ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಸಾಗದ ಕನ್ನೂರು ಪಟ್ಟಣ ಪಂಚಾಯ್ತಿ ಕನಸು

ಶತಮಾನದ ಶಾಲೆಗಿಲ್ಲ ಕಾಯಕಲ್ಪ; ಆಸ್ಪತ್ರೆಗೆ ಸಿಬ್ಬಂದಿ ಕೊರತೆ
Last Updated 28 ಫೆಬ್ರುವರಿ 2023, 19:45 IST
ಅಕ್ಷರ ಗಾತ್ರ

ವಿಜಯಪುರ: ವೈದ್ಯರು, ಸಿಬ್ಬಂದಿಗಳಿಲ್ಲದ ಆರೋಗ್ಯ ಕೇಂದ್ರ, ಶಿಥಿಲಾವಸ್ಥೆಯಲ್ಲಿರುವ ಶತಮಾನ ಕಂಡ ಕುವೆಂಪು ಮಾದರಿ ಶಾಲೆ, ಅಲ್ಲಲ್ಲಿ ಉಕ್ಕಿ ಹರಿಯುವ ಚರಂಡಿ ತ್ಯಾಜ್ಯ, ದುರಸ್ತಿ ಕಾಣದ ರಸ್ತೆಗಳು, ಪಟ್ಟಣ ಪಂಚಾಯಿತಿಯಾಗುವ ಅರ್ಹತೆ ಇದ್ದರು ಆಗದ ದೊಡ್ಡ ಗ್ರಾಮ. ಹೀಗೆಯೇ ಹೇಳುತ್ತಾ ಹೋದಂತೆ ಸಾಲು ಸಾಲು ಸಮಸ್ಯೆಗಳ ಸರಮಾಲೆಯಲ್ಲಿ ಕನ್ನೂರ ಗ್ರಾಮ ಸಿಲುಕಿಕೊಂಡಿದೆ.

ಕನ್ನೂರ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗುತ್ತಿದ್ದು, ಪಟ್ಟಣ ಪಂಚಾಯಿತಿಗೆ ಬೇಕಾಗುವ ಎಲ್ಲ ಅರ್ಹತೆಗಳನ್ನು ಈ ಗ್ರಾಮ ಹೊಂದಿದೆ. ಆದರೂ ಇನ್ನೂ ಪಟ್ಟಣ ಪಂಚಾಯಿತಿ ಎಂದು ಮೇಲ್ದರ್ಜೆಗೆ ಏರಿಸುವಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ.

ವಿಜಯಪುರ ತಾಲ್ಲೂಕಿನ ಕನ್ನೂರ ಗ್ರಾಮದಲ್ಲಿ 2011 ರ ಜನಗಣತಿಯ ಪ್ರಕಾರ ಒಟ್ಟು 30 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಅದರಲ್ಲಿ 18 ಸಾವಿರ ಸಂಖ್ಯೆಯ ಮತದಾರರಿದ್ದಾರೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಪೌರಾಡಳಿತ ಇಲಾಖೆ ಸಚಿವ ಎಂ.ಟಿ.ಬಿ. ನಾಗರಾಜ ಅವರು 15 ಸಾವಿರ ಜನಸಂಖ್ಯೆ ಹೊಂದಿದ ಗ್ರಾಮಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದಿದ್ದರು. ಈ ನಿಟ್ಟಿನಲ್ಲಿ ಗ್ರಾಮಸ್ಥರು ಕೂಡ ಜಿಲ್ಲಾಧಿಕಾರಿಗಳಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರು. ಆದರೂ, ಇನ್ನೂ ಪಟ್ಟಣ ಪಂಚಾಯಿತಿಗಾಗಿ ಪರಿವರ್ತಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ತಂದಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೆರೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ:

ಕನ್ನೂರ ಗ್ರಾಮದ ಶೇ 90 ರಷ್ಟು ಜನರು ಕೃಷಿಯನ್ನೆ ಅವಲಂಬಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿವರೆಗೂ ಗ್ರಾಮಕ್ಕೆ ಒಂದು ಕೆರೆಯಿಲ್ಲದೆ ನೀರಾವರಿಗಾಗಿ ಜನರು ಬೋರ್‌ವೆಲ್‌ಗಳಿಗೆ ಅವಲಂಬಿತರಾಗುವಂತಾಗಿದೆ. ಕನ್ನೂರಿನ ಹತ್ತಿರದ ಮಡಸನಾಳ ಗ್ರಾಮದ ಹತ್ತಿರ ಸರ್ಕಾರಿ ಜಾಗೆಯಲ್ಲಿ ಈಗಾಗಲೇ ಕೆರೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ರೇವಣಸಿದ್ದೇಶ್ವರ ಏತ ನೀರಾವರಿಯಿಂದ ಆ ಕೆರೆಗೆ ನೀರು ಹರಿಸಬೇಕು ನಂತರ ಆ ಕೆರೆಯಿಂದ ಕನ್ನೂರು ಹಳ್ಳಕ್ಕೆ ನೀರು ಸಿಗುವಂತಾಗಬೇಕು ಎನ್ನುತ್ತಾರೆ ಗ್ರಾಮಸ್ಥರು.

ಶತಮಾನದ ಶಾಲೆಗಿಲ್ಲ ಕಾಯಕಲ್ಪ:

ಕುವೆಂಪು ಶತಮಾನ ಮಾದರಿ ಪ್ರಾಥಮಿಕ ಶಾಲೆಗೆ ನೂರು ವರ್ಷ ಕಳೆದರು ಯಾವುದೇ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಾಲೆಯಲ್ಲಿ ಒಟ್ಟು 454 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಒಟ್ಟು 35 ಕೋಣೆಗಳಿವೆ. ಅವುಗಳಲ್ಲಿ 4 ಕೋಣೆಗಳು ಮಾತ್ರ ಕಲಿಕೆಗೆ ಅರ್ಹವಾಗಿದೆ. ಇನ್ನುಳಿದ 31 ಕೋಣೆಗಳು ಮೇಲ್ಛಾವಣಿ ಸಮಸ್ಯೆ, ಶಿಥಿಲಾವಸ್ಥೆಗೆ ತಲುಪಿದೆ. ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. 454 ವಿದ್ಯಾರ್ಥಿಗಳಿಗೆ ಕೇವಲ 10 ಶಿಕ್ಷಕರಿದ್ದು ಇನ್ನು 6 ಶಿಕ್ಷಕರ ಕೊರತೆ ಕಾಡುತ್ತಿದೆ. ಶಾಲೆಯಲ್ಲಿ ಸೂಕ್ತ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ಬಯಲು ಶೌಚಾಲಯವನ್ನು ಅವಲಂಬಿತರಾಗುವ ಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ:

ಕನ್ನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕನ್ನೂರು, ಮಖಣಾಪೂರ, ಶಿರನಾಳ, ಕನ್ನೂರ ತಾಂಡಾ, ಕನ್ನೂರ ದರ್ಗಾ ಹಾಗೂ ಸುತ್ತಲಿನ ದೊಡ್ಡಿ ಗ್ರಾಮಸ್ಥರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ಮುಖ ಮಾಡುವಂತಾಗಿದೆ.

ಗ್ರಾಮದ ರೋಗಿಗಳ ತುರ್ತು ಸೇವೆಗೆ ಸದಾ ಹಾಜರಿರಬೇಕಾಗಿದ್ದ ಆಂಬುಲೆನ್ಸ್‌ ತಿಡಗುಂದಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದು, ಇನ್ನುಳಿದ ಕನ್ನೂರು ಸೇರಿದಂತೆ ಸುತ್ತಲಿನ ಗ್ರಾಮದ ರೋಗಿಗಳು ತುರ್ತು ಚಿಕಿತ್ಸೆ ಹಾಗೂ ಹೆರಿಗೆಗಾಗಿ ವಿಜಯಪುರವನ್ನು ಅವಲಂಬಿಸಬೇಕಾಗಿದೆ.

ಕನ್ನೂರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲಾಗಿದ್ದರೂ ಸೂಕ್ತ ವೈದ್ಯರು, ಸಿಬ್ಬಂದಿಗಳಿಲ್ಲದೆ ರೋಗಿಗಳ ನರಳುವಂತಾಗಿದೆ. ರಾತ್ರಿ ಸಮಯದಲ್ಲಿ ಯಾವುದೇ ವೈದ್ಯರು, ನರ್ಸ್‌ಗಳು ಇರದ ಕಾರಣ ನಿತ್ಯ ರೋಗಿಗಳು ಪರದಾಡುವಂತಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ಮುಖ ಮಾಡುವಂತಾಗಿದೆ. ಅದರಿಂದ ಮಹಿಳೆಯರು ಹೆರಿಗೆ ಬೇನೆ ಕಾಣುವ ಮೊದಲೆ ಆಸ್ಪತ್ರೆಗೆ ಹೋಗಿ ದಾಖಲಾಗುತ್ತಾರೆ.

***

ಜೆಜೆಎಂ ಯೋಜನೆಯಡಿ ಕನ್ನೂರು ಗ್ರಾಮಕ್ಕೆ ಕುಡಿಯುವ ನೀರಿಗೆ ನಳ ಜೋಡಣೆಗೆ ಮಾಡಲು
5 ಲಕ್ಷ ಲೀಟರ್ ಸಾಮರ್ಥ್ಯದ ನೂತನ ನೀರಿನ ಟ್ಯಾಂಕ್‌ ನಿರ್ಮಿಸಬೇಕಿತ್ತು. ಆದರೆ, ಇರುವ ಟ್ಯಾಂಕ್‌ಗಳನ್ನು ರಿಪೇರಿ ಮಾಡಲಾಗುತ್ತಿದೆ ಇದು ಸರಿಯಲ್ಲ.
–ಮಾಳಪ್ಪ ಅಥಣಿ, ಸದಸ್ಯ, ಗ್ರಾಮ ಪಂಚಾಯಿತಿ, ಕನ್ನೂರ

***

ಕುವೆಂಪು ಶತಮಾನ ಶಾಲೆಗೆ ನರೇಗಾ ಯೋಜನೆಯಡಿ 2023–24ರ ಬಜೆಟ್‌ನಲ್ಲಿ ಹೈಟೆಕ್‌ ಶೌಚಾಯಲ ನಿರ್ಮಾಣಕ್ಕೆ ಅನೂಮೊದನೆ ದೊರೆತಿದೆ. ಕಾಮಗಾರಿ ಪ್ರಾರಂಭಿಸಲಾಗುವುದು.
–ನಾಮದೇವ ಶಿಂಧೆ, ಪಿ.ಡಿ.ಒ., ಗ್ರಾಮ ಪಂಚಾಯಿತಿ, ಕನ್ನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT