ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲಾ ಪಂಚಾಯ್ತಿ ಕ್ಷೇತ್ರ 50ಕ್ಕೆ ಏರಿಕೆ

ರಾಜ್ಯ ಚುನಾವಣಾ ಆಯೋಗದಿಂದ ಕ್ಷೇತ್ರ ಪುನರ್ವಿಂಗಡಣೆಗೆ ನಿರ್ದೇಶನ; ಚುನಾವಣೆಗೆ ಸಿದ್ಧತೆ
Last Updated 12 ಫೆಬ್ರುವರಿ 2021, 14:57 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಸಾರ್ವತ್ರಿಕ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಜನಸಂಖ್ಯೆ ಆಧರಿಸಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಲು ಮಾರ್ಗಸೂಚಿ ಹೊರಡಿಸಿದೆ.

ವಿಜಯಪುರ ಜಿಲ್ಲೆಯಲ್ಲಿ ಹಾಲಿ 42 ಜಿಲ್ಲಾ ಪಂಚಾಯ್ತಿ ಹಾಗೂ 159 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿದ್ದು, ಸದ್ಯದ ಜನಸಂಖ್ಯೆ ಆಧರಿಸಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ 50ಕ್ಕೆ ಏರಿಕೆಯಾಗಲಿದೆ. ಆದರೆ, ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಸಂಖ್ಯೆ 149ಕ್ಕೆ ಇಳಿಕೆಯಾಗಲಿದೆ.

2016ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿಜಯಪುರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ ಮತ್ತು ಸಿಂದಗಿ ಸೇರಿದಂತೆ ಐದು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 42 ಜಿಲ್ಲಾ ಪಂಚಾಯ್ತಿ ಕ್ಷೇತ್ರ ಮತ್ತು 159 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿದ್ದವು.

ಬಬಲೇಶ್ವರ, ತಿಕೋಟಾ, ನಿಡಗುಂದಿ, ಕೊಲ್ಹಾರ, ತಾಳಿಕೋಟೆ, ಚಡಚಣ, ಆಲಮೇಲ ಮತ್ತು ದೇವರ ಹಿಪ್ಪರಗಿಹೊಸದಾಗಿ ತಾಲ್ಲೂಕುಗಳು ರಚನೆಯಾದ ಬಳಿಕ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು ಹರಿದುಹಂಚಿಹೋಗಿವೆ.

ಮಾರ್ಗದರ್ಶನ:ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿ.ಪಂ. ಮತ್ತು ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ ಸಂಬಂಧ ಆಯಾ ತಹಶೀಲ್ದಾರ್‌ ಮತ್ತು ತಾಲ್ಲೂಕು ಪಂಚಾಯ್ತಿ ಇಒಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 35 ಸಾವಿರದಿಂದ 42 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯ್ತಿ ಕ್ಷೇತ್ರ ರಚನೆ ಮಾಡಲಾಗುತ್ತಿದೆ. ಹೆಚ್ಚು ಜನಸಂಖ್ಯೆ ಇರುವ ಹಳ್ಳಿ ಜಿಲ್ಲಾ ಪಂಚಾಯ್ತಿ ಕೇಂದ್ರವಾಗಲಿದೆ ಎಂದರು.

ಹಾಗೆಯೇ, ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ತಾಲ್ಲೂಕುಗಳಲ್ಲಿ 11 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ರಚನೆ ಮಾಡಲು ನಿರ್ದೇಶನವಿದೆ. ಈ ಅಂಕಿಸಂಖ್ಯೆಗೆ ಅನುಗುಣವಾಗಿ 6 ಸಾವಿರದಿಂದ 7 ಸಾವಿರ ಜನಸಂಖ್ಯೆಗೆ ಒಂದೊಂದು ತಾ.ಪಂ. ಕ್ಷೇತ್ರ ರಚನೆಯಾಗಲಿದೆ ಎಂದರು.

ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ತಾಲ್ಲೂಕುಗಳಲ್ಲಿ 12 ಸಾವಿರದಿಂದ 15 ಸಾವಿರ ಜನಸಂಖ್ಯೆಗೆ ಒಂದರಂತೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ರಚನೆ ಮಾಡಲಾಗುವುದು ಎಂದು ತಿಳಿಸಿದರು.

ಆಯಾ ತಾಲ್ಲೂಕುವಾರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಪ್ರತ್ಯೇಕ ನಕ್ಷೆಗಳನ್ನು ಸಿದ್ಧಪಡಿಸಲಾಗುವುದು. ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಗಡಿಯನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗುವುದು ಎಂದರು.

ಅದೇ ರೀತಿ ತಾಲ್ಲೂಕುವಾರು ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಪ್ರತ್ಯೇಕ ನಕ್ಷೆಗಳನ್ನು ಸಿದ್ಧಪಡಿಸಿ, ಗಡಿಗಳನ್ನು ನೀಲಿ ಬಣ್ಣದಲ್ಲಿ ಗುರುತಿಸಲಾಗುವುದು ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವ, ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿರುವ ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದರು.

ತಾಲ್ಲೂಕಿನಲ್ಲಿರುವ ಗ್ರಾಮ ಪಂಚಾಯ್ತಿಗಳನ್ನು ಒಡೆಯದೇ ಪೂರ್ಣ ಗ್ರಾಮ ಪಂಚಾಯ್ತಿಗಳನ್ನು ಒಟ್ಟುಗೂಡಿಸಿ ಜಿಲ್ಲಾ ಪಂಚಾಯ್ತಿಯ ಚುನಾವಣಾ ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಮಾರ್ಗದರ್ಶನ ನೀಡಿದೆ ಎಂದರು.

ಗ್ರಾಮ ಪಂಚಾಯ್ತಿಗಳನ್ನು ಒಟ್ಟುಗೂಡಿಸುವ ಸಂದರ್ಭದಲ್ಲಿ ಅಕ್ಕಪಕ್ಕದ ಗ್ರಾಮ ಪಂಚಾಯ್ತಿಗಳನ್ನು ಸೇರಿಸಲಾಗುವುದು. ಗ್ರಾಮ ಪಂಚಾಯ್ತಿಗಳನ್ನು ಸೇರಿಸುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಒಂದಕ್ಕೊಂದು ಭೌಗೋಳಿಕವಾಗಿ ಹೊಂದಿಕೊಂಡಂತೆ ಇರುವ ಹಾಗೆ ನೋಡಕೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT