ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಪಾಲಿಕೆ ಚುನಾವಣೆ ಯತ್ನಾಳಗೆ ಬೇಕಾಗಿಲ್ಲ: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

Last Updated 24 ಜುಲೈ 2021, 15:02 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆಗೆಚುನಾವಣೆ ನಡೆಯದೇ ಎರಡು ವರ್ಷವಾದರೂ ಸ್ಥಳೀಯ ಶಾಸಕ ಬಸವನಗೌಡ ಪಾಟೀಲ ಸಮಸ್ಯೆ ಪರಿಹರಿಸಲು ಗಮನ ನೀಡುತ್ತಿಲ್ಲ. ಚುನಾವಣೆ ನಡೆಯದಿದ್ದರೇ ತಮಗೆ ಅನುಕೂಲ ಎಂಬ ಮನೋಭಾವ ಹೊಂದಿದ್ದಾರೆ. ಇದರಿಂದ ನಗರದ ಅಭಿವೃದ್ಧಿಗೆ ತೀವ್ರ ಹಿನ್ನೆಡೆಯಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಮಹಾನಗರ ಪಾಲಿಕೆ ದಿಕ್ಕು ತಪ್ಪಿ ಹೋಗಿದೆ. ನಗರದ ಜನರು ಸಮಸ್ಯೆ ಹೇಳಿಕೊಳ್ಳಲು ಶಾಸಕರೂ ಕೈಗೆ ಸಿಗುತ್ತಿಲ್ಲ. ಶಾಸಕರು ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಮಗ್ನವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಸ್ತೆ ದುರಸ್ತಿ, ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೂ ಶಾಸಕರ ಶಿಫಾರಸು ಪತ್ರ ಬೇಕಾಗಿದೆ. ಪಾಲಿಕೆ ಮೇಲೆ ಶಾಸಕರು ಸಂಪೂರ್ಣ ನಿಯಂತ್ರಣ ಇಟ್ಟುಕೊಂಡಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದನೆ ಇಲ್ಲವಾಗಿದೆ ಎಂದು ಆರೋಪಿಸಿದರು.

ಮೀಸಲಾತಿ, ವಾರ್ಡ್‌ ವಿಂಗಡಣೆ ಪ್ರಶ್ನಿಸಿ ಕೋರ್ಟ್‌ಗೆ ಹೋಗಿರುವವರನ್ನು ಕರೆದು ಚರ್ಚಿಸಿ, ಪ್ರಕರಣ ಇತ್ಯರ್ಥಕ್ಕೆ ಆದ್ಯತೆ ನೀಡಬೇಕಾಗಿದೆ. ಆದರೆ, ಈ ಕೆಲಸ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನಿಂದಲೇ ನಗರದ ಅಭಿವೃದ್ಧಿ ಆಗುತ್ತಿದೆ. ಹಿಂದಿನ ಯಾರೊಬ್ಬರೂ ಅಭಿವೃದ್ಧಿ ಕಾರ್ಯ ಮಾಡಿರಲಿಲ್ಲ ಎಂಬಂತೆ ಶಾಸಕರು ಬಿಂಬಿಸಿಕೊಳ್ಳುತ್ತಿರುವುದು ಖಂಡನೀಯ. ನಾನು ಸೇರಿದಂತೆ ನನಗಿಂತ ಹಿಂದೆ ಶಾಸಕರಾದವರು, ಸಚಿವರಾದವರು ಸಾಕಷ್ಟು ಕೆಲಸ ಮಾಡಿದ್ದಾರೆ ಎಂಬುದುನ್ನು ಯಾರೂ ಮರೆಯಬಾರದು ಎಂದರು.

ನಗರದಲ್ಲಿಕೋವಿಡ್‌ ಉಚಿತ ಲಸಿಕೆ ಅಭಿಯಾನದ ನಡೆಸುತ್ತಿರುವ ಶಾಸಕರು ತಮ್ಮ ಸ್ವಂತ ಖರ್ಚಿನಿಂದ ಮಾಡುತ್ತಿರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಸೌಜನ್ಯಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪನವರ ಚಿತ್ರ ಹಾಕಿಕೊಳ್ಳದೇ ಕೇವಲ ಪ್ರಧಾನಿ ಚಿತ್ರವನ್ನು ಬ್ಯಾನರ್‌ನಲ್ಲಿ ಹಾಕಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಅಭಿವೃದ್ದಿ ಕಾರ್ಯಗಳು ನಡೆದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಬಿಜೆಪಿ ಮುಖಂಡ ಭೀಮಾಶಂಕರ ಹದನೂರ ಅವರಿಗೆ ವಕೀಲರ ಮೂಲಕ ನೋಟಿಸ್‌ ನೀಡಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಬಾಯಿಗೆ ಬಂದಂತೆ ದಿನಬೆಳಗಾದರೆ ಸುಳ್ಳು ಹೇಳಿಕೆ ನೀಡುವ ಇವರಿಗೆ ಪ್ರತಿದಿನ ಒಂದೊಂದು ನೋಟಿಸ್‌, ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದರು.

ಭ್ರಷ್ಟಾಚಾರ ನಡೆದಿದೆ ಎಂದಾಕ್ಷಣ ನೀವು ಗಾಬರಿಯಾಗಿದ್ದು ಏಕೆ? ಜನ ನಿಮ್ಮನ್ನು ಗಮನಿಸುತ್ತಿದ್ದಾರೆ. ಈಗ ಮಾತನಾಡುವುದಿಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಮುಂದೆ ನಿಮ್ಮ ನಡೆ, ನುಡಿ, ಕೆಲಸ ಕಾರ್ಯಗಳ ಬಗ್ಗೆ ಮಾಧ್ಯಮಗಳ ಎದುರು ಬಿಚ್ಚಿಡುತ್ತೇವೆ. ಎಚ್ಚರದಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಮೋಸ ಹೋದಬಿಎಸ್‌ವೈ

ವಿಜಯಪುರ: ಯತ್ನಾಳ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದು ಸಾಕಷ್ಟು ಮುಖಂಡರು ಸಲಹೆ ಕೊಟ್ಟರೂಯಡಿಯೂರಪ್ಪ ಪರಿಗಣಿಸಿರಲಿಲ್ಲ. ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ವಿಜಯಪುರ ಮಾತ್ರವಲ್ಲ, ಅಕ್ಕಪಕ್ಕದ ಜಿಲ್ಲೆಯಲ್ಲೂ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂಬ ಭ್ರಮೆಯಿಂದ ಸೇರ್ಪಡೆ ಮಾಡಿಕೊಂಡರು. ಇದೀಗ ಅವರಿಂದಲೇ ಮೋಸ ಹೋದರು ಎಂದುಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ದೂರಿದರು.

***

ಪಕ್ಷದ ಹಿರಿಯರು, ಮುಖಂಡರ ಬಗ್ಗೆ ಬಾಯಿಗೆ ಬಂದಂತೆ ಕೀಳು ಪದ ಪ್ರಯೋಗಿಸಿ ಟೀಕಿಸುವುದು, ಬೈಯ್ಯುವುದು ಬಿಡಿ. ಇದು ನಿಮಗೆ ಶೋಭೆ ತರುವುದಿಲ್ಲ

–ಅಪ್ಪು ಪಟ್ಟಣ ಶೆಟ್ಟಿ,ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT