ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮೃದ್ಧಿ’ ಹಾಲು ಪೂರೈಕೆಗೆ ‘ವಿಮುಲ್’ ಕೊಕ್!

ನಷ್ಟದ ಹೊರೆ; ಗ್ರಾಹಕರಿಗೆ ಜೇಬಿಗೆ ಬರೆ
ಶಂಕರ ಈ.ಹೆಬ್ಬಾಳ
Published 17 ಮಾರ್ಚ್ 2024, 5:01 IST
Last Updated 17 ಮಾರ್ಚ್ 2024, 5:01 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಹಲವು ವರ್ಷಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ಬ್ರಾಂಡ್ ಆಗಿದ್ದ ನಂದಿನಿ ‘ಸಮೃದ್ಧಿ’ ಹಾಲಿನ ಪೂರೈಕೆ ಇನ್ನು ಮುಂದೆ ಅವಳಿ ಜಿಲ್ಲೆಯಲ್ಲಿ ಪೂರೈಕೆ ಇರುವುದಿಲ್ಲ.

ನಷ್ಟದ ಕಾರಣವನ್ನು ನೀಡಿ ಮಾರ್ಚ್ 16ರಿಂದಲೇ ‘ಸಮೃದ್ಧಿ’ ಹಾಲಿನ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇದೀಗ ಆ ಜಾಗಕ್ಕೆ ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಕೆಎಂಎಫ್ ಬಿಡುಗಡೆ ಮಾಡಿದೆ. ಆದರೆ, ಎಮ್ಮೆ ಹಾಲಿನ ದರ ಹೆಚ್ಚಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಯತ್ನ ಕೆಎಂಎಫ್ ಮಾಡಿದೆ.

ನಂದಿನಿ ‘ಸಮೃದ್ಧಿ’ ಹಾಲು ಲೀಟರ್‌ಗೆ ₹54 ಇತ್ತು. ನಂದಿನಿ ‘ಶುಭಂ’ ಲೀಟರ್‌ಗೆ ₹50 ಇತ್ತು. ನಂದಿನಿ ‘ಸಮೃದ್ಧಿ’ ಹಾಲು ಗಟ್ಟಿ ಹಾಗೂ ರುಚಿಯಲ್ಲೂ ಉತ್ತಮವಾದ ಹಾಲು ಎಂಬ ಕಾರಣದಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಅದನ್ನೇ ಖರೀದಿಸುತ್ತಿದ್ದರು. ಆದರೆ, ಇದೀಗ ಕೆಎಂಎಫ್ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ನಂದಿನಿ ಎಮ್ಮೆ ಹಾಲಿನ ದರ ಲೀಟರ್‌ಗೆ ₹70 ಇದ್ದು, ಗ್ರಾಹಕರು ಖರೀದಿ ಮಾಡುವುದಕ್ಕೆ ಹಿಂದೆ ಮುಂದೆ ನೋಡುವಂತಾಗಿದೆ.

ಏಕಾಏಕಿ ಕೈಗೊಂಡಿರುವ ಈ ನಿರ್ಧಾರದಿಂದ ಮುದ್ದೇಬಿಹಾಳ ಪಟ್ಟಣವೊಂದರಲ್ಲೇ ಅಂದಾಜು ಒಂದು ಸಾವಿರ ಲೀಟರ್ ಮಾರಾಟ ಕುಸಿದಿದೆ ಎಂದು ಹಾಲಿನ ವ್ಯಾಪಾರಿಗಳು ಹೇಳಿದರು.

ಗುಣಮಟ್ಟದ ಹಾಲನ್ನು ದಿಢೀರ್ ಪೂರೈಕೆ ನಿಲ್ಲಿಸಿರುವುದರಿಂದ ಗ್ರಾಹಕರು ಬೇರೆ ಕಂಪನಿಗಳಿಗೆ ಮೊರೆ ಹೋಗುವುದರಿಂದ ಕೆಎಂಎಫ್‌ನ ಆದಾಯದಲ್ಲಿ ಕುಸಿತ ಕಂಡರೂ ಅಚ್ಚರಿಪಡಬೇಕಾಗಿಲ್ಲ ಎಂಬ ಮಾತುಗಳು ಹಾಲಿನ ವ್ಯಾಪಾರಿಗಳಿಂದ ಕೇಳಿ ಬಂದಿವೆ.
 
‘ನಮಗೆ ಕಮಿಷನ್ ಹೆಚ್ಚಳ ಮಾಡಿ ಎಮ್ಮೆ ಹಾಲು ಮಾರಾಟಕ್ಕೆ ಕೊಡುವ ಬದಲು ಸಮೃದ್ಧಿ ಹಾಲಿನ ದರವನ್ನೇ ಹೆಚ್ಚಿಸಿ ಕೊಟ್ಟಿದ್ದರೆ ಗ್ರಾಹಕರಿಗೆ ದರ ತುಸು ಹೆಚ್ಚಾಗಿದೆ ಎಂದು ಹೇಳಿ ಹೇಗೋ ಮಾರುಕಟ್ಟೆಯನ್ನು ನಿಭಾಯಿಸುತ್ತಿದ್ದೇವು. ಈಗ ಸಮೃದ್ಧಿ ಹಾಲು ಇಲ್ಲದಿರುವ ಕಾರಣ ಬೇರೆ ಕಂಪನಿಗಳ ಹಾಲಿಗೆ ಗ್ರಾಹಕರು ಸ್ಥಳಾಂತರವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮೊದಲಿನಂತೆ ದರ ತುಸು ಹೆಚ್ಚಿಸಿ ಸಮೃದ್ಧಿ ಹಾಲನ್ನೇ ಮಾರುಕಟ್ಟೆಗೆ ನೀಡಿದರೆ ಏಜೆಂಟರು ಹಾಲಿನ ವ್ಯಾಪಾರ ನಂಬಿಕೊಂಡಿರುವವರು ಬದುಕಲು ಸಾಧ್ಯವಾಗುತ್ತದೆ’ ಎಂದು ಹಾಲಿನ ವ್ಯಾಪಾರಿ ರಾಮಣ್ಣ ಹೇಳಿದರು.

ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲಿ ಸಮೃದ್ಧಿ ಹಾಲು ದಿನಕ್ಕೆ 30 ಸಾವಿರ ಲೀಟರ್ ಪೂರೈಕೆ ಆಗುತ್ತಿತ್ತು. ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಅಂದಾಜು 10 ಸಾವಿರ ಲೀಟರ್ ಮಾರಾಟವಾಗಿರುವ ದಾಖಲೆ ಇದೆ. ಕೆಎಂಎಫ್‌ನಿಂದಲೇ ನಮಗೆ ಹಾಲಿನ ನಷ್ಟ, ಲಾಭದ ಕುರಿತು ಮಾಹಿತಿ ಪಡೆಯಲಾಗುತ್ತದೆ. ಸಮೃದ್ಧಿ ಹಾಲಿನ ಮಾರಾಟ ಹಿಂದಕ್ಕೆ ಪಡೆದುಕೊಳ್ಳಲು ತಿಳಿಸಿದ್ದರಿಂದ ಪೂರೈಕೆ ನಿಲ್ಲಿಸಿದ್ದೇವೆ. ದಕ್ಷಿಣದ ಜಿಲ್ಲೆಗಳಲ್ಲಿ ಹಾಗೂ ಕಬುರ್ಗಿ ಜಿಲ್ಲೆಯಲ್ಲಿ ಕಳೆದ ತಿಂಗಳಲ್ಲಿ ಸಮೃದ್ಧಿ ಹಾಲು ಮಾರಾಟ ಬಂದ್ ಆಗಿದೆ ಎಂದು  ವಿಜಯಪುರ –ಬಾಗಲಕೋಟೆ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪೂರ್ಯ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.
  

ಸಮೃದ್ಧಿ ಹಾಲಿನ ಮಾರಾಟದಿಂದ ಕೆಎಂಎಫ್‌ಗೆ ₹4 ನಷ್ಟವಾಗುತ್ತಿತ್ತು. ಅಲ್ಲದೆ ರೈತರಿಗೆ ಕೊಡುವ ಪ್ರೋತ್ಸಾಹಧನಕ್ಕೂ ಕೊರತೆ ಆಗಿತ್ತು. ಹೀಗಾಗಿ ಸಮೃದ್ಧಿ ಹಾಲಿನ ಬದಲಾಗಿ ನಂದಿನಿ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಕೆಎಂಎಫ್ ಸೂಚಿಸಿತ್ತು

ಪೂರ್ಯ ನಾಯಕ ಎಂ.ಡಿ.ವಿಮುಲ್ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT