ್ತಿದ್ದಾರೆ. ಸರ್ಕಾರ ಆದ್ಯತೆ ನೀಡಬೇಕು
–ಬಾಳನಗೌಡ ಎಸ್‌.ಪಾಟೀಲ
ಅಧ್ಯಕ್ಷ, ಕನ್ನಡ ಜಾನಪದ ಪರಿಷತ್‌ ವಿಜಯಪುರ

****

ಭಜನಿ ನಮ್ಮ ಜೀವಾಳ್ರೀ, ನಮಗ ಹಾಡಾಕ ಕರೆಯೋರು ಇಲ್ಲಂದ್ರ ನಮ್ಮ ಹೊಟ್ಟಿಗ ಬರೆ ಎಳೆದಂಗರಿ, ಕಲಾವಿದರನ್ನ ಗುರುತಿಸೋರಿಲ್ಲ, ಸರ್ಕಾರ ಅನುಕೂಲ ಮಾಡಿಕೊಡಬೇಕು
–ದೇವೇಂದ್ರ ಕೊಪ್ಪದ, ಭಜನಾ ಕಲಾವಿದ
ಹಿರೂರನ, ತಾಳಿಕೋಟೆ 

****

ಪ್ರತಿ ವರ್ಷ ನಮ್ಮ ಸ್ವಂತ ಖರ್ಚಿನಿಂದಲೇ ಕಲಾ ಪ್ರದರ್ಶನ ನೀಡುತ್ತಿದ್ದೆವು. ಪ್ರೇಕ್ಷಕರಿಂದ ಬರುತ್ತಿದ್ದ ಆದಾಯದಿಂದಲೇ ಜೀವನ ಕಟ್ಟಿಕೊಂಡಿದ್ದೆವು. ಕೊರೊನಾದಿಂದ ನಿರುದ್ಯೋಗಿಗಳಾಗಿದ್ದೇವೆ. ಸರ್ಕಾರ ಆರ್ಥಿಕ ಸಹಾಯ ಒದಗಿಸಬೇಕು
–ಸಿದ್ದಾರಾಯ ಲಾಳಸೇರಿ, ಇಂಡಿ

****

ಎರಡು ವರ್ಷಗಳಿಂದ ನಾಟಕ ಪ್ರದರ್ಶನ ಸರಿಯಾಗಿ ನಡೆದಿಲ್ಲ, ಸಂಘಕ್ಕೆ ಎರಡು ವರ್ಷಗಳಿಂದ  ಬರಬೇಕಿದ್ದ ಸರ್ಕಾರದ ಮಾಸಾಶನ  ಬಿಡುಗಡೆಯಾಗಿಲ್ಲ
–ಪ್ರವೀಣ ಬಾಗಲಕೋಟ, ಮಾಲೀಕ,
ಶ್ರೀಗುರು ಕುಮಾರೇಶ್ವರ ನಾಟಕ ಸಂಘ, ನಾಲತವಾಡ 

***

ಮೊದಲೆಲ್ಲ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಎಂದು ಒತ್ತಾಯ ಮಾಡುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಈಗ ಕಲಾ ಪ್ರದರ್ಶನ ನೀಡಿದರೂ ಸಂಭಾವನೆಗಾಗಿ ಎರಡೂ ತಿಂಗಳ ಕಾಲ ಕಚೇರಿಗೆ ಎಡತಾಗುವ ಸ್ಥಿತಿ ಬಂದಿದೆ
ವೀರಭದ್ರಪ್ಪ ದಳವಾಯಿ, ಏಕತಾರಿ ಕಲಾವಿದ 
ಮುದ್ದಾಪುರ, ನಿಡಗುಂದಿ

****

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಎ.ಸಿ.ಪಾಟೀಲ, ಶಾಂತೂ ಹಿರೇಮಠ, ಚಂದ್ರಶೇಖರ ಕೋಳೇಕರ, ಮಹಾಂತೇಶ ನೂಲಿನವರ, ಪ್ರಕಾಶ ಮಸಬಿನಾಳ, ಶರಣಬಸಪ್ಪ ಗಡೇದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು