ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯತ್ತ ಸಾಗಿದ ಯಲಗೂರ: ₹20 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ

ಚಂದ್ರಶೇಖರ ಕೋಳೇಕರ
Published 2 ಮಾರ್ಚ್ 2024, 5:18 IST
Last Updated 2 ಮಾರ್ಚ್ 2024, 5:18 IST
ಅಕ್ಷರ ಗಾತ್ರ

ಯಲಗೂರ(ನಿಡಗುಂದಿ): ವಿಶಾಲ ಪಾರ್ಕಿಂಗ್ ವ್ಯವಸ್ಥೆ, ದೇವಸ್ಥಾನ ಪ್ರವೇಶಕ್ಕೆ ವಿಶೇಷ ಮಾರ್ಗ, ಹಳೆ ಕಟ್ಟಡಗಳ ತೆರವು, ತಲೆಯೆತ್ತಿದ ಯಾತ್ರಿ ನಿವಾಸ, ನದಿ ಬಳಿ ಸ್ನಾನಘಟ್ಟಗಳು, ಶುದ್ಧ ಕುಡಿಯುವ ನೀರು ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಹನುಮ ನೆಲೆಸಿದ ಸುಕ್ಷೇತ್ರ ಯಲಗೂರ ಗ್ರಾಮ ಸಾಕ್ಷಿಯಾಗಿದೆ.

ಮೊದಲಿದ್ದ ಗ್ರಾಮ ಪಂಚಾಯ್ತಿ ಕಟ್ಟಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸೇರಿದಂತೆ ನಾನಾ ಶಿಥಿಲಾವಸ್ಥೆಯ ಕಟ್ಟಡಗಳನ್ನು ತೆರವುಗೊಳಿಸಿ, ಅಲ್ಲಿ ಲಭ್ಯವಾದ ವಿಶಾಲ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ₹8 ಲಕ್ಷ ವೆಚ್ಚದಲ್ಲಿ ಶಾಸಕರ ಅನುದಾನದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ದೇವಸ್ಥಾನದ ಪೂರ್ವಕ್ಕೆ ಇಲ್ಲಿಯ ಸರ್ಕಾರಿ ಕನ್ನಡ ಶಾಲೆಯ ಪಕ್ಕದಲ್ಲಿಯೇ ₹25 ಲಕ್ಷ ವೆಚ್ಚದಲ್ಲಿ ದ್ವಾರಬಾಗಿಲು ನಿರ್ಮಿಸಲಾಗುತ್ತದೆ. ಈಗ ಅಲ್ಲಿಂದ ನೇರವಾಗಿ ದೇವಸ್ಥಾನ ಪ್ರಾಂಗಣ ಸೇರುವಂತೆ ಜಾಗವನ್ನು ಸ್ವಚ್ಛಗೊಳಿಸಲಾಗಿದೆ. ದಕ್ಷಿಣ ದಿಕ್ಕಿನ ಬದಲಾಗಿ, ಮುಖ್ಯ ರಸ್ತೆಯಿಂದ ಕೇವಲ 100 ಮೀ ಅಂತರದೊಳಗೇ ನೇರವಾಗಿ ಮಂದಿರದ ಪ್ರಾಂಗಣವನ್ನು ಪ್ರವೇಶಿಸಬಹುದು.

₹40 ಲಕ್ಷ ವೆಚ್ಚದಲ್ಲಿ ನೂತನ ರಥ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ದೇವಸ್ಥಾನದ ಸಮಿತಿ ವತಿಯಿಂದ ಬೆಳ್ಳಿಯ ಚಿಕ್ಕ ರಥ ನಿರ್ಮಾಣ ಕಾರ್ಯವೂ ಅಂತಿಮ ಹಂತದಲ್ಲಿದೆ.

‘ಈ ಪ್ರಗತಿಗೆ ದೇವಸ್ಥಾನದ ಅನ್ನದಾಸೋಹ ಸಮಿತಿಯ ಅಧ್ಯಕ್ಷ ಶ್ಯಾಮ ಪಾತರದ ಮುಖಂಡತ್ವವೇ ಕಾರಣ. ಇವರಿಗೆ ದೇವಾಲಯ ಸಮಿತಿಯ ಅಧ್ಯಕ್ಷ ಅನಂತ ಓಂಕಾರ ಹಾಗೂ ಗ್ರಾಮದ ಹಲವು ಮುಖಂಡರು ಒಕ್ಕೋರಲಿನಿಂದ ಇವರ ಅಭಿವೃದ್ಧಿ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಕಾಮಗಾರಿಗೆ ತಕ್ಕಂತೆ ಶಾಸಕ ಸಿ.ಎಸ್. ನಾಡಗೌಡ ಅವರು ಭಕ್ತಾದಿಗಳ ಬೇಡಿಕೆಗೆ ಅಸ್ತು ಎಂದು ಕೋಟ್ಯಂತರ ಅನುದಾನ ಬಿಡುಗಡೆ ಮಾಡಿಸಿದ್ದಾರೆ’ ಎನ್ನುತ್ತಾರೆ ಸ್ಥಳೀಯ ಮುಖಂಡರು.

₹8.5 ಕೋಟಿ ವೆಚ್ಚದಲ್ಲಿ ರಸ್ತೆ: ರಾಷ್ಟ್ರೀಯ ಹೆದ್ದಾರಿ 50 ರ ಯಲಗೂರ ಕ್ರಾಸ್ ನಿಂದ ದೇವಸ್ಥಾನದವರೆಗೆ ₹8.5 ಕೋಟಿ ವೆಚ್ಚದಲ್ಲಿ ಕೆಬಿಜೆಎನ್ ಎಲ್ ನಿಂದ ಸಿಸಿ ರಸ್ತೆ ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ.

ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯಗಳನ್ನು ₹20 ಲಕ್ಷ ವೆಚ್ಚದಲ್ಲಿ ಕನ್ನಡ ಶಾಲೆಯ ಬಳಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯಲ್ಲಿ ಸ್ನಾನ ಘಟ್ಟ ನಿರ್ಮಾಣ ಕಾರ್ಯ ₹3 ಕೋಟಿ  ವೆಚ್ಚದಲ್ಲಿ ಆರಂಭಗೊಂಡಿದೆ. 100*100 ಅಡಿ ವಿಸ್ತಾರದ ಮತ್ತೊಂದು ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ.

‘ಈಗ ನಿರ್ಮಾಣಗೊಂಡಿರುವ ಧರ್ಮಶಾಲೆಯ (ಯಾತ್ರಿನಿವಾಸ) ಕೆಳಭಾಗವನ್ನು ‘ಪವನ ಪುತ್ರ ಮಂಗಲ ಕಾರ್ಯಾಲಯ'ವಾಗಿ ಪರಿವರ್ತಿಸಲಾಗಿದೆ. ಮೇಲ್ಭಾಗದಲ್ಲಿ 19 ಕೋಣೆಗಳು, ಅದಕ್ಕೆ ತಕ್ಕಂತೆ ಅಗತ್ಯ ಶೌಚಾಲಯಗಳಿವೆ. ಭಕ್ತಾದಿಗಳ ವಾಸಕ್ಕೆ, ಶೈಕ್ಷಣಿಕ ಪ್ರವಾಸಕ್ಕೆ ಬಂದ ಮಕ್ಕಳ ವಸತಿಗೂ ಒದಗಿಸಲಾಗುವುದು’ ಎಂದು ಗ್ರಾಮದ ಭೀಮಣ್ಣ ಅವಟಗೇರ ತಿಳಿಸಿದರು.

ಯಾತ್ರಿ ನಿವಾಸ ಭಕ್ತರಿಗೆ ತೆರೆ: ಭಕ್ತಾದಿಗಳ ಅನುಕೂಲಕ್ಕಾಗಿ ತೆಂಗಿನ ತೋಟದ ಬಳಿ ಯಲಗೂರೇಶ ದೇವಸ್ಥಾನ ಸಮಿತಿ ವತಿಯಿಂದ ಅಂದಾಜು ₹4 ಕೋಟಿ ವೆಚ್ಚದಲ್ಲಿ 30 ಕೊಠಡಿಗಳ ಯಾತ್ರಿ ನಿವಾಸ ಪೂರ್ಣಗೊಂಡಿದ್ದು, ಭಕ್ತಾದಿಗಳ ವಸತಿಗೆ  ಮಾರ್ಚ್ 2 ರಿಂದ ತೆರವುಮಾಡಲಾಗುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಅನಂತ ಓಂಕಾರ ತಿಳಿಸಿದರು.

₹6 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ದೇವಸ್ಥಾನದ ಒಳ ಆವರಣದ ಬದಲಾವಣೆಗೆ ಸಿದ್ಧತೆಗಳು ಆರಂಭಗೊಂಡಿದೆ. ಮಲೆನಾಡು ಭಾಗದ ದೇವಸ್ಥಾನಗಳ ಮಾದರಿಯಲ್ಲಿ ಹಂಚಿನಿಂದ ಅಲಂಕೃತಗೊಂಡ ಚಾವಣಿ ನಿರ್ಮಿಸಿ ಒಳ ಆವರಣವನ್ನು ಆಧುನೀಕರಣಗೊಳಿಸಲಾಗುವುದು, ಅಂದಾಜು ಅದಕ್ಕಾಗಿ ₹50 ಲಕ್ಷ  ಖರ್ಚಾಗಲಿದೆ ಎಂದು ಅನಂತ ತಿಳಿಸಿದರು.
 

ಯಲಗೂರೇಶ
ಯಲಗೂರೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT