ಭಾನುವಾರ, ಆಗಸ್ಟ್ 14, 2022
20 °C

ವಿಜಯಪುರ: ‘ತುರ್ತು ಪರಿಸ್ಥಿತಿ ದೇಶದ ಕರಾಳ ಅಧ್ಯಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ಸ್ವಾರ್ಥ ಸಾಧನೆಗಾಗಿ ದೇಶಕ್ಕೆ ಕರಾಳವಾದ ತುರ್ತು ಪರಿಸ್ಥಿತಿ ಹೇರಿದ್ದರು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ ಹೇಳಿದರು.

ಬಿಜೆಪಿ ನಗರ ಮಂಡಳ ವತಿಯಿಂದ ಕಾಳಿಕಾದೇವಿ ದೇವಾಲಯದ ಮಂಗಲ ಕಾರ್ಯಾಲಯದಲ್ಲಿ ನಡೆದ ‘ತುರ್ತು ಪರಿಸ್ಥಿತಿಯ ಕರಾಳ ದಿನಗಳು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುರ್ತು ಪರಿಸ್ಥಿತಿ ಹೇರಿಕೆ ದೇಶದ ಇತಿಹಾಸದಲ್ಲಿಯೇ ಒಂದು ಕರಾಳ ಅಧ್ಯಾಯ, ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದಾಹದಿಂದಲೇ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿ ದೇಶದ ವ್ಯವಸ್ಥೆಗೆ ಪೆಟ್ಟು ನೀಡಿದರು. ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದರು, ದೇಶದ ನಾಗರಿಕರನ್ನು ಮೂಲಭೂತ ಹಕ್ಕುಗಳಿಂದ ವಂಚಿತವಾಗಿಸಿದರು, ಅನೇಕ ಹೋರಾಟಗಾರರನ್ನು ಜೈಲಿಗಟ್ಟಿದರು, ಮಾಧ್ಯಮಗಳಿಗೆ ಕಿರುಕುಳ ನೀಡಿದರು. ಈ ಎಲ್ಲ ಘಟನೆಗಳಿಗೆ ತುರ್ತು ಪರಿಸ್ಥಿತಿ ಕಾರಣವಾಯಿತು ಎಂದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ದೇಶದ ಪ್ರಜಾಪ್ರಭುತ್ವ ಸಂಪ್ರದಾಯಗಳ ಮೇಲೆ ದಾಳಿ ಮಾಡಲು ಸಂವಿಧಾನವನ್ನು ದುರುಪಯೋಗಪಡಿಸಿಕೊಂಡ ಕಾಂಗ್ರೆಸ್ ಆಳ್ವಿಕೆ ಅತ್ಯಂತ ಕೆಟ್ಟ ಅಧ್ಯಾಯ, ಅಂದಿನ ಕರಾಳ ವ್ಯವಸ್ಥೆಯನ್ನು ಪರಿಚಯಿಸಿದ ಕಾಂಗ್ರೆಸ್ ಇತಿಹಾಸವನ್ನು ಇಂದಿನ ಯುವಪೀಳಿಗೆ ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯತೆ ಇದೆ ಎಂದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ 1975ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಹಲವು ನಾಯಕರನ್ನು ಜೈಲಿಗೆ ಹಾಕಿದರು. ಅಧಿಕಾರ ದಾಹಕ್ಕಾಗಿ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ ಹಿರಿಯ ನಾಯಕರ ಹೋರಾಟವನ್ನು ನಾವು ಗೌರವಿಸಬೇಕು ಎಂದು ಹೇಳಿದರು.

ನಗರ ಮಂಡಳ ಅಧ್ಯಕ್ಷ ಮಳುಗೌಡ ಪಾಟೀಲ, ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ರವಿಕಾಂತ ಬಗಲಿ, ಛಾಯಾ ಮಸಿಯನವರ, ರಜನಿ ಸಂಬಣ್ಣಿ, ಭೀಮಾಶಂಕರ ಹದನೂರ, ವಿಠ್ಠಲ ನಡುವಿನಕೇರಿ, ಪಾಪುಸಿಂಗ್ ರಜಪೂತ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.